ಆಟೋಮೊಬೈಲ್ ಉದ್ಯಮದಲ್ಲಿ ಇನ್ನೂ 10 ಲಕ್ಷ ಉದ್ಯೋಗ ಕಡಿತ?
ಆಟೋಮೊಬೈಲ್ ಉದ್ಯಮದಲ್ಲಿ ಇನ್ನೂ 10 ಲಕ್ಷ ಉದ್ಯೋಗ ಕಡಿತ?| ಮಾರಾಟ ಕುಸಿತದಿಂದ ಅಲ್ಲೋಲ ಕಲ್ಲೋಲ| ಮುಂದಿನ 3 ತಿಂಗಳಲ್ಲಿ ಮತ್ತಷ್ಟುಉದ್ಯೋಗ ಕಟ್
ನವದೆಹಲಿ[ಆ.19]: ಆರ್ಥಿಕ ಹಿಂಜರಿತದಿಂದಾಗಿ ವಾಹನಗಳ ಮಾರಾಟ ಕುಸಿತವಾಗಿರುವುದರಿಂದ ದೇಶದ ಆಟೋಮೊಬೈಲ್ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದೆ. ಕಳೆದ ಕೆಲವು ತಿಂಗಳಿಂದ ಈ ಉದ್ಯಮದಲ್ಲಿ ಬರೋಬ್ಬರಿ 1 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ 5ರಿಂದ 10 ಲಕ್ಷ ಮಂದಿ ಕೆಲಸಕ್ಕೆ ಕುತ್ತು ಎದುರಾಗಲಿದೆ ಎಂದು ಆಟೋಮೊಬೈಲ್ ಕ್ಷೇತ್ರದ ತಜ್ಞರು ಅಂದಾಜಿಸಿದ್ದಾರೆ.
ವಾಹನಗಳ ಮಾರಾಟ ಭಾರಿ ಪ್ರಮಾಣದಲ್ಲಿ ಕುಸಿದಿರುವುದರಿಂದ ವಾಹನ ತಯಾರಿಕಾ ಕಂಪನಿಗಳು ಮಾತ್ರವೇ ಅಲ್ಲದೇ, ಬಿಡಿಭಾಗ ಪೂರೈಸುವ ಕಾರ್ಖಾನೆಗಳಲ್ಲಿ ನೌಕರರನ್ನು ತೆಗೆದುಹಾಕಲಾಗುತ್ತಿದೆ. ಮಾರಾಟ ಪ್ರತಿನಿಧಿಯಿಂದ ಹಿಡಿದು, ತಾಂತ್ರಿಕ ಸಿಬ್ಬಂದಿ, ಪೇಂಟ್, ವೆಲ್ಡಿಂಗ್, ಕ್ಯಾಸ್ಟಿಂಗ್, ಉತ್ಪಾದನಾ ತಂತ್ರಜ್ಞಾನ ಹಾಗೂ ಸವೀರ್‍ಸ್ ನೌಕರರ ಹುದ್ದೆಗೆ ಈಗ ಸಂಚಕಾರ ಎದುರಾಗಿದೆ.
ಪರಿಸ್ಥಿತಿ ಇದೇ ರೀತಿ 3-4 ತಿಂಗಳು ಮುಂದುವರಿದರೆ ಇನ್ನೂ 10 ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳುತ್ತಾರೆ ಎಂದು ಭಾರತೀಯ ಆಟೋಮೊಬೈಲ್ ಬಿಡಿಭಾಗ ಉತ್ಪಾದಕರ ಸಂಘದ ಮಹಾನಿರ್ದೇಶಕ ವಿನ್ನಿ ಮೆಹ್ತಾ ತಿಳಿಸಿದ್ದಾರೆ. ಇದೇ ವೇಳೆ, ಎಕ್ಸ್‌ಫೋನ್ ಹಾಗೂ ಟೀಮ್‌ಲೀಸ್ ಎಂಬ ನೇಮಕಾತಿ ಕಂಪನಿಗಳು ಮುಂದಿನ ತ್ರೈಮಾಸಿಕ ಅವಧಿಯಲ್ಲಿ 5 ಲಕ್ಷ ಮಂದಿಯ ಉದ್ಯೋಗ ಹೋಗಬಹುದು ಎಂದು ಅಂದಾಜಿಸಿವೆ.