ಸ್ಟಾರ್ಟಪ್ ಸೇರಿದಂತೆ ಬಿಸ್ನೆಸ್‌ಗೆ ಕೈ ಹಾಕಿದ ಅನುಭವ ಇರುವವರಿಗೆಲ್ಲ ಅದನ್ನು ಬೆಳೆಸಿ ಉಳಿಸಿಕೊಂಡು ಹೋಗುವ ಕಷ್ಟದ ಅರಿವಿರಬಹುದು. ಬಹುತೇಕ ಕಂಪನಿಗಳು ಆರಂಭವಾದ ಒಂದೆರಡು ವರ್ಷಗಳಲ್ಲೇ ಮಗುಚಿಕೊಳ್ಳುವುದನ್ನು ನೋಡಿದರೆ ಕಂಪನಿ ಬೆಳೆಸುವುದು ಸುಲಭದ ಮಾತಲ್ಲ ಎಂಬುದು ಅರ್ಥವಾದೀತು. ಅಂಥದರಲ್ಲಿ ದೇಶದ ಈ ಕೆಲ ಕಂಪನಿಗಳು ಸುಮಾರು 2 ಶತಮಾನಗಳಿಂದ ತಮ್ಮ ನಿರ್ದಿಷ್ಟ ವಲಯದಲ್ಲಿ ಹೆಸರನ್ನು ಕಾಪಾಡಿಕೊಂಡು ಬಂದಿರುವುದಲ್ಲದೇ, ಇಂದಿಗೂ ಹೊಸ ಕಂಪನಿಗಳಿಗೆ ಕೂಡಾ ಸ್ಪರ್ಧೆಯೊಡ್ಡುವ ಮಟ್ಟಿಗೆ ಸಮರ್ಥವಾಗಿವೆ ಎಂದರೆ ಅದೇನು ಕಡಿಮೆ ಸಾಧನೆಯಲ್ಲ. 

ಜೆಸೋಪ್ ಆ್ಯಂಡ್ ಕಂಪನಿ

ಆರಂಭ: 1788

ರೂಯಿಯಾ ಗ್ರೂಪ್‌ಗೆ ಸೇರಿದ ಜೆಸೋಪ್ ಆ್ಯಂಡ್ ಕಂಪನಿ ಕೋಲ್ಕತ್ತಾ ಮೂಲದ್ದು. ಫಾಲ್ಕಾನ್ ಟೈರ್ಸ್ ಹಾಗೂ ಡುನ್ಲೋಪ್ ಇಂಡಿಯಾ ಕೂಡಾ ಇದೇ ಗ್ರೂಪ್‌ಗೆ ಸೇರಿದ್ದು. ದೇಶದ ಮೊತ್ತಮೊದಲ ಎಂಜಿನಿಯರಿಂಗ್ ಕಂಪನಿ ಇದಾಗಿದ್ದು, ಇಂಜಿನಿಯರಿಂಗ್ ಹಾಗೂ ಮೂಲಸೌಲಭ್ಯ ವಲಯದಲ್ಲಿ ಕಂಪನಿಗೆ 224 ವರ್ಷಗಳ ಪರಂಪರೆಯಿದೆ. 19ನೇ ಶತಮಾನದಲ್ಲಿ ದೇಶದ ಮೊದಲ ಕಬ್ಬಿಣದ ಸೇತುವೆ ನಿರ್ಮಿಸಿದ್ದರಿಂದ ಹಿಡಿದು ಮೊದಲ ರೋಡ್ ರೋಲರ್, ಐರನ್ ಸ್ಟೀಮರ್, ಹೌರಾ ಬ್ರಿಡ್ಜ್, ಮೊದಲ ಇಎಂಯು ಕೋಚ್ ಸೇರಿದಂತೆ ಹಲವಾರು ಪ್ರಥಮಗಳಿಗೆ ಕಂಪನಿ ಕಾರಣವಾಗಿದೆ. 

ಆನ್‌ಲೈನ್ ಬ್ಯಾಂಕ್ ಆಯ್ಕೆ ಮಾಡುವಾಗ ಈ ವಿಷಯಗಳನ್ನು ಗಮನಿಸಿ!

ಬೆನೆಟ್, ಕೋಲ್ಮನ್ ಆ್ಯಂಡ್ ಕೋ.

ಆರಂಭ: 1838

ಟೈಮ್ಸ್ ಗ್ರೂಪ್ ಎಂದೇ ಜನಪ್ರಿಯವಾಗಿರುವ ಬೆನೆಟ್, ಕೋಲ್ಮನ್ ಆ್ಯಂಡ್ ಕೋ. ಕಂಪನಿಯು ದೇಶದ ಅತಿ ದೊಡ್ಡ ಮಾಸ್ ಮೀಡಿಯಾ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ. ಹತ್ತಿರತ್ತಿರ 2 ಶತಮಾನಗಳೇ ಆಗುತ್ತ ಬಂದರೂ ಕಂಪನಿಯು ಇನ್ನೂ ಕೂಡಾ ಕುಟುಂಬ ಉದ್ಯಮವಾಗಿಯೇ ಉಳಿದು ಬಂದಿದ್ದು, ತಲೆಮಾರಿನಿಂದ ತಲೆಮಾರಿಗೆ ಸಾಹು ಜೈನ್ ಕುಟುಂಬದ ಕುಡಿಗಳೇ ಟೈಮ್ಸ್ ಗ್ರೂಪ್‌ನ ಬಹುದೊಡ್ಡ ಸ್ಟಾಕ್ ಹೊಂದಿವೆ. ಟೈಮ್ಸ್ ಗ್ರೂಪ್‌ನಲ್ಲಿ ಸಧ್ಯ 11,000 ಉದ್ಯೋಗಿಗಳಿದ್ದು, ಆದಾಯವು 1.5 ಶತಕೋಟಿ ಡಾಲರ್ ಮೀರಿದೆ. 

ಬಾಂಬೆ ಡೈಯಿಂಗ್

ಆರಂಭ: 1879

ಸಂಸ್ಥೆಯು ಹಡಗು ನಿರ್ಮಾಣಕ್ಕಾಗಿ ಆರಂಭವಾಯಿತು. ಇಂಗ್ಲೆಂಡ್‌ನಿಂದ ಹೊರಗೆ ಬ್ರಿಟಿಷ್ ನೌಕಾದಳದ ಮೊದಲ ಹಡಗು ನಿರ್ಮಾಣವಾಗಿದ್ದಾದರೆ ಅದರ ನಿರ್ಮಾಣದ ಕ್ರೆಡಿಟ್ ಈ ಸಂಸ್ಥೆಯದ್ದು. ತನ್ನ 250 ವರ್ಷಗಳ ಇತಿಹಾಸದಲ್ಲಿ ಹಲವಾರು ವೈವಿಧ್ಯಮಯ ಸಾಧನೆಗಳನ್ನು ಕಂಪನಿ ದಾಖಲಿಸಿದೆ. ಆದರೆ, 1879ರಲ್ಲಿ ನೌರೋಸ್ಜೀ ವಾಡಿಯಾ ಬಾಂಬೆ ಡೈಯಿಂಗ್ ಮೂಲಕ ಬಟ್ಟೆಯ ನಿರ್ಮಾಣಕ್ಕೆ ಕೈ ಹಾಕಿದ ಬಳಿಕ ವಾಡಿಯಾ ಗ್ರೂಪ್ ಹಾಗೂ ಸಂಸ್ಥೆಯ ಹೆಸರು ದೇಶಾದ್ಯಂತ ಜನಪ್ರಿಯವಾಯಿತು. ಸಧ್ಯ ಬಾಂಬೆ ಡೈಯಿಂಗ್ ದೇಶದ ಅತಿ ದೊಡ್ಡ ಟೆಕ್ಸ್‌ಟೈಲ್ಸ್ ನಿರ್ಮಾಣ ಸಂಸ್ಥೆ. 

ಡಾಬರ್

ಆರಂಭ: 1884

ಡಾಬರ್ ಇಂಡಿಯಾ ಲಿಮಿಟೆಡ್ ದೇಶದ ಪ್ರಮುಖ ಕಂಪನಿಯಾಗಿದ್ದು, ಇದರ ಆದಾಯ ಸುಮಾರು 7.73 ಕೋಟಿ ಇದ್ದು, ಮಾರುಕಟ್ಟೆ ಬಂಡವಾಳೀಕರಣ 5 ಶತಕೋಟಿ ಡಾಲರ್‌ನಷ್ಟಿದೆ. ಸುಮಾರು 250 ಹರ್ಬಲ್ ಹಾಗೂ ಆಯುರ್ವೇದಿಕ್ ಉತ್ಪನ್ನಗಳೊಂದಿಗೆ ಈ ವಲಯದಲ್ಲಿ ವಿಶ್ವನಾಯಕನಾಗಿ ಡಾಬರ್ ಗುರುತಿಸಿಕೊಂಡಿದೆ. ಇದರ ಫ್ಲ್ಯಾಗ್‌ಶಿಪ್ ಬ್ರ್ಯಾಂಡ್‌ಗಳಾಗಿ- ಹಾಜ್ಮೋಲಾ, ವಾಟಿಕಾ, ರಿಯಲ್, ಫೆಮ್ ಕೂಡಾ ಜನಪ್ರಿಯವಾಗಿವೆ. 

ಕಿರ್ಲೋಸ್ಕರ್ ಬ್ರದರ್ಸ್

ಆರಂಭ: 1888

ಪಂಪ್ ತಯಾರಿಕಾ ಕಂಪನಿಯಾಗಿರುವ ಕಿರ್ಲೋಸ್ಕರ್ ಬ್ರದರ್ಸ್ ಲಿಮಿಟೆಡ್(ಕೆಬಿಎಲ್) ನೀರಿನ ನಿರ್ವಹಣೆ ವ್ಯವಸ್ಥೆಯ ತಯಾರಿಕೆ ಹಾಗೂ ಇಂಜಿನಿಯರಿಂಗ್‌ನಲ್ಲಿ ನುರಿತ ಎನಿಸಿಕೊಂಡಿದೆ. 2.1 ಶತಕೋಟಿ ಡಾಲರ್ ಬೆಲೆ ಬಾಳುವ ಕಿರ್ಲೋಸ್ಕರ್ ಗ್ರೂಪ್‌ನ ಫ್ಲ್ಯಾಗ್‌ಶಿಪ್ ಕಂಪನಿಯಾಗಿ ಕೆಬಿಎಲ್ ಮಾರ್ಕೆಟ್ ಲೀಡರ್ ಆಗಿದೆ. ನೀರಿನ ಪೂರೈಕೆ, ಪವರ್ ಪ್ಲ್ಯಾಂಟ್ಸ್, ನೀರಾವರಿ, ತೈಲ ಹಾಗೂ ಅನಿಲ, ನೌಕಾವಲಯ ಹಾಗೂ ರಕ್ಷಣಾ ವಲಯಗಳ ಬೃಹತ್ ಮೂಲಸೌಲಭ್ಯಕ್ಕೆ ಸಂಪೂರ್ಣ ಫ್ಲೂಯಿಡ್ ಮ್ಯಾನೇಜ್‌ಮೆಂಟ್ ಸಲ್ಯೂಶನ್ಸ್ ನೀಡುವಲ್ಲಿ ಸಮರ್ಥ ಸಂಸ್ಥೆ ಎನಿಸಿಕೊಂಡಿದೆ. 

ಬ್ರಿಟಾನಿಯಾ

ಆರಂಭ: 1892

ಕೋಲ್ಕತಾ ಮೂಲದ ಆಹಾರ ಉತ್ಪನ್ನ ತಯಾರಿಕಾ ಕಂಪನಿಯಾಗಿರುವ ಬ್ರಿಟಾನಿಯಾ ಭಾರತದಾದ್ಯಂತ ಮನೆಮಾತಾದ ಹೆಸರು. ಬ್ರಿಟಾನಿಯಾ ಹಾಗೂ ಟೈಗರ್ ಬ್ರ್ಯಾಂಡ್‌ನಲ್ಲಿ ಬಿಸ್ಕೇಟ್‌ಗಳು, ಬ್ರೆಡ್, ರಸ್ಕ್, ಕೇಕ್ ಹಾಗೂ ಡೈರಿ ಉತ್ಪನ್ನಗಳ ತಯಾರಿಕೆ ಹಾಗೂ ಮಾರಾಟದಲ್ಲಿ ತೊಡಗಿಕೊಂಡಿರುವ ಕಂಪನಿಯು ಈ ವಲಯದಲ್ಲಿ ಮಾರುಕಟ್ಟೆಯ ಶೇ.38ರಷ್ಟು ಶೇರ್ ಹೊಂದಿದೆ. 

ಪಂಜಾಬ್ ನ್ಯಾಷನಲ್ ಬ್ಯಾಂಕ್

ಆರಂಭ: 1894

ಮೇ 19, 1894ರಂದು ರಿಜಿಸ್ಟರ್ ಆದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಲಾಹೋರ್‌ನ ಅನಾರ್ಕಲಿ ಬಜಾರ್‌ನಲ್ಲಿದ್ದ ಕಚೇರಿಯಿಂದ ಕಾರ್ಯಾರಂಭ ಮಾಡಿತ್ತು. ಇದು ಕೇವಲ ಭಾರತೀಯ ಕ್ಯಾಪಿಟಲ್ ಇಟ್ಟುಕೊಂಡು ಆರಂಭವಾದ ಮೊದಲ ಭಾರತೀಯ ಬ್ಯಾಂಕ್ ಆಗಿದೆ. ಇಂದು 764 ನಗರಗಳಲ್ಲಿ ಸುಮಾರು 5800 ಶಾಖೆಗಳನ್ನು ಹಾಗೂ 6000 ಎಟಿಎಂಗಳನ್ನು ಬ್ಯಾಂಕ್ ಹೊಂದಿದೆ. ಸುಮಾರು 80 ದಶಲಕ್ಷ ಗ್ರಾಹಕರನ್ನು ಬ್ಯಾಂಕ್ ಹೊಂದಿದೆ. 

ಗೋದ್ರೆಜ್ ಆ್ಯಂಡ್ ಬಾಯ್ಸ್

ಆರಂಭ: 1897

ಗೋದ್ರೆಜ್ ಕಂಪನಿ ಹೆಸರು ಕೇಳದವರಾರು? ಗೋದ್ರೆಜ್ ಕುಟುಂಬದ ಒಡೆತನದಲ್ಲಿರುವ ಸಂಸ್ಥೆಯು ಗುಣಮಟ್ಟದ ಬೀಗಗಳ ತಯಾರಿಕೆಯಿಂದ ಆರಂಭವಾಯಿತು. ಈಗ ಸಂಸ್ಥೆಯು ರಿಯಲ್ ಎಸ್ಟೇಟ್, ಗ್ರಾಹಕ ಉತ್ಪನ್ನಗಳು, ಇಂಡಸ್ಟ್ರಿಯಲ್ ಇಂಜಿನಿಯರಿಂಗ್, ಫರ್ನಿಚರ್, ಅಪ್ಲೈಯನ್ಸಸ್, ಭದ್ರತೆ ಹಾಗೂ ಕೃಷಿ ಉತ್ಪನ್ನ ವಲಯಗಳಲ್ಲಿ ಕೂಡಾ ತನ್ನ ಉತ್ಪನ್ನಗಳಿಂದಾಗಿ ಹೆಸರು ಮಾಡಿದೆ. 
ಇವಲ್ಲದೆ, ಟಾಟಾ ಸ್ಟೀಲ್, ಟಿವಿಎಸ್ ಮುಂತಾದ ಕಂಪನಿಗಳು ಕೂಡಾ ಶತಮಾನದಾಚೆಯು ಹೊಸ ಹೊಸ ಕಂಪನಿಗಳಿಗೆ ಸ್ಪರ್ಧೆಯೊಡ್ಡುತ್ತಾ ತಮ್ಮ ಬ್ರ್ಯಾಂಡನ್ನು ಕಾಪಾಡಿಕೊಂಡಿವೆ.