ವಾರಸುದಾರರಿಲ್ಲದ 48000 ಕೋಟಿ ಹಣ ಶಿಕ್ಷಣ, ಜಾಗೃತಿ ನಿಧಿಗೆ ವರ್ಗ: ಕೇಂದ್ರ
ವಾರಸುದಾರರಿಲ್ಲದ 48,461.44 ಕೋಟಿ ರು. ಠೇವಣಿ ಹಣವನ್ನು ಶಿಕ್ಷಣ ಹಾಗೂ ಜಾಗೃತ ನಿಧಿಗೆ ಹಸ್ತಾಂತರಿಸಲಾಗಿದೆ ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಗೆ ಮಂಗಳವಾರ ತಿಳಿಸಿದೆ.
ನವದೆಹಲಿ: ವಾರಸುದಾರರಿಲ್ಲದ 48,461.44 ಕೋಟಿ ರು. ಠೇವಣಿ ಹಣವನ್ನು ಶಿಕ್ಷಣ ಹಾಗೂ ಜಾಗೃತ ನಿಧಿಗೆ ಹಸ್ತಾಂತರಿಸಲಾಗಿದೆ ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಗೆ ಮಂಗಳವಾರ ತಿಳಿಸಿದೆ. 2023ರ ಮಾ.31ರ ವೇಳೆಗೆ 16,79,32,112 ವಿವಿಧ ಬ್ಯಾಂಕ್ ಖಾತೆಗಳಲ್ಲಿ 48,461 ಕೋಟಿ ರು. ಹಣವನ್ನು ಯಾರೂ ಕ್ಲೇಮ್ ಮಾಡಿಕೊಂಡಿರಲಿಲ್ಲ. ಹೀಗಾಗಿ ಇವನ್ನು ನಿಯಮಾನುಸಾರ ಶಿಕ್ಷಣ ನಿಧಿಗೆ ಕಳಿಸಲಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರಾಡ್ ಹೇಳಿದ್ದಾರೆ. ಈ ಹಣವನ್ನು ಶೈಕ್ಷಣಿಕ ಉದ್ದೇಶಕ್ಕೆ ಬಳಸಲಾಗವುದು.
ಈ ನಡುವೆ, ದೇಶದಲ್ಲಿ 8 ಜನ ಉದ್ದೇಶಪೂರ್ವಕ ಸುಸ್ತಿದಾರರಿದ್ದಾರೆ. 2023ರ ಆ.2ರ ವೇಳೆಗೆ ಈ ಸುಸ್ತಿದಾರರ 34,118.53 ಕೋಟಿ ರು. ಆಸ್ತಿಯನ್ನು ಪತ್ತೆ ಮಾಡಲಾಗಿದೆ. ಇದರಲ್ಲಿ 15,838.91 ಕೋಟಿ ರು. ಹಣವನ್ನು ಜಪ್ತಿ ಮಾಡಲಾಗಿದೆ. ಇನ್ನು 15,113.02 ಕೋಟಿ ರು. ಹಣವನ್ನು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಸಾಲ ಮರುಪಾವತಿ ರೂಪದಲ್ಲಿ ನೀಡಲಾಗಿದೆ ಎಂದಿದ್ದಾರೆ.
3ನೇ ಮಗು ಮಾಹಿತಿ ಮುಚ್ಚಿಟ್ಟ ಸರ್ಕಾರಿ ಶಾಲೆ ಶಿಕ್ಷಕ ಹುದ್ದೆಯಿಂದ ವಜಾ
ಭಿಂಡ್ (ಮ.ಪ್ರ): ಸರ್ಕಾರಿ ಶಾಲೆ ಶಿಕ್ಷಕ ಹುದ್ದೆ ಪಡೆಯುವಾಗ ಮೂರನೇ ಮಗು ಇರುವ ಮಾಹಿತಿಯನ್ನು ಮರೆ ಮಾಚಿದ್ದಕ್ಕೆ ಇಲ್ಲಿನ ಶಿಕ್ಷಕರೊಬ್ಬರನ್ನು ಸರ್ಕಾರ ಕೆಲಸದಿಂದ ತೆಗೆದು ಹಾಕಿದೆ. ಗಣೇಶ್ ಪ್ರಸಾದ್ ಶರ್ಮ ಎಂಬ ಶಿಕ್ಷಕರು ತಾವು ಕೆಲಸ ಪಡೆಯುವ ವೇಳೆ ತಮಗೆ ಮೂರು ಮಕ್ಕಳಿರುವ ಮಾಹಿತಿಯನ್ನು ತಿಳಿಸದೇ ಎರಡೇ ಮಕ್ಕಳು ಎಂದು ಸುಳ್ಳು ಮಾಹಿತಿ ನೀಡಿದ್ದರು. ಬಳಿಕ ದೂರಿನ ಮೇರೆಗೆ ಜಿಲ್ಲಾ ಶಿಕ್ಷಣ ಅಧಿಕಾರಿ ತನಿಖೆ ನಡೆಸಿ ಖಾತ್ರಿ ಪಡಿಸಿದಾಗ ಸರ್ಕಾರ ಇವರನ್ನು ಕೆಲಸದಿಂದ ತೆಗೆದುಹಾಕಿದೆ. ನಿಯಮದನ್ವಯ ವ್ಯಕ್ತಿಗೆ 2001 ಜ.26ರ ನಂತರ ಮೂರನೇ ಮಗು ಜನಿಸಿದ್ದರೆ ಅವರಿಗೆ ಸರ್ಕಾರಿ ನೌಕರಿ ನೀಡಲಾಗುವುದಿಲ್ಲ. ಈ ನಿಯಮವನ್ನು ಗಣೇಶ್ ಉಲ್ಲಂಘನೆ ಮಾಡಿದ್ದರು.