* ಬೆಂಗಳೂರು ನಗರದಲ್ಲೇ 650 ಕೋಟಿ ವ್ಯವಹಾರ* ಗ್ರಾಹಕರಿಗೆ ಭರಪೂರ ಕೊಡುಗೆ ನೀಡಿದ ಚಿನ್ನದ ಮಳಿಗೆಗಳು* ವಿಶೇಷ ಭದ್ರತಾ ಸಿಬ್ಬಂದಿ ನೇಮಕ
ಬೆಂಗಳೂರು(ಮೇ.04): ರಾಜ್ಯದಲ್ಲಿ(Karnataka) ಪ್ರಸಕ್ತ ಬಾರಿಯ ಅಕ್ಷಯ ತೃತೀಯ(Akshaya Tritiya) ದಿನದ ಅಂಗವಾಗಿ ನಡೆದ ಚಿನ್ನಾಭರಣ(Gold) ಮಾರಾಟದಲ್ಲಿ ಮಂಗಳವಾರ ಒಂದೇ ದಿನ ಸಾವಿರಾರು ಕೋಟಿ ರುಪಾಯಿಯ ವ್ಯವಹಾರ ನಡೆದಿದೆ.
ಕೊರೋನಾದಿಂದ(Coronavirus) ಕಳೆದ ಎರಡು ವರ್ಷಗಳಿಂದ ಯಾವುದೇ ರೀತಿಯ ವಹಿವಾಟು ನಡೆದಿರಲಿಲ್ಲ. ಆದರೆ, ಪ್ರಸಕ್ತ ವರ್ಷ ಚಿನ್ನಾಭರಣಗಳೊಂದಿಗೆ ಕಚ್ಚಾ ಚಿನ್ನ ಖರೀದಿ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಮಂಗಳವಾರ ಬೆಳಗ್ಗೆ 7ರಿಂದ ತಡರಾತ್ರಿಯವರೆಗೂ ವ್ಯಾಪಾರ(Business) ವಹಿವಾಟು ನಡೆದಿದ್ದು, ರಾಜ್ಯದಲ್ಲಿ .1680 ಕೋಟಿ ವ್ಯವಹಾರ ನಡೆದಿದೆ. ಬೆಂಗಳೂರು(Bengaluru) ನಗರವೊಂದರಲ್ಲಿಯೇ ಸುಮಾರು .650 ಕೋಟಿ ವ್ಯಾಪಾರ ನಡೆದಿದೆ ಎಂದು ಕರ್ನಾಟಕ ಜ್ಯುವೆಲ್ಲರ್ಸ್ ಫೆರಡರೇಷನ್ ಆಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಡಾ. ಜಿ.ರಾಮಚಾರಿ ಮಾಹಿತಿ ನೀಡಿದ್ದಾರೆ.
ಅಕ್ಷಯ ತೃತೀಯಾಗೆ 15,000 ಕೋಟಿ ಮೌಲ್ಯದ ಚಿನ್ನ ಮಾರಾಟ..!
ಬೆಂಗಳೂರು ನಗರವೂ ಸೇರಿದಂತೆ, ಮೈಸೂರು, ಮಂಗಳೂರು, ಹುಬ್ಬಳ್ಳಿ, ದಾವಣಗೆರೆ, ಶಿವಮೊಗ್ಗ ಮತ್ತು ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಚಿನ್ನಾಭರಣ ಮಳಿಗೆಗಳಲ್ಲಿ ಖರೀದಿದಾರರು ಉತ್ಸಾಹ, ಸಡಗರದಿಂದ ಆಭರಣಗಳನ್ನು ಖರೀದಿಸಿದರು. ಅಕ್ಷಯ ತೃತೀಯದ ದಿನ ಒಂದು ಚಿಕ್ಕ ಒಡವೆಯನ್ನಾದರೂ ಖರೀದಿಸಬೇಕು ಎಂದು ಆಸೆಯೊಂದಿಗೆ ಮಳಿಗೆಗಳಿಗೆ ಜನ ಮುಗಿಬಿದ್ದಿದ್ದರು.
ಬಹುತೇಕ ಮಳಿಗೆಗಳಲ್ಲಿ ಗ್ರಾಹಕರಿಗೆ(Customers) ಭರಪೂರ ಕೊಡುಗೆಗಳನ್ನು ನೀಡಲಾಗಿತ್ತು. ಗ್ರಾಹಕರನ್ನು ಸೆಳೆಯುವುದಕ್ಕಾಗಿಯೇ ಚಿನ್ನಾಭರಣ ಮಳಿಗೆಗಳನ್ನು ತಳಿರು-ತೋರಣಗಳಿಂದ ಶೃಂಗರಿಸಲಾಗಿತ್ತು. ಜತೆಗೆ, ವಿವಿಧ ಉಡುಗೊರೆಗಳು ಆಕರ್ಷಕ ಫಲಕಗಳನ್ನು ಪ್ರದರ್ಶಿಸಿದ್ದರು, ಬಿಸಿಲಲ್ಲಿ ದಣಿದು ಬಂದ ಗ್ರಾಹಕರಿಗೆ ಕೆಲವು ಮಳಿಗೆಗಳಲ್ಲಿ ಹೊರ ಭಾಗದಲ್ಲೇ ಮಜ್ಜಿಗೆ ಮತ್ತಿತರ ತಂಪು ಪಾನೀಯಗಳನ್ನು ಕೊಡುವ ವ್ಯವಸ್ಥೆ ಮಾಡಲಾಗಿತ್ತು.
ಭೀಮಾ ಜ್ಯುವೆಲ್ಲರ್ಸ್, ಜಾಯ್ ಅಲುಕ್ಕಾಸ್, ಲಲಿತಾ ಜುವೆಲ್ಲರಿ, ಶ್ರೀ ಸಾಯಿಗೋಲ್ಡ್ ಪ್ಯಾಲೇಸ್ ಆಭರಣ ಮಳಿಗೆಗಳು ಸೇರಿದಂತೆ ಒಡವೆಗಳನ್ನು ಖರೀದಿಸಿದ ನಂತರ ಮಳಿಗೆಯಲ್ಲೇ ದೇವರ ಮುಂದಿಟ್ಟು ಪೂಜಿಸಿ, ಆಶೀರ್ವದಿಸಿ ಕೊಡುತ್ತಿದ್ದುದು ವಿಶೇಷವಾಗಿತ್ತು.
Akshaya Tritiya 2022: 30 ವರ್ಷಗಳ ಬಳಿಕ ಅಕ್ಷಯ ತೃತೀಯದಂದು ಬರುತ್ತಿದೆ ಈ ಶುಭಯೋಗ
ಚಿನ್ನದ ನಾಣ್ಯಗಳ ಖರೀದಿ
ಪ್ರಸಕ್ತ ವರ್ಷವೂ ಹಲವು ಮಳಿಗೆಗಳಲ್ಲಿ ಅಕ್ಷಯ ತೃತೀಯಕ್ಕೆಂದೇ ವಿಶೇಷವಾಗಿ ಒಂದು ಗ್ರಾಂನ ಚಿನ್ನದ ನಾಣ್ಯಗಳನ್ನು ಮಾರಾಟ ಮಾಡಲಾಯಿತು. ಕೆಲವರು 10-20 ಗ್ರಾಂ ಹೀಗೆ ಕಚ್ಚಾ ಚಿನ್ನ (ಬುಲಿಯನ್) ಖರೀದಿಸಿದರು. ಮಾಸಿಕ ಕಂತಿನಲ್ಲಿ ಪಾವತಿಸುವ ಚೀಟಿಗಳನ್ನು ಹಾಕಿಕೊಂಡವರು ಸಹ ಇಂದೇ ಬಂದು ಚಿನ್ನಾಭರಣ ಖರೀದಿಸುವವರ ಪ್ರಮಾಣವೂ ಹೆಚ್ಚಾಗಿತ್ತು. ಮದುವೆ ಮತ್ತಿತರ ಸಮಾರಂಭಗಳ ಹಿನ್ನೆಲೆಯಲ್ಲಿ ಓಲೆ, ನೆಕ್ಲೆಸ್, ಉದ್ದನೆ ಸರ, ಬಳೆ ಸೇರಿದಂತೆ ವಿವಿಧ ಬಗೆಯ ಆಭರಣಗಳನ್ನು ಖರೀದಿಸಿದರು.
ವಿಶೇಷ ಭದ್ರತಾ ಸಿಬ್ಬಂದಿ ನೇಮಕ
ಬಹುತೇಕ ಆಭರಣ ಮಳಿಗೆಗಳನ್ನು ಬೆಳಗ್ಗೆ 7ರಿಂದಲೇ ತೆರೆಯಲಾಗಿತ್ತು. ರಾತ್ರಿ 10ರ ನಂತರವೂ ಮಾರಾಟ ಪ್ರಕ್ರಿಯೆ ನಡೆದಿತ್ತು. ಹಲವು ಮಳಿಗೆಗಳಲ್ಲಿ ಭದ್ರತೆ, ಸುರಕ್ಷತೆ ದೃಷ್ಟಿಯಿಂದ ಆಯಾ ಮಳಿಗೆಯವರು ಮಳಿಗೆಯ ಒಳಗೂ, ಹೊರಗೂ ವಿಶೇಷ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದರು.
