*  ಎಚ್‌ಸಿಎಲ್‌ ಸಹಿತ ಹಲವು ಕಂಪೆನಿಗಳಿಂದ 5 ಸಾವಿರ ಕೋಟಿ ರು. ಹೂಡಿಕೆ*  ಪ್ರತಿಷ್ಠಿತ ಕಂಪನಿಗಳಿಂದ ಉತ್ತಮ ಸ್ಪಂದನೆ*  ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ  

ಬೆಂಗಳೂರು(ನ.19): ಪ್ರತಿಷ್ಠಿತ ಬೆಂಗಳೂರು ತಂತ್ರಜ್ಞಾನ ಶೃಂಗ ಯಶಸ್ವಿ ಎರಡು ದಿನ ಪೂರೈಸಿದ್ದು ಮಹತ್ವದ ವಿಚಾರಗೋಷ್ಠಿಗಳು ಹಾಗೂ ‘ಸ್ಮಾರ್ಟ್‌ ಬಯೋ ಪುರಸ್ಕಾರ’, ‘ಬೆಂಗಳೂರು ಇಂಪ್ಯಾಕ್ಟ್’ ಪ್ರದಾನದ ನಡುವೆ 5 ಸಾವಿರ ಕೋಟಿಗೂ ಹೆಚ್ಚು ಬಂಡವಾಳ ಆಕರ್ಷಿಸಲು ಯಶಸ್ವಿಯಾಗಿದೆ.

ಬೆಂಗಳೂರು ತಂತ್ರಜ್ಞಾನ ಶೃಂಗದ(Bengaluru Tech Summit) ಎರಡನೇ ದಿನ ‘ಕೃತಕ ಬುದ್ದಿಮತ್ತೆಯ ಬೆಳವಣಿಗೆ, ವಿಕಾಸ ಮತ್ತು ಮಾರ್ಪಾಡು’, ‘ಕೊರೋನಾ ಲಸಿಕೆಯಲ್ಲಿ ಭಾರತದ ನಾಯಕತ್ವ ಗುಣದ ಪ್ರದರ್ಶನ’, ‘ಕೃತಕ ಬುದ್ಧಿಮತ್ತೆ ಮತ್ತು ಮಷೀನ್‌ ಲರ್ನಿಂಗ್‌ನೊಂದಿಗೆ ಭವಿಷ್ಯದ ಕಡೆಗೆ’ ಎಂಬ ಹಲವು ಮಹತ್ವದ ವಿಚಾರಗೋಷ್ಠಿಗಳು ಯಶಸ್ವಿಯಾಗಿ ನಡೆದವು.

ವಿಚಾರಗೋಷ್ಠಿಗಳ ಬಳಿಕ ಸಂಜೆ ಮಾತನಾಡಿದ ಐಟಿ-ಬಿಟಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ(CN Ashwathnarayan), ಎಚ್‌ಸಿಎಲ್‌, ಅಪ್ಲೈಡ್‌ ಮೆಟೀರಿಯಲ್‌, ರಾಕಾನ್‌, ಚಿಂಟ್‌ ಕಂಪೆನಿಗಳು ರಾಜ್ಯದಲ್ಲಿ(Karnataka) ಒಟ್ಟು 5 ಸಾವಿರ ಕೋಟಿ ರು.ಗಿಂತಲೂ ಹೆಚ್ಚು ಬಂಡವಾಳ ಹೂಡಲು ಮುಂದೆ ಬಂದಿರುವುದಾಗಿ ಘೋಷಿಸಿದರು. ಅಲ್ಲದೆ, ಈ ಹೂಡಿಕೆಯಿಂದಾಗಿ ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ಉದ್ಯೋಗ(Job) ಸೃಷ್ಟಿ ಆಗಲಿದೆ ಎಂದು ಮಾಹಿತಿ ನೀಡಿದರು.

BTS-2021| ನಾನು ಕರ್ನಾಟಕದ ಹೆಮ್ಮೆಯ ಪುತ್ರಿ: Apple ಉಪಾಧ್ಯಕ್ಷೆ ಪ್ರಿಯಾ

28 ಬಿಲಿಯನ್‌ ಡಾಲರ್‌ ಹೂಡಿಕೆ:

ಸಿಲಿಕಾನ್‌ ಸಿಟಿ(Silicon City) ಬೆಂಗಳೂರಿನ(Bengaluru) ಜನಸಂಖ್ಯೆಯಲ್ಲಿ 15-35 ವರ್ಷ ವಯಸ್ಸಿನವರು ಶೇ.37ರಷ್ಟಿದ್ದು, ಸ್ಟಾರ್ಟ್‌ಅಪ್‌ಗಳ(Startup) ಹೂಡಿಕೆಗೆ(Investment) ವಾತಾವರಣ ಪೂರಕವಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ 11 ಸಾವಿರ ಸ್ಟಾರ್ಟ್‌ಅಪ್‌ಗಳು ಸುಮಾರು 28 ಬಿಲಿಯನ್‌ ಡಾಲರ್‌ ಹೂಡಿಕೆ ಮಾಡಲು ಮುಂದೆ ಬಂದಿವೆ ಎಂದು ಐಟಿ-ಬಿಟಿ ಇಲಾಖೆ ನಿರ್ದೇಶಕಿ ಡಾ. ಮೀನಾ ನಾಗರಾಜ್‌ ಹೇಳಿದ್ದಾರೆ.

ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ‘ಉದ್ಯಮಿಗಳಿಗಾಗಿ ಸರ್ಕಾರ(Government of Karnataka) ನೀಡುತ್ತಿರುವ ಅನುದಾನ ಹಾಗೂ ಯೋಜನೆಗಳ’ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಲೋಬಲ್‌ ಸ್ಟಾರ್ಟಪ್‌ ಇಕೋ ರಾರ‍ಯಂಕಿಂಗ್‌ನಲ್ಲಿ ಬೆಂಗಳೂರು 23ನೇ ಸ್ಥಾನ ಪಡೆದಿದ್ದು, 100ರ ಪಟ್ಟಿಯಲ್ಲಿ ಸ್ಥಾನ ಪಡೆದ ದೇಶದ ಏಕೈಕ ನಗರ ಬೆಂಗಳೂರು. ಹೀಗಾಗಿ ಸ್ಟಾರ್ಟ್‌ಅಪ್‌ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಬೆಂಗಳೂರು ಪ್ರಶಸ್ತ ಸ್ಥಳ ಎಂದರು.

10 ಶತಕೋಟಿ ಡಾಲರ್‌ ವಹಿವಾಟು

ಬೆಂಗಳೂರಿನಲ್ಲಿ ಈಗ ಶತಕೋಟಿ ಡಾಲರ್‌ ವಹಿವಾಟು ನಡೆಸುವ ಯೂನಿಕಾರ್ನ್‌ ಕಂಪನಿಗಳು ಸದ್ದು ಮಾಡುತ್ತಿವೆ. ಇನ್ನು ಒಂದೆರಡು ವರ್ಷಗಳಲ್ಲಿ ಇಲ್ಲಿ 10 ಶತಕೋಟಿ ಡಾಲರ್‌ ವಹಿವಾಟು ನಡೆಸುವ ಡೆಕಾಕಾರ್ನ್‌ ಕಂಪೆನಿಗಳು ರಾರಾಜಿಸಲಿವೆ ಎಂದು ಸ್ಟಾರ್ಟಪ್‌ ವಿಷನ್‌ ಗ್ರೂಪ್‌ ಮುಖ್ಯಸ್ಥ ಪ್ರಶಾಂತ್‌ ಪ್ರಕಾಶ್‌ ತಿಳಿಸಿದ್ದಾರೆ.

ಭಾರತ-ಜರ್ಮನಿ ತಂತ್ರಜ್ಞಾನ ಸಂಬಂಧ ವೃದ್ಧಿಗೆ ಕ್ರಮ: ಜರ್ಮನಿ ಸಚಿವ

ಭಾರತ(India) ಮತ್ತು ಜರ್ಮನಿಯ(Germany) ನಾರ್ತ್‌ ರಿನೆ-ವೆಸ್ಟ್‌ ಫಾಲಿಯಾ ಪ್ರಾಂತ್ಯದ ನಡುವೆ ತಂತ್ರಜ್ಞಾನ ಸಹಭಾಗಿತ್ವವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದ ಕಚೇರಿಯನ್ನು 2022ರಲ್ಲಿ ಪ್ರಾರಂಭಿಸಲಾಗುವುದು ಎಂದು ಆ ಪ್ರಾಂತ್ಯದ ಆರ್ಥಿಕ, ನಾವೀನ್ಯತೆ, ಡಿಜಿಟಲೀಕರಣ ಮತ್ತು ಇಂಧನ ಸಚಿವ ಆಂಡ್ರಿಯಾಸ್‌ ಪಿಂಕ್ವರ್ಟ್‌(Andreas Pinkwart) ಹೇಳಿದ್ದಾರೆ.

BTS 2021; ಸಂಶೋಧನೆಗಳಿಂದ ಕೃಷಿ ಸುಧಾರಣೆಯಾಗಬೇಕು; ವೆಂಕಯ್ಯ ನಾಯ್ಡು

ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ‘ಕೃತಕ ಬುದ್ಧಿಮತ್ತೆ ಮತ್ತು ಮಷೀನ್‌ ಲರ್ನಿಂಗ್‌ನೊಂದಿಗೆ ಭವಿಷ್ಯದ ಕಡೆಗೆ’ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಬೆಂಗಳೂರು ಮತ್ತು ಕರ್ನಾಟಕ(Karnataka) ಹೇಗೆ ತಂತ್ರಜ್ಞಾನದ ತೊಟ್ಟಲಾಗಿದೆಯೋ ಹಾಗೆ ಜರ್ಮನಿಯಲ್ಲಿ ನಮ್ಮ ಪ್ರಾಂತ್ಯವು ತಾಂತ್ರಿಕ ನೆಲೆಯಾಗಿದೆ. ಈ ಕಚೇರಿಯು ಭಾರತ ಮತ್ತು ಜರ್ಮನಿಯ ಕಂಪನಿಗಳಿಗೆ ಹೆಬ್ಬಾಗಿಲು ಆಗಲಿದೆ ಎಂದು ಬಣ್ಣಿಸಿದರು.

ರಾಜ್ಯ ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ, 2020ರ ನವೆಂಬರಿನಲ್ಲಿ ಭಾರತ ಮತ್ತು ಜರ್ಮನಿ 20 ಒಡಂಬಡಿಕೆಗಳಿಗೆ ಸಹಿ ಹಾಕಿವೆ. ಕೃತಕ ಬುದ್ಧಿಮತ್ತೆ, ಮಷೀನ್‌ ಲರ್ನಿಂಗ್‌, ಐಒಟಿ, ಅನಾಲಿಟಿಕ್ಸ್‌, ರೋಬೋಟಿಕ್ಸ್‌, ಡೇಟಾ ಸೈನ್ಸ್‌ ಮುಂತಾದ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ರಾಜ್ಯವನ್ನು ಜ್ಞಾನಾಧಾರಿತ ಸಮಾಜವನ್ನಾಗಿ ಕಟ್ಟಲಾಗುವುದು ಎಂದು ಹೇಳಿದರು.

ಆಧುನಿಕ ತಂತ್ರಜ್ಞಾನ ವಲಯದಲ್ಲಿ ರಾಜ್ಯ ಆರಂಭಿಸಿರುವ ಉತ್ಕೃಷ್ಟತಾ ಕೇಂದ್ರಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಜರ್ಮನಿಯ ನಾರ್ತ ರಿನೆ-ವೆಸ್ಟ್‌ ಫಾಲಿಯಾ ಪ್ರಾಂತ್ಯದಲ್ಲಿ ಕರ್ನಾಟಕ ಮೂಲದ ಇಸ್ಫೋಸಿಸ್‌ ಮತ್ತು ವಿಪೋ› ಕಂಪನಿಗಳು ಈಗಾಗಲೇ ನೆಲೆಯೂರಿವೆ. ಮುಂದಿನ ದಿನಗಳಲ್ಲಿ ಇಲ್ಲಿನ ಮತ್ತಷ್ಟುಕಂಪನಿಗಳು ಅಲ್ಲಿ ತಮ್ಮ ಚಟುವಟಿಕೆ ಆರಂಭಿಸಲಿವೆ ಎಂದು ಸಚಿವರು ಹೇಳಿದರು.

ಕರ್ನಾಟಕ-ಕೇರಳ(Kerala) ವಲಯದ ಜರ್ಮನಿಯ ಕಾನ್ಸುಲ್‌ ಜನರಲ್‌ ಅಕಿಂ ಬುರ್ಕಟರ್‌ ಮಾತನಾಡಿ, ಸದ್ಯದಲ್ಲೇ ಆರಂಭವಾಗಲಿರುವ ಕಚೇರಿಯಿಂದ ದಕ್ಷಿಣ ಏಷ್ಯಾ, ಜಪಾನ್‌ ಮತ್ತು ಆಫ್ರಿಕಾ ಜತೆ ಜರ್ಮನಿಯ ಕಂಪನಿಗಳು ವಹಿವಾಟು ನಡೆಸಲು ಸಾಧ್ಯವಾಗಲಿದೆ. ಜರ್ಮನಿಯಲ್ಲಿ ಈಗ ಭಾರತದ 28 ಸಾವಿರ ವಿದ್ಯಾರ್ಥಿಗಳು ಉನ್ನತ ಅಧ್ಯಯನ ಮಾಡುತ್ತಿದ್ದಾರೆ ಎಂದು ಹೇಳಿದರು.