ಅಬ್ಬಬ್ಬಾ! : 10 ಗ್ರಾಂ ಚಿನ್ನಕ್ಕೆ ಈಗ 71 ಸಾವಿರ: ದಾಖಲೆ ಪ್ರಮಾಣದಲ್ಲಿ ಏರಿಕೆ
ಮದುವೆ ಸೀಸನ್ ಆರಂಭದಲ್ಲೇ ಬಂಗಾರದ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಮೊದಲ ಬಾರಿ 10 ಗ್ರಾಂ ಚಿನ್ನದ (24 ಕ್ಯಾರೆಟ್ ಗೋಲ್ಡ್) ದರ ₹ 71 ಸಾವಿರ ದಾಟಿದೆ. ಹೀಗಾಗಿ ಖರೀದಿ ಪ್ರಮಾಣವನ್ನು ಕಡಿಮೆಗೊಳಿಸುವ ಅನಿವಾರ್ಯತೆ ಗ್ರಾಹಕರಿಗೆ ಎದುರಾಗಿದೆ.
ಬೆಂಗಳೂರು (ಏ.07): ಮದುವೆ ಸೀಸನ್ ಆರಂಭದಲ್ಲೇ ಬಂಗಾರದ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಮೊದಲ ಬಾರಿ 10 ಗ್ರಾಂ ಚಿನ್ನದ (24 ಕ್ಯಾರೆಟ್ ಗೋಲ್ಡ್) ದರ ₹ 71 ಸಾವಿರ ದಾಟಿದೆ. ಹೀಗಾಗಿ ಖರೀದಿ ಪ್ರಮಾಣವನ್ನು ಕಡಿಮೆಗೊಳಿಸುವ ಅನಿವಾರ್ಯತೆ ಗ್ರಾಹಕರಿಗೆ ಎದುರಾಗಿದೆ. ಕಳೆದ ಹತ್ತು ದಿನಗಳಲ್ಲಿ ಬಂಗಾರದ ಬೆಲೆ ₹ 3500 - ₹ 4000 ಹೆಚ್ಚಳವಾಗಿದ್ದು, ಈ ನಡುವೆ ಎರಡು ಬಾರಿ ಮಾತ್ರ ಅಲ್ಪ ಇಳಿಕೆ ಕಂಡಿತ್ತು. ಯುಗಾದಿಗೆ ಹಬ್ಬಕ್ಕೆ ಒಂದೆರಡು ದಿನ ಬಾಕಿ ಇರುವಾಗ ಬಂಗಾರ ದರ ಜನತೆಯ ತಲೆ ತಿರುಗಿಸುತ್ತಿದೆ. ಮದುವೆಗಾಗಿ ಜ್ಯುವೆಲ್ಲರಿ ಖರೀದಿಗೆ ಹೋದವರು ಹೌಹಾರುತ್ತಿದ್ದಾರೆ.
ಬೆಂಗಳೂರಲ್ಲಿ ಶುಕ್ರವಾರ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 64,150 ಇತ್ತು. ಶನಿವಾರ ₹65,350 ತಲುಪಿದೆ. ಅದೇ ರೀತಿ 24 ಕ್ಯಾರೆಟ್ ನ 10 ಗ್ರಾಂ ಬಂಗಾರದ ಬೆಲೆ ಶುಕ್ರವಾರ ₹ 69,980 ಇತ್ತು. ಶನಿವಾರ 71,290 ದಾಟಿತು. ಶುಕ್ರವಾರ ಒಂದು ಕೇಜಿಗೆ ₹ 80300 ಇದ್ದ ಬೆಳ್ಳಿ ಶನಿವಾರ ₹ 82,400 ಗೆ ಏರಿಕೆಯಾಗಿದೆ. ಅಲ್ಲದೆ, ಚಿನ್ನ ಹಾಗೂ ಬೆಳ್ಳಿ ಆಭರಣದ ಬೆಲೆ ಮುಂದಿನ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾದರೂ ಅಚ್ಚರಿಯಿಲ್ಲ ಎಂದು ಕರ್ನಾಟಕ ರಾಜ್ಯ ಜ್ಯುವೆಲ್ಲರ್ಸ್ ಫೆಡರೇಷನ್ ಅಭಿಪ್ರಾಯ ತಿಳಿಸಿದೆ.
ಆನೆಗೊಂದಿ ರಾಮಾಯಣದ ಕಿಷ್ಕಿಂಧೆ: ವಿಜಯನಗರ ಕಾಲದ 8 ಸಾಲುಗಳ ಶಾಸನ ಪತ್ತೆ
ವರ್ಷದ ಆರಂಭದಲ್ಲಿ 22 ಕ್ಯಾರೆಟ್ ಚಿನ್ನದ ದರವು ಪ್ರತಿ 10 ಗ್ರಾಂಗೆ ₹ 58,000 ಇತ್ತು. ಪ್ರಸ್ತುತ 65 ಸಾವಿರ ರು. ದಾಟಿದೆ. ₹ 7 ಸಾವಿರ ಏರಿಕೆಯಾಗಿದೆ. ಇನ್ನು, 24 ಕ್ಯಾರೆಟ್ ಚಿನ್ನ 10 ಗ್ರಾಂಗೆ ₹ 63,270 ಇತ್ತು. ಸದ್ಯ 71 ರು. ಮೀರಿದೆ ಅಂದರೆ, 7 ಸಾವಿರ ರುಪಾಯಿ ಏರಿಕೆಯಾಗಿದೆ. ಇದು ಹೂಡಿಕೆ ಮಾಡಿದವರಿಗೆ ಉತ್ತಮ ಲಾಭ ತಂದುಕೊಟ್ಟಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
ಸಮಾರಂಭ ಹಮ್ಮಿಕೊಂಡವರಿಗೆ ಶಾಕ್: ಬೆಲೆ ಏರಿಕೆಯಿಂದ ಚಿನ್ನದಲ್ಲಿ ಹೂಡಿಕೆ ಮಾಡಿದವರಿಗೆ ಬಂಪರ್ ಸಿಕ್ಕಿದ್ದರೆ, ಮದುವೆ, ಮುಂಜಿ, ನಿಶ್ಚಿತಾರ್ಥ, ಗೃಹಪ್ರವೇಶ ಸೇರಿದಂತೆ ಶುಭ ಕಾರ್ಯ ನಡೆಸುವವರಿಗೆ ನಿರಾಸೆ ತಂದೊಡ್ಡಿದೆ. ಗ್ರಾಹಕರು ಹಿಂದೆ ಉದ್ದೇಶಿಸಿದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರೆ. ಮುಂಗಡ ಬುಕ್ಕಿಂಗ್ ಮಾಡಿದ್ದವರು ಹೆಚ್ಚಿನ ಬೆಲೆ ಏರಿಕೆ ಸಾಧ್ಯತೆ ಕಾರಣಕ್ಕೆ ಬೇಗ ಖರೀದಿಸುತ್ತಿದ್ದಾರೆ ಎಂದು ಚಿನ್ನಾಭರಣ ವರ್ತಕರು ತಿಳಿಸಿದರು.
ಕಾರಣವೇನು?: ಭಾರತದಲ್ಲಿ ಪ್ರಮುಖವಾಗಿ ಚಿನ್ನದ ಉತ್ಪಾದನಾ ಕೇಂದ್ರಗಳು ಇಲ್ಲ. ಎಲ್ಲವನ್ನೂ ಕೂಡ ಹೊರ ದೇಶದಿಂದ ಆಮದು ಮಾಡಿಕೊಳ್ಳಬೇಕಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಟ್ರೇಡಿಂಗ್ ಡಾಲರ್ಸ್ ಮೂಲಕ ಆಗುತ್ತದೆ. ಜಾಗತಿಕ ಮಟ್ಟದಲ್ಲಿ ಯಾವುದೇ ಪ್ರಮುಖ ಬೆಳವಣಿಗೆ ಅಂದರೆ ಸದ್ಯಕ್ಕೆ ಯುದ್ಧ ನಡೆಯುತ್ತಿರುವ ಸಮಯದಲ್ಲಿ ಹೆಚ್ಚಿನ ದೇಶಗಳು ಚಿನ್ನದ ಮೇಲೆ ಅಧಿಕ ಸಂಖ್ಯೆಯಲ್ಲಿ ಹೂಡಿಕೆ ಮಾಡುತ್ತಿವೆ. ಚಿನ್ನದ ಮೇಲಿನ ಹೂಡಿಕೆಗೆ ಡಿಮ್ಯಾಂಡ್ ಹೆಚ್ಚಾಗುತ್ತಿದ್ದಂತೆ ಸಹಜವಾಗಿಯೇ ದರ ಕೂಡ ಏರಿಕೆಯಾಗುತ್ತದೆ ಎಂದು ವರ್ತಕರ ಸಂಘ ಹೇಳಿದೆ.
ಬೇಸಿಗೆಯ ರಜೆಯಲ್ಲೂ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ: ಬರಪೀಡಿತ ಶಾಲೆಗಳಿಗೆ ಅನ್ವಯ
ಇದೇ ಮೊದಲ ಬಾರಿ ಬಂಗಾರದ ಬೆಲೆ ₹ 71 ಸಾವಿರ ದಾಟಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂಗಾರದ ಮೇಲಿನ ಹೂಡಿಕೆ ಹೆಚ್ಚಾಗಿರುವುದು ಬೆಲೆ ಏರಿಕೆಗೆ ಕಾರಣ. ಗ್ರಾಹಕರು ಚಿನ್ನ ಖರೀದಿ ಪ್ರಮಾಣವನ್ನು ಕಡಿಮೆ ಮಾಡಿರುವುದು ಕಂಡುಬರುತ್ತಿದೆ.
-ಡಾ.ಬಿ.ರಾಮಾಚಾರ್ಯ, ಕಾರ್ಯದರ್ಶಿ, ಕರ್ನಾಟಕ ರಾಜ್ಯ ಜ್ಯೂವೆಲ್ಲರ್ಸ್ ಫೆಡರೇಷನ್