ಹೀರೋ ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿ ಯಶಸ್ಸು ಸಾಧಿಸಿದೆ. ಇದೀಗ ಮೊದಲ ಬಾರಿಗೆ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡುತ್ತಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ಹಾಗೂ ಆಕರ್ಷಕ ಬೈಕ್ ಬಿಡುಗಡೆ ಮಾಡುತ್ತಿದೆ.
ನವದೆಹಲಿ (ಆ.08) ಎಲೆಕ್ಟಿಕ್ ವಾಹನ ಕ್ಷೇತ್ರದಲ್ಲಿ ಹೀರೋ ಮೋಟಾರ್ ಕ್ರಾಂತಿ ಮಾಡುತ್ತಿದೆ. ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಹೊಸ ದಾಖಲೆ ಬರೆದಿರುವ ಹೀರೋ ಇದೀಗ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡುತ್ತಿದೆ. ವಿಡಾ ಇವಿ ಅಡಿಯಲ್ಲಿ ಹೀರೋ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರಿಗೆ ನೀಡುತ್ತಿದೆ. ಇದೀಗ ವಿಡಾ ಮೂಲಕ ಮೊದಲ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡುತ್ತಿದೆ. ಅತ್ಯಾಕರ್ಷಕ, ಕೈಗೆಟುಕುವ ಬೆಲೆ ಹಾಗೂ ಗರಿಷ್ಠ ಮೈಲೇಜ್ ಸಾಮರ್ಥ್ಯದ ಇವಿ ಬೈಕ್ ಬಿಡುಗಡೆಗೆ ಹೀರೋ ಮುಂದಾಗಿದೆ.
ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಭಾರಿ ಪೈಪೋಟಿ ಇದೆ. ಆದರೆ ಎಲೆಕ್ಟ್ರಿಕ್ ಬೈಕ್ ವಿಭಾಗದಲ್ಲಿ ಕೆಲವೇ ಕೆಲವು ಬೈಕ್ ಲಭ್ಯವಿದೆ. ಒಬೆನ್, ರಿವಾಲ್ಟ್, ಅಲ್ಟ್ರಾವಾಯ್ಲೆಟ್, ಮ್ಯಾಟರ್ ಸೇರಿದಂತೆ ಕೆಲ ಎಲೆಕ್ಟ್ರಿಕ್ ಬೈಕ್‌ಗಳು ಲಭ್ಯವಿದೆ. ಇದೀಗ ಹೀರೋ ಕೂಡ ಎಂಟ್ರಿಕೊಡುತ್ತಿದೆ. ಈ ಮೂಲಕ ಭಾರತದಲ್ಲಿ ಹೊಸ ಇವಿ ಸಂಚಲನಕ್ಕೆ ಮುಂದಾಗಿದೆ.
ಹೀರೋ ಹಾಗೂ ಝೀರೋ ಜೊತೆಯಾಗಿ ಇವಿ ಬೈಕ್
ಹೀರೋ ಮೋಟಾರ್ ತನ್ನ ಹೊಸ ಎಲೆಕ್ಟ್ರಿಕ್ ಬೈಕ್ ನಿರ್ಮಾಣವನ್ನು ಅಮೆರಿಕದ ಅತೀ ದೊಡ್ಡ ಇವಿ ಆಟೋಮೊಬೈಲ್ ಕಂಪನಿಯಾಗಿರುವ ಝೀರೋ ಮೋಟಾರ್‌ಸೈಕಲ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಹೀರೋ ಹಾಗೂ ಝೀರೋ ಜೊತೆಗೂಡಿ ಇವಿ ಬೈಕ್ ಅಭಿವೃದ್ಧಿಪಡಿಸಲಿದೆ. ವಿಶೇಷ ಅಂದರೆ ಅಮೆರಿಕದ ತಂತ್ರಜ್ಞಾನ, ಬ್ಯಾಟರಿ ಪ್ಯಾಕ್ ಮೂಲಕ ಭಾರತದಲ್ಲಿ ಇವಿ ಬೈಕ್ ಸಂಪೂರ್ಣವಾಗಿ ನಿರ್ಮಾಣವಾಗಲಿದೆ. ಇದರಿಂದ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಬೈಕ್ ಭಾರತೀಯರಿಗೆ ಲಭ್ಯವಾಗಲಿದೆ.
ಪ್ರೀಮಿಯಂ ಸ್ಪೋರ್ಟ್ಸ್ ಬೈಕ್ ಲಾಂಚ್
ಹೀರೋ ಹಾಗೂ ಝೀರೋ ಜೊತೆಗೂಡಿ ಮೊದಲ ಎಲೆಕ್ಟ್ರಿಕ್ ಬೈಕ್‌ನ್ನು ಪ್ರೀಮಿಯಂ ಸ್ಪೋರ್ಟ್ಸ್ ಬೈಕ್ ಆಗಿ ಬಿಡುಗಡೆ ಮಾಡಲು ಮುಂದಾಗಿದೆ. ಪ್ರತಿ ದಿನದ ಬಳಕೆ, ಲಾಂಗ್ ರೈಡ್, ಸಿಟಿ ರೈಡ್ ಸೇರಿದಂತೆ ಎಲ್ಲಾ ರೀತಿಯಲ್ಲಿ ಬಳಕೆ ಮಾಡಲು ಯೋಗ್ಯವಾಗುವಂತ ಇವಿ ಬೈಕ್ ಹೀರೋ ಬಿಡುಗಡೆ ಮಾಡಲಿದೆ. ಸಿಟಿ ಟ್ರಾಫಿಕ್‌ನಲ್ಲಿ, ಲಾಂಗ್ ರೈಡ್ ವೇಳೆ ಹೈವೈನಲ್ಲಿ ಉತ್ತಮ ಮೈಲೇಜ್ ರೇಂಜ್ ನೀಡಬಲ್ಲ ಬ್ಯಾಟರಿ ಪ್ಯಾಕ್ ನೀಡಲಿದೆ. ಅತ್ಯಾಧುನಿಕ ಫೀಚರ್ಸ್ ಈ ಬೈಕ್‌ನಲ್ಲಿ ಇರಲಿದೆ. 2027ರ ಆರಂಭದಲ್ಲಿ ಹೊಚ್ಚ ಹೊಸ ಹೀರೋ ಎಲೆಕ್ಟ್ರಿಕ್ ಬೈಕ್ ಭಾರತದಲ್ಲಿ ಬಿಡುಗಡೆಯಾಗಲಿದೆ.


