ನವದೆಹಲಿ[ಡಿ.28]: ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ದೇಶಾದ್ಯಂತ ಇರುವ ಆಹಾರೋದ್ಯಮಗಳಿಂದ ಬರೋಬ್ಬರಿ 47 ಲಕ್ಷ ಕೇಜಿ ಬಳಕೆ ಮಾಡಲಾದ ಅಡುಗೆ ಎಣ್ಣೆಯನ್ನು ಸಂಗ್ರಹಿಸಲಾಗಿದೆ. ಈ ಪೈಕಿ ಶೇ.70ರಷ್ಟುಅಡುಗೆ ಎಣ್ಣೆಯನ್ನು ಬಯೋ-ಡೀಸೆಲ್‌ ಆಗಿ ಪರಿವರ್ತಿಸಲಾಗಿದೆ ಎಂದು ಭಾರತೀಯ ಬಯೋ-ಡೀಸೆಲ್‌ ಅಸೋಸಿಯೇಷನ್‌(ಬಿಡಿಎಐ) ತಿಳಿಸಿದೆ.

ಇಲ್ಲಿನ ಜವಹರಲಾಲ್‌ ನೆಹರೂ ಸ್ಟೇಡಿಯಂನಲ್ಲಿ ಡಿ.25-29ರವರೆಗೂ ನಡೆಯುತ್ತಿರುವ ರಾಷ್ಟ್ರೀಯ ಬೀದಿ ಆಹಾರ ಉತ್ಸವದಲ್ಲಿ ಬಳಕೆಯಾದ ಅಡುಗೆ ಎಣ್ಣೆಯ ಸದ್ಬಳಕೆ ಕುರಿತಾಗಿ ಬಿಡಿಎಐ ವಿಶೇಷ ಕಾರ್ಯಾಗಾರವನ್ನು ಏರ್ಪಡಿಸಿತ್ತು. ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಬಿಡಿಎಐ ಅಧ್ಯಕ್ಷ ಸಂದೀಪ್‌ ಚತುರ್ವೇದಿ, ಇದೇ ವರ್ಷದ ಆಗಸ್ಟ್‌ನಿಂದ ಆಹಾರೋದ್ಯಮಗಳಿಂದ ಅಡುಗೆ ಎಣ್ಣೆ ಸಂಗ್ರಹ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಇದಕ್ಕಾಗಿ ಭಾರತೀಯ ಆಹಾರ ಸುರಕ್ಷತಾ ಮತ್ತು ಪ್ರಮಾಣದ ಪ್ರಾಧಿಕಾರ ರುಕೊ ವೆಬ್‌ ಪೋರ್ಟಲ್‌ ಅನ್ನು ಸ್ಥಾಪಿಸಿದೆ ಎಂದರು.

ಆಗಸ್ಟ್‌ನಿಂದ ಡಿಸೆಂಬರ್‌ 24ರವರೆಗೂ ಒಟ್ಟಾರೆ 46,79,511 ಕೇಜಿ ಬಳಸಲಾದ ಅಡುಗೆ ಎಣ್ಣೆ ಸಂಗ್ರಹಿಸಲಾಗಿದ್ದು, ಈ ಪೈಕಿ 33,35,469 ಕೇಜಿ ಎಣ್ಣೆಯನ್ನು ಬಯೋ-ಡೀಸೆಲ್‌ ಆಗಿ ಪರಿವರ್ತಿಸಲಾಗಿದೆ. ಬಯೋ ಡೀಸೆಲ್‌ ಆಗಿ ಪರಿವರ್ತಿಸುವ 30 ಘಟಕಗಳಿವೆ ಎಂದು ಚತುರ್ವೇದಿ ಇದೇ ವೇಳೆ ಹೇಳಿದರು.