ಜಾಗತಿಕ ಮಟ್ಟದಲ್ಲೂ ಈಗ UPI ಹವಾ; ಯುಪಿಐ ಪಾವತಿ ಸ್ವೀಕರಿಸುವ ರಾಷ್ಟ್ರಗಳ ಪಟ್ಟಿ ಪ್ರಕಟಿಸಿದ ಸರ್ಕಾರ
ಭಾರತದ ಯುಪಿಐ ಪಾವತಿ ವ್ಯವಸ್ಥೆ ನಿನ್ನೆಯಷ್ಟೇ ಶ್ರೀಲಂಕಾ ಹಾಗೂ ಮಾರಿಷಸ್ ನಲ್ಲಿ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಯುಪಿಐ ಪಾವತಿಯನ್ನು ಸ್ವೀಕರಿಸುವ 7 ರಾಷ್ಟ್ರಗಳ ಪಟ್ಟಿ ಬಿಡುಗಡೆ ಮಾಡಿದೆ.
ನವದೆಹಲಿ (ಫೆ.13): ಭಾರತದ ಯುನಿಫೈಡ್ ಪಾವತಿಗಳ ಇಂಟರ್ ಫೇಸ್ (ಯುಪಿಐ) ಪಾವತಿಯನ್ನು ಶ್ರೀಲಂಕಾ ಹಾಗೂ ಮಾರಿಷಸ್ ನಲ್ಲಿ ನಿನ್ನೆಯಷ್ಟೇ (ಫೆ.13) ಬಿಡುಗಡೆಗೊಳಿಸಲಾಗಿದೆ. ಇದಾದ ಬಳಿಕ ಭಾರತ ಸರ್ಕಾರ ಯುಪಿಐ ಪಾವತಿಯನ್ನು ಸ್ವೀಕರಿಸುವ 7 ರಾಷ್ಟ್ರಗಳ ಪಟ್ಟಿ ಬಿಡುಗಡೆ ಮಾಡಿದೆ. ವಿಶ್ವದ ಭೂಪಟವನ್ನು ಬಿಡುಗಡೆಗೊಳಿಸಿ ಅದರಲ್ಲಿ ಭಾರತೀಯರು ಪಾವತಿಗೆ ಯುಪಿಐ ಬಳಸಬಹುದಾದ ರಾಷ್ಟ್ರಗಳನ್ನು ಹೈಲೈಟ್ ಮಾಡಿದೆ. ಎಕ್ಸ್ (ಈ ಹಿಂದಿನ ಟ್ವಿಟ್ಟರ್) MyGovIndia ಖಾತೆಯಲ್ಲಿ ಸರ್ಕಾರ ಈ ಮಾಹಿತಿ ಹಂಚಿಕೊಂಡಿದೆ. ಇದರ ಅನ್ವಯ ಫ್ರಾನ್ಸ್, ಯುಎಇ, ಮಾರಿಷಸ್, ಶ್ರೀಲಂಕಾ, ಸಿಂಗಾಪುರ, ಭೂತಾನ್ ಹಾಗೂ ನೇಪಾಳ ಭಾರತ ಯುಪಿಐ ಪಾವತಿ ಸ್ವೀಕರಿಸುವ ರಾಷ್ಟ್ರಗಳಾಗಿವೆ.
''ಯುಪಿಐ ಜಾಗತಿಕವಾಗಿದೆ! ಶ್ರೀಲಂಕಾ ಹಾಗೂ ಮಾರಿಷಸ್ ನಲ್ಲಿ ಬಿಡುಗಡೆಯಾಗುವ ಮೂಲಕ ಭಾರತದ ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ ಅಂತಾರಾಷ್ಟ್ರೀಯ ಮಟ್ಟ ತಲುಪಿದೆ! ಉದಾಹರಣೆಗೆ ಒನ್ ಸ್ಟಾಪ್ ಪೇಮೆಂಟ್ ಇಂಟರ್ ಫೇಸ್ 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್' ಎಂಬುದನ್ನು ತೋರಿಸಿದೆ'' ಎಂದು ಸರ್ಕಾರ ಟ್ವೀಟ್ ಮಾಡಿದೆ.
ಯುಪಿಐಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನದಲ್ಲಿ ಭಾರತ ಸಕ್ರಿಯವಾಗಿದೆ. ಕಳೆದ ವರ್ಷ ಭಾರತ ಯುಪಿಐ ವ್ಯವಸ್ಥೆಯನ್ನು G20 ಸಭೆಗಳಲ್ಲಿ ಪ್ರದರ್ಶಿಸುವ ಮೂಲಕ ಅತಿಥಿಗಳು ಈ ತಕ್ಷಣದ ವಹಿವಾಟುಗಳನ್ನು ತಮ್ಮ ಮೊಬೈಲ್ ನಲ್ಲಿ ಮಾಡಿ ಅನುಭವ ಪಡೆಯಲು ಅವಕಾಶ ಕಲ್ಪಿಸಿತ್ತು.
ಭಾರತ ಸೋಮವಾರ ಶ್ರೀಲಂಕಾ ಹಾಗೂ ಮಾರಿಷಸ್ ನಲ್ಲಿ ಯುಪಿಐ ಸೇವೆಗಳನ್ನು ಪ್ರಾರಂಭಿಸಿದೆ. ಈ ಕ್ರಮವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ, 'ಐತಿಹಾಸಿಕ ಸಂಬಂಧಗಳನ್ನು ಆಧುನಿಕ ತಂತ್ರಜ್ಞಾನಗಳೊಂದಿಗೆ ಸಂಪರ್ಕಿಸುವ ಪ್ರಯತ್ನ' ಎಂದು ಬಣ್ಣಿಸಿದ್ದಾರೆ. ಇದಕ್ಕೂ ಮುನ್ನ ಅಂದರೆ ಫೆಬ್ರವರಿ 2ರಂದು ಪ್ಯಾರಿಸ್ ಐಫೆಲ್ ಟವರ್ ನಲ್ಲಿ ಯುಪಿಐ ಪಾವತಿ ವ್ಯವಸ್ಥೆಯನ್ನು ಪರಿಚಯಿಸಲಾಗಿತ್ತು. ಭಾರತದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಹಾಗೂ ಫ್ರಾನ್ಸ್‌ನ ಲೈರಾ ಕಂಪನಿ ಒಪ್ಪಂದ ಮಾಡಿಕೊಂಡಿದ್ದು, ಇದರಿಂದಾಗಿ ಭಾರತೀಯರು ಟಿಕೆಟ್ ಖರೀದಿ ಮಾಡುವಾಗ ತಮ್ಮ ಯುಪಿಐ ಐಡಿ ಅಥವ ಕ್ಯೂಆರ್ ಕೋಡ್ ಸ್ಯಾನ್ ಮಾಡುವ ಮೂಲಕ ಐಫೆಲ್ ಟವರ್ ಟಿಕೆಟ್ ಬುಕ್ ಮಾಡಬಹುದಾಗಿದೆ.
ಭೂತನ್ ಭಾರತದ ಮೊದಲ ಯುಪಿಐ ಪಾವತಿ ವ್ಯವಸ್ಥೆ ಬಳಸಿದ ರಾಷ್ಟ್ರವಾಗಿದೆ. ಭೀಮ್ ಆಪ್ ಮೂಲಕ ಭೂತಾನ್ ನಲ್ಲಿ ಮೊದಲ ಬಾರಿಗೆ ಯುಪಿಐ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿತ್ತು. ಯುಪಿಐ ಡಿಜಿಟಲ್ ಪಾವತಿ ಆಪ್ ಅನ್ನು 2021ರ ಜುಲೈ 13ರಂದು ವರ್ಚುವಲಿ ಬಿಡುಗಡೆ ಮಾಡಲಾಗಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಭೂತಾನ್ ಸಚಿವ ಲಯೋಪೋ ನಂಗೇ ಶೆರಿಂಗ್ ಈ ಸೇವೆಗೆ ಜಂಟಿಯಾಗಿ ಚಾಲನೆ ನೀಡಿದ್ದರು. ಕಳೆದ ವರ್ಷದ ವರದಿಯೊಂದರ ಪ್ರಕಾರ ಜಪಾನ್ ಕೂಡ ಭಾರತದ ಯುಪಿಐ ಪಾವತಿ ವ್ಯವಸ್ಥೆಗೆ ಸೇರ್ಪಡೆಯಾಗಲಿದೆ ಹಾಗೂ ಡಿಜಿಟಲ್ ಗುರುತು ವ್ಯವಸ್ಥೆ ಉತ್ತೇಜನಕ್ಕೆ ನೆರವು ನೀಡಲಿದೆ ಎಂದು ಹೇಳಲಾಗಿತ್ತು.
ಇನ್ನು ಯುಪಿಐ ಮೂಲಕ ಫ್ಯಾರಿಸ್‌ನ ಐಫೆಲ್ ಟವರ್ ಟಕೆಟ್ ಬುಕ್ ಮಾಡಿ
ಯುಪಿಐ ವಹಿವಾಟಿನ ಮಿತಿ ಹೆಚ್ಚಳ
ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಪಾವತಿಸಲು ಯುಪಿಐ ವಹಿವಾಟಿನ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) 2023ರ ಡಿಸೆಂಬರ್ ನಲ್ಲಿ 1ಲಕ್ಷ ರೂ.ನಿಂದ 5ಲಕ್ಷ ರೂ.ಗೆ ಏರಿಕೆ ಮಾಡಿದೆ. ಈ ಹೆಚ್ಚಳದಿಂದ ಈಗ ಆಸ್ಪತ್ರೆ ಹಾಗೂ ಶೈಕ್ಷಣಿಕ ವೆಚ್ಚಗಳಿಗೆ ಯುಪಿಐ ಮೂಲಕ ಒಂದು ದಿನಕ್ಕೆ 5ಲಕ್ಷ ರೂ. ತನಕ ಪಾವತಿಸಬಹುದು. ಈ ಹಿಂದೆ ಒಂದು ದಿನಕ್ಕೆ1ಲಕ್ಷ ರೂ. ತನಕ ಮಾತ್ರ ಯುಪಿಐ ಪಾವತಿಗೆ ಅವಕಾಶವಿತ್ತು. ಹಾಗೆಯೇ ಯುಪಿಐ ಲೈಟ್ ವಹಿವಾಟು ಮಿತಿಯನ್ನು ಆರ್ ಬಿಐ 200ರೂ.ನಿಂದ 500ರೂ.ಗೆ ಹೆಚ್ಚಳ ಮಾಡಿದೆ. ಯುಪಿಐ ಲೈಟ್ ಪೇಟಿಎಂ, ಭೀಮ್ ಆಪ್, ಗೂಗಲ್ ಪೇ ಸೇರಿದಂತೆ ವಿವಿಧ ಪಾವತಿ ಆಪ್ ಗಳಲ್ಲಿ ಲಭ್ಯವಿದೆ.