ನವದೆಹಲಿ[ಮೇ.09]: ನಂಬಿಕೆ ಮತ್ತು ಚಿನ್ನಾಭರಣ ಕುರಿತ ಭಾರತೀಯರ ಒಲವು ಮತ್ತೊಮ್ಮೆ ಸಾಬೀತಾಗಿದೆ. ಅಕ್ಷಯ ತೃತೀಯ ದಿನದಂದು ಚಿನ್ನ ಕೊಂಡರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಅಕ್ಷಯ ತೃತೀಯ ದಿನವಾದ ಮೇ 7ರಂದು ದೇಶಾದ್ಯಂತ ಭರ್ಜರಿ 23 ಟನ್‌ಗಳಷ್ಟು ಚಿನ್ನ ಮಾರಾಟವಾಗಿದೆ.

ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದರೂ ಚಿಂತಿಸಿದ ಗ್ರಾಹಕರು, ಮಂಗಳವಾರ ಮುಂಜಾನೆಯಿಂದಲೂ ಆಭರಣಗಳ ಅಂಗಡಿಗಳಿಗೆ ಧಾವಿಸಿ ಭಾರೀ ಪ್ರಮಾಣದಲ್ಲಿ ಚಿನ್ನ ಮತ್ತು ಬೆಳ್ಳಿಯ ಗಟ್ಟಿಹಾಗೂ ಆಭರಣಗಳನ್ನು ಖರೀದಿಸಿದ್ದಾರೆ. ಈ ಪೈಕಿ ಚಿನ್ನದ ಗಟ್ಟಿಮತ್ತು ಆಭರಣಗಳ ಪ್ರಮಾಣವೇ ಭರ್ಜರಿ 23 ಟನ್‌ ಎಂದು ಭಾರತೀಯ ಚಿನ್ನದ ಗಟ್ಟಿಮತ್ತು ಆಭರಣ ಸಂಸ್ಥೆ (ಐಬಿಜೆಎ)ಯ ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ಬುಧವಾರ ತಿಳಿಸಿದ್ದಾರೆ. ಮಂಗಳವಾರ ಪ್ರತಿ 10 ಗ್ರಾಂ ಚಿನ್ನದ ಬೆಲೆ 31500 ರು. ಇತ್ತು. ಇದರ ಲೆಕ್ಕದಲ್ಲಿ ಮಂಗಳವಾರ ಮಾರಾಟವಾದ ಒಟ್ಟು ಚಿನ್ನದ ಬೆಲೆ ಸುಮಾರು 7100 ಕೋಟಿ ರು. ಇನ್ನು ಈ ಮೊತ್ತಕ್ಕೆ ಬೆಳ್ಳಿಯನ್ನೂ ಸೇರಿಸಿದರೆ ಒಟ್ಟು ಮೊತ್ತ 10000 ಕೋಟಿ ರು.ವರೆಗೂ ತಲುಪಬಹುದು ಎನ್ನಲಾಗಿದೆ.

ಕಳೆದ ವರ್ಷ ಅಕ್ಷಯ ತೃತೀಯದಂದು 19 ಟನ್‌ ಚಿನ್ನ ಮಾರಾಟವಾಗಿತ್ತು. ಈ ವರ್ಷ ಅದರ ಪ್ರಮಾಣ 23 ಟನ್‌ಗೆ ಏರಿದೆ. ದೇಶಾದ್ಯಂತ ಚಿನ್ನಕ್ಕೆ ಬೇಡಿಕೆ ಹೆಚ್ಚಿದ್ದರಿಂದ ಬೆಲೆ ತುಸು ಜಾಸ್ತಿಯಾಗಿತ್ತು. ಮುಂಬೈ ಮಾರುಕಟ್ಟೆಯಲ್ಲಿ 22 ಕ್ಯಾರೆಟ್‌ ಚಿನ್ನದ ಪ್ರತಿ 10 ಗ್ರಾಂ ಬೆಲೆ 32,700 ರು. ಆಗಿತ್ತು. 24 ಕ್ಯಾರೆಟ್‌ ಚಿನ್ನ ಪ್ರತಿ 10 ಗ್ರಾಂ ಬೆಲೆ 32,850 ರು. ಆಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 255 ರು.ನಷ್ಟುಜಾಸ್ತಿಯಾಗಿದೆ.

ದೆಹಲಿ ಮಾರುಕಟ್ಟೆಯಲ್ಲಿ 22 ಕ್ಯಾರೆಟ್‌ ಪ್ರತಿ 10 ಗ್ರಾಂಗೆ 32,750 ರು, 24 ಕ್ಯಾರೆಟ್‌ ಪ್ರತಿ 10ಗ್ರಾಂಗೆ 32,900 ರು. ಬೆಲೆ ನಿಗಧಿಯಾಗಿತ್ತು. ಹೆಚ್ಚುಕಡಿಮೆ 310 ರು.ನಷ್ಟುಹೆಚ್ಚಿಗೆಯಾಗಿತ್ತು. ಬೆಳ್ಳಿಯ ಬೆಲೆ ಪ್ರತಿ ಕಿಲೋಗೆ 38,395 ರು. ಆಗಿತ್ತು. ಕಳೆದ ವರ್ಷಕ್ಕಿಂತ 375 ರು.ನಷ್ಟುಜಾಸ್ತಿಯಾಗಿದ್ದರೂ ಖರೀದಿಗೆ ಬರ ಇರಲಿಲ್ಲ.