ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ಸೇರಿ 9 ರೈಲುಗಳ ವೇಗ ಹೆಚ್ಚಳ
* ರಾಣಿ ಚೆನ್ನಮ್ಮ, ಕಣ್ಣೂರು, ಕಾರವಾರ ಎಕ್ಸ್‌ಪ್ರೆಸ್ ಸೇರಿ ಹಲವು ರೈಲಿನ ವೇಳೆ ಬದಲು
* ಜೂ.1ರಿಂದ ಹೊಸ ವೇಳಾಪಟ್ಟಿ ಅನ್ವಯ
* ಮಿರಜ್‌ನಿಂದ ಯಶವಂತಪುರ ನಡುವೆ ವೇಳಾಪಟ್ಟಿಯಲ್ಲಿ ವ್ಯತ್ಯವಾಗಿಲ್ಲ
ಬೆಂಗಳೂರು(ಮೇ.19): ನೈಋುತ್ಯ ರೈಲ್ವೆಯು ಒಂಬತ್ತು ಪ್ರಮುಖ ರೈಲುಗಳ ಓಡಾಟ ವೇಗ ಹೆಚ್ಚಿಸಿದ್ದು, ವೇಳಾಪಟ್ಟಿಯಲ್ಲಿ ತುಸು ಬದಲಾವಣೆಯಾಗಿವೆ. ಪ್ರಮುಖವಾಗಿ ಕಾರವಾರ, ಮಂಗಳೂರು, ಕಣ್ಣೂರು, ನಿಜಾಮುದ್ದೀನ್, ರಾಣಿ ಚೆನ್ನಮ್ಮ, ಚಂಡೀಘಡ ಎಕ್ಸ್‌ಪ್ರೆಸ್‌ಗಳ ಓಡಾಟ ಆರಂಭಿಕ ನಿಲ್ದಾಣದಿಂದ ಹೊರಡುವ ಸಮಯ ಮತ್ತು ವಿವಿಧ ನಿಲ್ದಾಣ ತಲುಪುವ ಸಮಯವು 30 ರಿಂದ 40 ನಿಮಿಷವರೆಗೂ ಹೆಚ್ಚು ಕಡಿಮೆಯಾಗಿದೆ. ನೂತನ ವೇಳಾಪಟ್ಟಿಯು ಜೂನ್ 1 ರಿಂದ ಅನ್ವಯವಾಗಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ಕೆಎಸ್‌ಆರ್ ಬೆಂಗಳೂರು- ಕಾರವಾರ ಡೈಲಿ ಎಕ್ಸಪ್ರೆಸ್ (ರೈಲು ಸಂಖ್ಯೆ 16595) ಸಂಜೆ 6.40ರ ಬದಲಾಗಿ 6.50ಕ್ಕೆ ಬೆಂಗಳೂರು ನಿಲ್ದಾಣದಿಂದ ಹೊರಡಲಿದೆ. ಕಾರವಾರದಿಂದ ಕೆಎಸ್‌ಆರ್ ಬೆಂಗಳೂರು ಸಂಚರಿಸುವ ಡೈಲಿ ಎಕ್ಸಪ್ರೆಸ್ (16596) ಬೆಳಿಗ್ಗೆ 7.29 ಬದಲಾಗಿ 7.15ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ. ಕೆಎಸ್‌ಆರ್ ಬೆಂಗಳೂರು-ಕಣ್ಣೂರು ಡೈಲಿ ಎಕ್ಸಪ್ರೆಸ್ (16511) ಬೆಂಗಳೂರಿನಿಂದ 9.35ಕ್ಕೆ ಹೊರಡಲಿದೆ. ಕಣ್ಣೂರು- ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸಪ್ರೆಸ್ (ರೈಲು ಸಂಖ್ಯೆ 16512) ಬೆಳಿಗ್ಗೆ 6.50ರ ಬದಲಾಗಿ 6.30ಕ್ಕೆ ಬೆಂಗಳೂರಿಗೆ ಆಗಮಿಸಲಿದೆ.
ರೈಲ್ವೇ ನಿಯಮಗಳಲ್ಲಿ ಪ್ರಮುಖ ಬದಲಾವಣೆ, ರಾತ್ರಿ ಪ್ರಯಾಣಿಕರಿಗೆ ಮಹತ್ವದ ಮಾಹಿತಿ!
ಮಿರಜ್-ಕೆಎಸ್‌ಆರ್ ಬೆಂಗಳೂರು ನಡುವೆ ಸಂಚರಿಸುವ ರಾಣಿಚೆನ್ನಮ್ಮ ರೈಲು ಬೆಳಿಗ್ಗೆ 6.30ರ ಬದಲಾಗಿ 6.15ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣ ತಲುಪಲಿದೆ. ಮಿರಜ್‌ನಿಂದ ಯಶವಂತಪುರ ನಡುವೆ ವೇಳಾಪಟ್ಟಿಯಲ್ಲಿ ವ್ಯತ್ಯವಾಗಿಲ್ಲ.
ವಿಜಯಪುರ-ಮಂಗಳೂರು ಡೈಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 07377) ವಿಜಯಪುರದಿಂದ 20 ನಿಮಿಷ ತಡವಾಗಿ ಹೊರಡಲಿದೆ. ವಿಜಯಪುರದಿಂದ ಸಂಜೆ 6.35ಕ್ಕೆ ಹೊರಟು ಹುಬ್ಬಳ್ಳಿವರೆಗೂ ಬರುವ ವಿವಿಧ ನಿಲ್ದಾಣಗಳಲ್ಲಿ 20 ರಿಂದ 25 ನಿಮಿಷ ತಡವಾಗಿ ಸಂಚರಿಸಲಿದೆ. ಹುಬ್ಬಳ್ಳಿಯಿಂದ ಮಂಗಳೂರಿನವರೆಗೂ ವೇಳಾಪಟ್ಟಿವ್ಯತ್ಯಾಸವಾಗಿಲ್ಲ.
ಅರಸಿಕೆರೆ-ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ (ರೈಲು ಸಂಖ್ಯೆ 07367) ಬೆಳಿಗ್ಗೆ 5.10 ಬದಲಾಗಿ 5.30ಕ್ಕೆ ಅರಸಿಕೆರೆಯಿಂದ ಹೊರಡಲಿದೆ. ಮಾರ್ಗಮಧ್ಯೆ ಹಾವೇರಿವರೆಗೂ ಬರುವ ವಿವಿಧ ನಿಲ್ದಾಣಗಳಲ್ಲಿ 15 ನಿಮಿಷ ತಡವಾಗಿ ಸಂಚರಿಸಿ ಮಧ್ಯಾಹ್ನ 12.15 ಹುಬ್ಬಳ್ಳಿ ತಲುಪಲಿದೆ.
ರೈಲಿನ ಎಮರ್ಜನ್ಸಿ ಚೈನ್ ಎಳೆದ ಪ್ರಯಾಣಿಕ: ಜೀವ ಪಣಕ್ಕಿಟ್ಟು ಟ್ರೈನ್ ರಿಸ್ಟಾರ್ಟ್ ಮಾಡಿದ ಲೋಕೋ ಪೈಲಟ್
ಪ್ರತಿ ಗುರುವಾರ ಸಂಚರಿಸುವ ಯಶವಂತಪುರ-ನಿಜಾಮುದ್ದೀನ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12629), ಪ್ರತಿ ಬುಧವಾರ ಸಂಚರಿಸುವ ಯಶವಂತಪುರ -ಚಂಡೀಘಡ ಎಕ್ಸಪ್ರೆಸ್ (ರೈಲು ಸಂಖ್ಯೆ 22685) ಈ ಎರಡೂ ರೈಲುಗಳು ಯಶವಂತಪುರದಿಂದ ಮಧ್ನಾಹ್ನ 1.55 ಬದಲಾಗಿ 2.30ಕ್ಕೆ ಹೊರಡಲಿದ್ದು, ಹಾವೇರಿವರೆಗೂ ಪ್ರತಿ ನಿಲ್ದಾಣದಲ್ಲಿ ಸದ್ಯದ ವೇಳಾಪಟ್ಟಿಗಿಂತ 20 ನಿಮಿಷ ತಡವಾಗಿ ಸಂಚರಿಸಲಿವೆ.
ಪ್ರತಿ ಶನಿವಾರ ಸಂಚರಿಸುವ ಹುಬ್ಬಳ್ಳಿ-ಯಶವಂತಪುರ ಎಕ್ಸಪ್ರೆಸ್ (ರೈಲು ಸಂಖ್ಯೆ 16544) ಹುಬ್ಬಳ್ಳಿಯಿಂದ 11.30ಕ್ಕೆ ಹೊರಡಲಿದೆ. ವಾರಕ್ಕೊಮ್ಮೆ ಸಂಚರಿಸುವ ಪಂಢರಪುರ-ಯಶವಂತಪುರ ರೈಲು ಬೆಳಿಗ್ಗೆ 6.10 ಬದಲಾಗಿ 5.45ಕ್ಕೆ ಯಶವಂತಪುರ ನಿಲ್ದಾಣಕ್ಕೆ ಆಗಮಿಸಲಿದೆ.