ನೀವು ಈಗ ಸ್ವಂತ ಮನೆ ಖರೀದಿಸಲು ಆರ್ಥಿಕವಾಗಿ ಸಶಕ್ತರಾ? ಪತ್ತೆ ಹಚ್ಚೋದು ಹೇಗೆ?

ಸ್ವಂತ ಮನೆ ಖರೀದಿಸಬೇಕು ಎಂಬ ಕನಸು ಎಲ್ಲರಿಗೂ ಇರುತ್ತದೆ. ಆದರೆ, ಮನೆ ಖರೀದಿಗೆ ಸಾಕಷ್ಟು ಹಣ ಕೂಡ ಕೈಯಲ್ಲಿರುವುದು ಅಗತ್ಯ. ಹಾಗಾದ್ರೆ ನೀವು ಮನೆ ಖರೀದಿಸಲು ಕಾಲ ಸೂಕ್ತವಾಗಿದೆ ಎಂದು ಸೂಚಿಸುವ ಆರ್ಥಿಕ ಮಾನದಂಡಗಳು ಯಾವುವು? ಇಲ್ಲಿದೆ ಮಾಹಿತಿ. 

5 signs to know you are ready to buy your own house

Business Desk: ಸ್ವಂತ ಮನೆ ಹೊಂದಬೇಕು ಎಂಬುದು ಎಲ್ಲರ ಕನಸು. ಇದು ಅನೇಕರ ಕನಸು ಹಾಗೂ ಆರ್ಥಿಕ ಗುರಿಯೂ ಆಗಿದೆ. ಆದರೆ, ಮನೆ ಖರೀದಿ ಅಥವಾ ನಿರ್ಮಾಣ ಅಷ್ಟು ಸುಲಭದ ಕೆಲಸವಲ್ಲ. ಅದಕ್ಕೆ ಸಾಕಷ್ಟು ಹಣಕಾಸಿನ ಯೋಜನೆಯ ಅಗತ್ಯವಿದೆ. ಕೈಯಲ್ಲಿ ಸಾಕಷ್ಟು ಹಣವಿದ್ರೆ ಮಾತ್ರ ಮನೆ ಖರೀದಿ ಕನಸು ನನಸಾಗುತ್ತದೆ. ಇನ್ನೂ ಕೆಲವೊಮ್ಮೆ ಕೆಲವರು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಾಲ ಮಾಡಿ ಮನೆ ಕಟ್ಟುತ್ತಾರೆ. ಆ ಬಳಿಕ ಹಣಕಾಸಿನ ಮುಗ್ಗಟ್ಟಿಗೆ ಸಿಲುಕುತ್ತಾರೆ. ಹೀಗಾಗಿ ಮನೆ ಖರೀದಿಯ ಕನಸು ನನಸು ಮಾಡಿಕೊಳ್ಳುವ  ಮುನ್ನ ನಮ್ಮ ಆರ್ಥಿಕ ಸ್ಥಿತಿಗತಿಗಳನ್ನು ನಾವೇ ಸ್ವಯಂ ಪರಿಶೀಲನೆ ಮಾಡಿಕೊಳ್ಳುವುದು ಅಗತ್ಯ. ಉಳಿತಾಯದ ಮೊತ್ತ ಎಷ್ಟಿದೆ? ಡೌನ್ ಪೇಮೆಂಟ್ ಗೆ ಬೇಕಾಗುವಷ್ಟು ಹಣವಿದೆಯಾ? ಕ್ರೆಡಿಟ್ ಸ್ಕೋರ್ ಎಷ್ಟಿದೆ? ಬ್ಯಾಂಕ್ ನಿಂದ ಎಷ್ಟು ಸಾಲ ಸಿಗಬಹುದು? ಮುಂತಾದ ಅಂಶಗಳನ್ನು ಪರಿಶೀಲಿಸಿ ಮುಂದುವರಿಯೋದು ಅಗತ್ಯ. ಇಲ್ಲವಾದ್ರೆ ಮುಂದೆ ತೊಂದರೆ ಎದುರಾಗಬಹುದು. ಹಾಗೆಯೇ ಮನೆ ಖರೀದಿ ಬಳಿಕ ಇಎಂಐ ಪಾವತಿ ಮಾಡುವಷ್ಟು ಮಾಸಿಕ ಆದಾಯ ನಿಮಗಿದೆಯಾ? ಅದರಿಂದ ನಿಮ್ಮ ಇತರ ವೆಚ್ಚಗಳಿಗೆ ಯಾವುದೇ ತೊಂದರೆಯಾಗುವುದಿಲ್ಲವೆ? ಎಂಬುದನ್ನು ಕೂಡ ಪರಿಶೀಲಿಸೋದು ಅಗತ್ಯ.

ನಿಮ್ಮ ಉಳಿತಾಯ
ಪ್ರತಿ ತಿಂಗಳು ನೀವು ಎಷ್ಟು ಉಳಿತಾಯ ಮಾಡುತ್ತೀರಿ ಎಂಬುದು ನಿಮ್ಮ ಮನೆ ಖರೀದಿ ಕನಸು ನನಸು ಮಾಡಿಕೊಳ್ಳಲು ನೆರವು ನೀಡುತ್ತದೆ. ಅಂದರೆ ನಿಮ್ಮ ತಿಂಗಳ ಉಳಿತಾಯ ಮನೆ ಖರೀದಿಗೆ ಸಾಕಷ್ಟು ಹಣ ಉಳಿಸಲು ನೆರವು ನೀಡುತ್ತದೆ. ನೀವು ತಿಂಗಳ ವೆಚ್ಚವನ್ನು ತಗ್ಗಿಸಿದಾಗ ಜಾಸ್ತಿ ಮೊತ್ತದ ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಉಳಿತಾಯದ ಹಣದಿಂದ ಮನೆ ಖರೀದಿ ಸಂದರ್ಭದಲ್ಲಿ ಡೌನ್ ಪೇಮೆಂಟ್ ಮಾಡಬಹುದು.

ಕೇಂದ್ರ ಸರ್ಕಾರಿ ನೌಕರರಿಗೆ ಶುಭಸುದ್ದಿ; ಶೀಘ್ರದಲ್ಲೇ ಶೇ.4ರಷ್ಟು ಡಿಎ ಏರಿಕೆ ಸಾಧ್ಯತೆ

ಡೌನ್ ಪೇಮೆಂಟ್ ಗೆ ಹಣ
ಇನ್ನು ಮನೆ ಖರೀದಿ ಅಥವಾ ನಿರ್ಮಾಣಕ್ಕೆ ಬ್ಯಾಂಕ್ ಸಾಲ ಸೌಲಭ್ಯ ಒದಗಿಸಿದರೂ ಡೌನ್ ಪೇಮೆಂಟ್ ಗೆ ನಿಮ್ಮ ಬಳಿ ಹಣವಿರೋದು ಅಗತ್ಯ. ನಿಮ್ಮ ಬಳಿಯೂ ನಿರ್ದಿಷ್ಟ ಪ್ರಮಾಣದ ಹಣವಿದೆ ಎಂಬುದನ್ನು ನಿಮಗೆ ಸಾಲ ನೀಡಿದ ಬ್ಯಾಂಕ್ ಗೆ ಮನವರಿಕೆ ಮಾಡಿಸಲು ನೀವು ಡೌನ್ ಪೇಮೆಂಟ್ ಮಾಡುವುದು ಅಗತ್ಯ. ಈ ಡೌನ್ ಪೇಮೆಂಟ್ ಮೊತ್ತ ಆಸ್ತಿಮೌಲ್ಯದ ಶೇ.10ರಿಂದ ಶೇ.20ರ ನಡುವೆ ಇರುತ್ತದೆ. ಆದರೆ, ಇದು ಆಸ್ತಿಯಿಂದ ಆಸ್ತಿಗೆ ಹಾಗೂ ಬ್ಯಾಂಕ್ ನಿಂದ ಬ್ಯಾಂಕ್ ಗೆ ಬದಲಾಗುತ್ತದೆ. ಉದಾಹರಣೆಗೆ ನೀವು 30ಲಕ್ಷ ರೂ. ಮೊತ್ತದ ಆಸ್ತಿ ಖರೀದಿಸಲು ಬಯಸಿದ್ರೆ ಶೇ.20ರಷ್ಟು ಅಂದ್ರೆ 6 ಲಕ್ಷ ರೂ. ಡೌನ್ ಪೇಮೆಂಟ್ ಮಾಡಬೇಕು. ನಿಮ್ಮ ಡೌನ್ ಪೇಮೆಂಟ್ ಜಾಸ್ತಿಯಿದ್ದಷ್ಟು ನಿಮ್ಮ ಇಎಂಐ ಹಾಗೂ ಸಾಲದ ಮೊತ್ತ ಕಡಿಮೆ ಇರುತ್ತದೆ. 

ಇಎಂಐ ಪಾವತಿಸಲು ಸಾಧ್ಯವಾಗುತ್ತಾ?
ನೀವು 20 ವರ್ಷಗಳ ಅವಧಿಗೆ ಶೇ.9 ಬಡ್ಡಿದರದಲ್ಲಿ 50ಲಕ್ಷ ರೂ. ಗೃಹ ಸಾಲ ಪಡೆದಿರುತ್ತೀರಿ. ಈ ಸಾಲಕ್ಕೆ ನಿಮ್ಮ ಇಎಂಐ ಸುಮಾರು 45000ರೂ. ಇರುತ್ತದೆ. ಒಂದು ವೇಳೆ ನೀವು ಈ ಇಎಂಐ ಅನ್ನು 20 ವರ್ಷಗಳ ಅವಧಿಯಲ್ಲಿ ಪಾವತಿಸಲು ಸಾಧ್ಯವಾಗದಿದ್ರೆ ನೀವು ಮನೆ ಖರೀದಿ ನಿರ್ಧಾರವನ್ನು ಮುಂದುವರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಏಕೆಂದರೆ ಒಂದು ವೇಳೆ ನೀವು ನಿಮ್ಮ ಇಎಂಐ ಪಾವತಿಗೆ ವಿಳಂಬ ಮಾಡಿದ್ರೆ ನಿಮ್ಮ ಇಡೀ ಆರ್ಥಿಕ ಆರೋಗ್ಯ ಹದಗೆಡಲಿದೆ. ಹಾಗೆಯೇ ಯಾವುದೇ ಪರಿಸ್ಥಿತಿ ನಿರ್ವಹಿಸಲು ವಿಫಲರಾಗುತ್ತೀರಿ. ಹೀಗಾಗಿ ನಿಮ್ಮ ಬಳಿ ಸಾಕಷ್ಟು ಹಣವಿದ್ದು, ನಿಮ್ಮ ನಿತ್ಯದ ವಚ್ಚಗಳು ಹಾಗೂ ಇಎಂಐ ಪಾವತಿಗಳನ್ನು ಯಾವುದೇ ಒತ್ತಡವಿಲ್ಲದೆ ನಿರ್ವಹಿಸಲು ಸಾಧ್ಯವಾಗುತ್ತದೆ ಎಂಬ ಬಗ್ಗೆ ಭರವಸೆ ಸಿಕ್ಕಿದರೆ ಮಾತ್ರ ಮನೆ ಖರೀದಿ ಅಥವಾ ನಿರ್ಮಾಣಕ್ಕೆ ಮುಂದಾಗಿ.

ಸುಕನ್ಯಾ ಸಮೃದ್ಧಿ vs ಎಲ್ ಐಸಿ ಕನ್ಯಾದಾನ: ಹೆಣ್ಣುಮಕ್ಕಳ ಭವಿಷ್ಯಕ್ಕೆ ಯಾವ ಯೋಜನೆ ಬೆಸ್ಟ್?

ಭವಿಷ್ಯದ ಆದಾಯ
ಒಂದು ವೇಳೆ ನೀವು ಈಗಷ್ಟೇ ನಿಮ್ಮ ವೃತ್ತಿಜೀವನ ಪ್ರಾರಂಭಿಸಿದ್ದು, 20ನೇ ವಯಸ್ಸಿನಲ್ಲಿದ್ದರೆ ನಿಮಗೆ ಸುದೀರ್ಘವಾದ ವೃತ್ತಿ ಬದುಕಿದೆ. ನಿಮಗೆ ಹೆಚ್ಚಿನ ಅವಕಾಶಗಳು ಸಿಗಲಿವೆ. ಹಾಗೆಯೇ ನಿಮ್ಮ ಆದಾಯ ಬೆಳೆಯಲಿದೆ. ಮುಂದಿನ ದಿನಗಳಲ್ಲಿ ನಿಮ್ಮ ಆದಾಯ ಹೆಚ್ಚುತ್ತದೆ ಎಂಬ ಭರವಸೆ ನಿಮಗೆ ಮೂಡಿದರೆ ಹಾಗೂ ಸಾಲದ ಜೊತೆಗೆ ಇತರ ವೆಚ್ಚಗಳನ್ನು ಕೂಡ ನಿಭಾಯಿಸಬಲ್ಲಿರಿ ಎಂಬ ವಿಶ್ವಾಸವಿದ್ರೆ ಮಾತ್ರ ಮುಂದುವರಿಯಿರಿ. ನಿಮ್ಮ ಸಾಲವನ್ನು ಅವಧಿಗೂ ಮುನ್ನವೇ ನೀವು ತೀರಿಸಲು ಕೂಡ ಅವಕಾಶವಿದೆ.

ಕ್ರೆಡಿಟ್ ಸ್ಕೋರ್
ನಿಮ್ಮ ಕ್ರೆಡಿಟ್ ಸ್ಕೋರ್ ನಿಮ್ಮ ಆರೋಗ್ಯದ ಸ್ಕೋರ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ನೀವು ಸಾಲವನ್ನು ಮರುಪಾವತಿ ಮಾಡಬಹುದಾ ಅಥವಾ ಇಲ್ಲವಾ ಎಂಬುದನ್ನು ತಿಳಿಸುತ್ತದೆ. ಒಂದು ವೇಳೆ ನಿಮ್ಮ ಕ್ರೆಡಿಟ್ ಹೆಚ್ಚಿದ್ದರೆ, ಬ್ಯಾಂಕ್ ಗಳು ನಿಮಗೆ ಸಾಲ ನೀಡಲು ಯಾವುದೇ ಹಿಂಜರಿಕೆ ವ್ಯಕ್ತಪಡಿಸೋದಿಲ್ಲ. ಹಾಗೆಯೇ ಆಕರ್ಷಕ ಬಡ್ಡಿದರವನ್ನು ಕೂಡ ನೀಡುತ್ತವೆ. 

Latest Videos
Follow Us:
Download App:
  • android
  • ios