*ಬೆಳಿಗ್ಗೆ 11ಕ್ಕೆ ಸಂಸತ್ತಿನಲ್ಲಿ ನಿರ್ಮಲಾ ಮಂಡನೆ*ತೆರಿಗೆ ಪರಿಷ್ಕರಣೆ, ಆರೋಗ್ಯ ವಲಯಕ್ಕೆ ಒತ್ತು?

ನವದೆಹಲಿ (ಫೆ. 1): ಕೋವಿಡ್‌ ಸಾಂಕ್ರಾಮಿಕದ (Covid 19) ಪರಿಣಾಮ 2 ವರ್ಷಗಳ ಕಾಲ ನಲುಗಿದ್ದ ಆರ್ಥಿಕತೆಗೆ ಮತ್ತೆ ಬಲ ತುಂಬುವ, ಮಧ್ಯಮ ವರ್ಗದ ಕನಸುಗಳನ್ನು ಈಡೇರಿಸುವ, 2025ರ ವೇಳೆಗೆ ದೇಶವನ್ನು 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಗೆ ಮುಟ್ಟಿಸುವ, ಆತ್ಮನಿರ್ಭರ ಭಾರತದ ಕನಸಿಗೆ ಮತ್ತಷ್ಟುನೀರೆಯುವ, ಮುನಿಸಿಕೊಂಡ ರೈತಾಪಿ ವಲಯವನ್ನು ಸಂತೈಸುವ, ಉದ್ಯೋಗ ಸೃಷ್ಟಿಯಂಥ ಬಹುದೊಡ್ಡ ಸವಾಲುಗಳನ್ನು ಮೆಟ್ಟಿನಿಂತು ಮುಂದೆ ಹೆಜ್ಜೆ ಇಡುವ ನಿರೀಕ್ಷೆಯ ಕೇಂದ್ರ ಬಜೆಟ್‌ ಮಂಗಳವಾರ ಬೆಳಗ್ಗೆ ಮಂಡನೆಯಾಗಲಿದೆ.

"

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಗಳವಾರ ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಬಜೆಟ್‌ ಮಂಡನೆ ಮಾಡಲಿದ್ದಾರೆ. ಇದು ಅವರ 4ನೇ ಬಜೆಟ್‌. ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷಾ ವರದಿಯು, ದೇಶದ ಆರ್ಥಿಕತೆ ಬೆಳವಣಿಗೆ ದರವು ಕೋವಿಡ್‌ ಪೂರ್ವ ಸ್ಥಿತಿಯನ್ನು ದಾಟಿದೆ ಎಂಬ ಸಿಹಿ ಸುದ್ದಿ ನೀಡಿರುವ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಇನ್ನಷ್ಟುಸುಧಾರಣಾ ಕ್ರಮಗಳ ಜೊತೆಜೊತೆಗೆ, ಕೃಷಿ, ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ವಲಯಗಳಿಗೆ ಇನ್ನಷ್ಟುಹಣಕಾಸು ನೆರವಿನ ಆಶಾಭಾವನೆ ವ್ಯಕ್ತವಾಗಿದೆ. ಬಂಡವಾಳ ಹರಿವು, ಉದ್ಯೋಗ ಸೃಷ್ಟಿಗೂ ಸರ್ಕಾರ ಒತ್ತು ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ:Budget 2022 LIVE: ಮೋದಿ ಸರಕಾರದ ಲೆಕ್ಕ, ನಿರ್ಮಲಾ ಮಂಡಿಸ್ತಾರೆ ಪಕ್ಕಾ!

ಬಜೆಟ್‌ ನಿರೀಕ್ಷೆಗಳು: ಸಚಿವೆ ನಿರ್ಮಲಾ ತಮ್ಮ ಹೊಸ ಬಜೆಟ್‌ನಲ್ಲಿ ಮಧ್ಯಮ ವರ್ಗದ ಬಹುದೊಡ್ಡ ಬೇಡಿಕೆಯಾದ ಆದಾಯ ಮಿತಿ ತೆರಿಗೆ ಮಿತಿಯನ್ನು ಇನ್ನಷ್ಟುಹೆಚ್ಚಿಸಬಹುದೆಂಬ ನಿರೀಕ್ಷೆ ಇದೆ. ಇದರ ಜೊತೆಗೆ ಸೆಕ್ಷನ್‌ 80ಸಿ ಮತ್ತು 80ಡಿ ನೀಡುವ ವಿನಾಯ್ತಿಗಳನ್ನು ವಿಸ್ತರಿಸುವ ನಿರೀಕ್ಷೆಯನ್ನೂ ಇಟ್ಟುಕೊಳ್ಳಲಾಗಿದೆ. ಜೊತೆಗೆ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಲು ಲಾಂಗ್‌ ಟಮ್‌ರ್‍ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ಹಿಂಪಡೆವ ಸಾಧ್ಯತೆ ಇದೆ. ಇನ್ನು ಕಾರ್ಪೊರೆಟ್‌ ವಲಯ ಮತ್ತು ಜನಸಾಮಾನ್ಯರು ಕೋವಿಡ್‌ ನಿರ್ವಹಣೆಗೆ ಮಾಡಿದ ವೆಚ್ಚವನ್ನು ಆದಾಯ ತೆರಿಗೆಯಲ್ಲಿ ವಿನಾಯಿತಿ ಪಡೆಯಲು ಅವಕಾಶ ಕಲ್ಪಿಸಬಹುದೆಂಬ ದೊಡ್ಡ ಆಶಾಭಾವನೆ ಇದೆ.

ಜೊತೆಗೆ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಲ್ಲಿರುವ ಕ್ರಿಪ್ಟೋಕರೆನ್ಸಿ ವಲಯಕ್ಕೆ ತೆರಿಗೆ, ಎಲೆಕ್ಟ್ರಿಕ್‌ ವಾಹನ ಉದ್ಯಮಕ್ಕೆ ನೆರವು ನೀಡಲು ಹಲವು ರಿಯಾಯಿತಿ ಘೋಷಣೆ, ಸೆಮಿಕಂಡಕ್ಟರ್‌ ವಲಯಕ್ಕೆ ಇನ್ನಷ್ಟುಪ್ರೋತ್ಸಾಹ, ಇನ್ನಷ್ಟುವಸ್ತುಗಳ ಮೇಲಿನ ಸೀಮಾ ಸುಂಕ ರದ್ದು, ಆರೋಗ್ಯ, ಶಿಕ್ಷಣ, ಮೂಲಸೌಕರ್ಯ, ಕೃಷಿ , ಗ್ರಾಮಿಣಾಭಿವೃದ್ಧಿ ವಲಯಕ್ಕೆ ಹೆಚ್ಚಿನ ಬಂಡವಾಳ ಹೂಡಲು ಪ್ರೋತ್ಸಾಹದ ವಿವಿಧ ಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: Economic Survey 2022: ಕೋವಿಡ್‌ ನಡುವೆಯೂ ದೇಶದ ಆರ್ಥಿಕಾಭಿವೃದ್ಧಿ ದರ ದಾಖಲೆ ಬೆಳವಣಿಗೆ!

ಕರ್ನಾಟಕದ ನಿರೀಕ್ಷೆಗಳೇನು?

1. ರಾಜ್ಯದ ಹೊಸ ರೈಲ್ವೆ ಯೋಜನೆಗಳಿಗೆ ಹೆಚ್ಚು ಹಣ

2. ಕೃಷ್ಣಾ ಮೇಲ್ದಂಡೆಗೆ ರಾಷ್ಟ್ರೀಯ ಯೋಜನೆಯ ಪಟ್ಟ

3. ಬೆಂಗಳೂರಿನಲ್ಲಿ ಸ್ಟಾರ್ಟಪ್‌ ಬಂಡವಾಳಕ್ಕೆ ಉತ್ತೇಜನ

4. ಕಬ್ಬು, ತಂಬಾಕು, ಭತ್ತ ಬೆಳೆಯುವ ರೈತರಿಗೆ ನೆರವು

5. ಐಟು ಆಧಾರಿತ ಸೇವೆ ಉತ್ತೇಜಿಸಲು ಹೊಸ ಯೋಜನೆ

ಬಜೆಟ್‌ ನಿರೀಕ್ಷೆಗಳೇನು?

- ಹಾಲಿ 5 ಲಕ್ಷ ರು.ವರೆಗೆ ಇರುವ ಆದಾಯ ತೆರಿಗೆ ಮಿತಿ ಹೆಚ್ಚಳ ನಿರೀಕ್ಷೆ

- 80ಸಿ ಅಡಿಯ 1.5 ಲಕ್ಷ ರು.ವರೆಗಿನ ಆದಾಯ ತೆರಿಗೆ ವಿನಾಯ್ತಿ ಮೊತ್ತ ಹೆಚ್ಚಳ ಸಾಧ್ಯತೆ

- ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಲು ಲಾಂಗ್‌ ಟಮ್‌ರ್‍ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ಹಿಂಪಡೆವ ಸಾಧ್ಯತೆ

- ಕಂಪನಿಗಳು ಹಾಗೂ ಜನರು ಕೋವಿಡ್‌ ನಿರ್ವಹಣೆಗೆ ಮಾಡಿದ ವೆಚ್ಚಕ್ಕೆ ಆದಾಯ ತೆರಿಗೆಯಿಂದ ವಿನಾಯ್ತಿ

- ಭಾರೀ ಸುದ್ದಿಯಲ್ಲಿರುವ ಕ್ರಿಪ್ಟೋ ಕರೆನ್ಸಿ ಮೇಲೆ ತೆರಿಗೆ ಸಾಧ್ಯತೆ

- ಎಲೆಕ್ಟ್ರಿಕ್‌ ವಾಹನ ಉದ್ಯಮಕ್ಕೆ ನೆರವು ನೀಡಲು ಹಲವು ರಿಯಾಯಿತಿ ಘೋಷಣೆ

- ಸೆಮಿಕಂಡಕ್ಟರ್‌ ವಲಯಕ್ಕೆ ಇನ್ನಷ್ಟುಪ್ರೋತ್ಸಾಹ

- ಇನ್ನಷ್ಟುವಸ್ತುಗಳ ಮೇಲಿನ ಸೀಮಾ ಸುಂಕ ರದ್ದು

- ಆರೋಗ್ಯ, ಶಿಕ್ಷಣ, ಮೂಲಸೌಕರ್ಯ, ಕೃಷಿ, ಗ್ರಾಮಿಣಾಭಿವೃದ್ಧಿ ವಲಯಕ್ಕೆ ಹೆಚ್ಚಿನ ಬಂಡವಾಳ

- ಕೋವಿಡ್‌ ಸಾಂಕ್ರಾಮಿಕದಿಂದ ಸೃಷ್ಟಿಯಾದ ಉದ್ಯೋಗ ನಷ್ಟತಡೆಗಟ್ಟಿಉದ್ಯೋಗ ಸೃಷ್ಟಿಗೆ ಒತ್ತು