*   ದೊಡ್ಡಬಳ್ಳಾಪುರದಿಂದ 2500 ಕಿ.ಮೀ ದೂರದ*   ಇದೇ ಮೊದಲ ಬಾರಿಗೆ ಬೆಂಗಳೂರು ವ್ಯಾಪ್ತಿಯಿಂದ ಉತ್ತರ ಭಾರತಕ್ಕೆ ರೈಲಲ್ಲಿ ಸಾಗಣೆ*   ಹಿಮಾಚಲ ಪ್ರದೇಶ ರಾಜ್ಯ ಸಾರಿಗೆ ಸಂಸ್ಥೆಗೆ ಅಶೋಕ ಲೇಲ್ಯಾಂಡಲ್ಲಿ ತಯಾರಾದ ಬಸ್‌ 

ಬೆಂಗಳೂರು(ಮೇ.21): ಬೆಂಗಳೂರು ರೈಲ್ವೆ ವಿಭಾಗವು ಇದೇ ಮೊದಲ ಬಾರಿ ಉತ್ತರ ಭಾರತಕ್ಕೆ ಗೂಡ್ಸ್‌ ರೈಲಿನಲ್ಲಿ ಸಂಚಾರಿ ಬಸ್‌ಗಳನ್ನು ಸಾಗಿಸಿದ್ದು, ಈ ಮೂಲಕ ಒಂದು ಕೋಟಿ ರುಪಾಯಿ ಆದಾಯ ಗಳಿಸುತ್ತಿದೆ.

ಅಶೋಕ್‌ ಲೈಲ್ಯಾಂಡ್‌ನ ಉತ್ಪಾದನಾ ಘಟಕವು ದೊಡ್ಡಬಳ್ಳಾಪುರದಲ್ಲಿದ್ದು, ಇಲ್ಲಿ ಹಿಮಾಚಲ ಪ್ರದೇಶ ರಾಜ್ಯ ಸಾರಿಗೆ ಸಂಸ್ಥೆಯ 128 ಬಸ್‌ಗಳು ತಯಾರಾಗುತ್ತಿವೆ. ಈ ಬಸ್‌ಗಳನ್ನು ದೊಡ್ಡಬಳ್ಳಾಪುರ ರೈಲು ನಿಲ್ದಾಣದಿಂದ ಗೂಡ್‌್ಸ ರೈಲಿನ ಮೂಲಕ ಚಂಢೀಗಢಕ್ಕೆ ಸಾಗಣೆ ಮಾಡಲಾಗುತ್ತಿದೆ. ಈ ಸಂಬಂಧ ಬೆಂಗಳೂರು ರೈಲ್ವೆ ವಿಭಾಗವು ಅಶೋಕ್‌ ಲೈಲ್ಯಾಂಡ್‌ ಮತ್ತು ಹಿಮಾಚಲ ಪ್ರದೇಶ ರಸ್ತೆ ಸಾರಿಗೆ ನಿಗಮದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ಸೇರಿ 9 ರೈಲುಗಳ ವೇಗ ಹೆಚ್ಚಳ

ಮಂಗಳವಾರ ಮತ್ತು ಶುಕ್ರವಾರ ತಲಾ 32 ಸಂಚಾರಿ ಬಸ್‌ಗಳನ್ನು ಹೊತ್ತ ಗೂಡ್‌್ಸ ರೈಲುಗಳು ತೆರಳಿದವು. ಮುಂದಿನ ಒಂದು ವಾರದಲ್ಲಿ ತಲಾ 32 ಬಸ್‌ಗಳನ್ನು ಹೊತ್ತ ಎರಡು ರೈಲುಗಳು ಚಂಢೀಗಢಕ್ಕೆ ತೆರಳಲಿದೆ. ಒಟ್ಟಾರೆ 128 ಬಸ್‌ಗಳ ಸಾಗಣಿಯಿಂದ ಸುಮಾರು .1 ಕೋಟಿಗೂ ಆದಾಯ ಬರಲಿದೆ. ಈ ಹಿಂದೆ ಕಾರ್‌ಗಳು, ಮಿನಿ ಟ್ರಕ್‌ಗಳನ್ನು ರೈಲಿನಲ್ಲಿ ಸಾಗಿಸಲಾಗುತ್ತಿತ್ತು. ಸದ್ಯ ಬೆಂಗಳೂರು ವಿಭಾಗವು ಇದೇ ಮೊದಲ ಬಾರಿಗೆ ಸರಕು ಸಾಗಣೆ ರೈಲಿನಲ್ಲಿ ಬಸ್‌ಗಳನ್ನು ಸಾಗಣೆ ಮಾಡಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ದೊಡ್ಡಬಳ್ಳಾಪುರದಲ್ಲಿ ಉತ್ಪಾದನೆಯಾಗುವ ಬಸ್‌ಗಳನ್ನು ದೊಡ್ಡ ದೊಡ್ಡ ಟ್ರಕ್‌ಗಳ ಮೂಲಕ ಉತ್ತರ ಭಾರತದ ರಾಜ್ಯಗಳಿಗೆ ಸಾಗಣೆ ಮಾಡಲಾಗುತ್ತಿತ್ತು. ಸಮಯದ ಜತೆಗೆ ಭಾರಿ ಪ್ರಮಾಣದ ಡೀಸೆಲ್‌ ಖರ್ಚಾಗುತ್ತಿತ್ತು. ಜತೆಗೆ ವೆಚ್ಚವು ಅಧಿಕವಾಗುತ್ತಿತ್ತು. 2,500 ಕಿ.ಮೀ. ದೂರದಲ್ಲಿರುವ ಚಂಡೀಗಢಕ್ಕೆ 5ರಿಂದ 6 ದಿನಗಳಲ್ಲಿ ಈ ಬಸ್‌ಗಳು ರೈಲಿನ ಮೂಲಕ ತಲುಪಲಿವೆ. ಇದರಿಂದ ವಾಯು ಮಾಲಿನ್ಯ ತಗ್ಗಿದಂತಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.