ಬಜಾಜ್ ಆಟೋ ತನ್ನ ಜನಪ್ರಿಯ 125ಸಿಸಿ ಬೈಕ್ 'ಪಲ್ಸರ್ N125' ಪೂರೈಕೆಯನ್ನು ಡೀಲರ್‌ಗಳಿಗೆ ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ. ಈ ನಿರ್ಧಾರದಿಂದ ಬೈಕ್ ಶಾಶ್ವತವಾಗಿ ನಿಲ್ಲಲಿದೆಯೇ ಅಥವಾ ಹೊಸ ಫೀಚರ್‌ಗಳೊಂದಿಗೆ ಮರುಪ್ರವೇಶ ಮಾಡಲಿದೆಯೇ ಎಂಬ ಚರ್ಚೆ ಶುರುವಾಗಿದೆ. 

ಬೆಂಗಳೂರು (ಜೂ.30): ನೀವು 125ಸಿಸಿ ಸಾಮರ್ಥ್ಯದ ಸ್ಪೋರ್ಟಿ ಲುಕ್ ಹೊಂದಿರುವ ಬೈಕ್ ಖರೀದಿಸಲು ಯೋಚಿಸುತ್ತಿದ್ದರೆ, ನಿಮಗೊಂದು ಪ್ರಮುಖ ಸುದ್ದಿ ಇಲ್ಲಿದೆ. ದೇಶದ ಮುಂಚೂಣಿ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ 'ಬಜಾಜ್ ಆಟೋ' (Bajaj Auto), ತನ್ನ ಜನಪ್ರಿಯ ಮಾಡೆಲ್ ಆದ 'ಪಲ್ಸರ್ N125' (Pulsar N125) ಬೈಕ್‌ನ ಪೂರೈಕೆಯನ್ನು ಡೀಲರ್‌ಗಳಿಗೆ ಸದ್ಯಕ್ಕೆ ಸ್ಥಗಿತಗೊಳಿಸಿದೆ ಎಂದು ವರದಿಗಳು ತಿಳಿಸಿವೆ. ಕಂಪನಿಯ ಈ ದಿಢೀರ್ ನಿರ್ಧಾರದಿಂದಾಗಿ, ಬಜಾಜ್ ಈ ಬೈಕ್ ಅನ್ನು ಮಾರುಕಟ್ಟೆಯಿಂದ ಶಾಶ್ವತವಾಗಿ ಸ್ಥಗಿತಗೊಳಿಸುತ್ತಿದೆಯೇ ಅಥವಾ ಇದರ ಸ್ಥಾನಕ್ಕೆ ಮತ್ತಷ್ಟು ಅತ್ಯಾಧುನಿಕ ಫೀಚರ್ಸ್ ಒಳಗೊಂಡ ಹೊಸ ಮಾಡೆಲ್ ಅನ್ನು ಪರಿಚಯಿಸಲಿದೆಯೇ ಎಂಬ ಚರ್ಚೆ ಆಟೋಮೊಬೈಲ್ ವಲಯದಲ್ಲಿ ಜೋರಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ, ಈ ಕುರಿತು ಬಜಾಜ್ ಆಟೋ ಸಂಸ್ಥೆಯಿಂದ ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ವಿಶೇಷವೆಂದರೆ, ಪಲ್ಸರ್ N125 ಬೈಕ್ ಇನ್ನೂ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರದರ್ಶನಗೊಳ್ಳುತ್ತಿರುವುದರಿಂದ, ಬೈಕ್ ಸಂಪೂರ್ಣ ನಿಲ್ಲುತ್ತದೆಯೇ ಅಥವಾ ಹೊಸ ಅವತಾರದಲ್ಲಿ ಮರುಪ್ರವೇಶ ಮಾಡಲಿದೆಯೇ ಎಂಬ ಗೊಂದಲ ಮುಂದುವರಿದಿದೆ.

2 ವರ್ಷಗಳ ಹಿಂದೆ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು ಈ ಬೈಕ್

ಬಜಾಜ್ ಪಲ್ಸರ್ N125 ಬೈಕ್ ಅನ್ನು ಎರಡು ವರ್ಷಗಳ ಹಿಂದೆ, ಅಂದರೆ ಅಕ್ಟೋಬರ್ 2024 ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. ಆ ಸಮಯದಲ್ಲಿ ಇದರ ಆರಂಭಿಕ ಎಕ್ಸ್-ಶೋರೂಮ್ ಬೆಲೆಯನ್ನು ₹95,000 ಎಂದು ನಿಗದಿಪಡಿಸಲಾಗಿತ್ತು. ಸ್ಟೈಲಿಶ್ ಲುಕ್ ಹಾಗೂ ಶಕ್ತಿಶಾಲಿ ಪರ್ಫಾಮೆನ್ಸ್ ಬಯಸುವ ಯುವಕರನ್ನು ಗಮನದಲ್ಲಿಟ್ಟುಕೊಂಡು ಇದನ್ನು ಸಿದ್ಧಪಡಿಸಲಾಗಿತ್ತು. ಮಾರುಕಟ್ಟೆಯಲ್ಲಿ ಇದು ಹೀರೋ ಎಕ್ಸ್‌ಟ್ರೀಮ್ 125ಆರ್ (Hero Xtreme 125R) ಮತ್ತು ಹೊಂಡಾ ಸಿಬಿ125 ಹಾರ್ನೆಟ್ (Honda CB125 Hornet) ಬೈಕ್‌ಗಳಿಗೆ ಪ್ರಬಲ ಪೋಟಿಯೇ ನೀಡುತ್ತಾ ಬಂದಿದೆ. ಬಜಾಜ್ ಸಂಸ್ಥೆಯು ಈಗಾಗಲೇ ಘೋಷಿಸಿರುವಂತೆ 2026 ರ ಸಾಲಿನಲ್ಲಿ ಒಟ್ಟು 8 ಹೊಸ ಮೋಟಾರ್‌ಸೈಕಲ್‌ಗಳನ್ನು ಮಾರುಕಟ್ಟೆಗೆ ತರಲು ಸಜ್ಜಾಗಿದ್ದು, ಇದೇ ಕಾರಣಕ್ಕೆ ಪಲ್ಸರ್ N125 ಪರಿಷ್ಕೃತ ರೂಪದಲ್ಲಿ ಬರುವ ಸಾಧ್ಯತೆ ಹೆಚ್ಚಿದೆ.

ಲುಕ್ ವಿಷಯದಲ್ಲಿ ಪಲ್ಸರ್ N125 ಅತ್ಯಂತ ಆಕರ್ಷಕ ಹಾಗೂ ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ. ಇದರಲ್ಲಿ ಶಾರ್ಪ್ ಎಲ್‌ಇಡಿ (LED) ಹೆಡ್‌ಲೈಟ್, ಸ್ಪೋರ್ಟಿ ಗ್ರಾಫಿಕ್ಸ್, ಸ್ಪ್ಲಿಟ್ ಸೀಟ್ (Split Seat), ಅಂಡರ್‌ಬೆಲಿ ಎಕ್ಸಾಸ್ಟ್ (Underbelly Exhaust) ಮತ್ತು ಸ್ಟೈಲಿಶ್ ರಿಮ್ ಸ್ಟಿಕ್ಕರ್‌ಗಳನ್ನು ನೀಡಲಾಗಿತ್ತು. ಈ ವಿನ್ಯಾಸವು ಕೇವಲ ನೋಡಲು ಮಾತ್ರವಲ್ಲದೆ, ನಗರದ ಟ್ರಾಫಿಕ್ ಹಾಗೂ ಗಿಜಿಗುಡುವ ರಸ್ತೆಗಳಲ್ಲಿ ಬೈಕ್ ಅನ್ನು ಸುಲಭವಾಗಿ ನಿಯಂತ್ರಿಸಲು ರೈಡರ್‌ಗೆ ನೆರವಾಗುತ್ತದೆ.

ಕಡಿಮೆ ತೂಕ ಮತ್ತು ಬಲಿಷ್ಠ ಎಂಜಿನ್ ಸಾಮರ್ಥ್ಯ

ಪರ್ಫಾಮೆನ್ಸ್ ವಿಚಾರದಲ್ಲೂ ಈ ಬೈಕ್ ಸೈ ಎನಿಸಿಕೊಂಡಿದೆ. ಬೈಕ್‌ನ ಒಟ್ಟು ತೂಕ ಕೇವಲ 125 ಕೆಜಿ ಆಗಿರುವುದರಿಂದ, ಇದರ ಪವರ್-ಟು-ವೇಟ್ ರೇಶಿಯೋ (Power-to-weight ratio) ಅತ್ಯುತ್ತಮವಾಗಿದೆ. ತನ್ನ ವಿಭಾಗದಲ್ಲೇ ಅತ್ಯಂತ ವೇಗವಾಗಿ, ಅಂದರೆ ಕೇವಲ 0 ಯಿಂದ 60 ಕಿಲೋಮೀಟರ್ ವೇಗವನ್ನು ಅತ್ಯಲ್ಪ ಸೆಕೆಂಡುಗಳಲ್ಲಿ ತಲುಪುವ ಬೈಕ್ ಇದಾಗಿದೆ ಎಂದು ಕಂಪನಿ ಹೇಳಿಕೊಂಡಿತ್ತು. ಈ ಬೈಕ್‌ಗೆ 124.59cc ಸಿಂಗಲ್-ಸಿಲಿಂಡರ್ ಎಂಜಿನ್ ಅಳವಡಿಸಲಾಗಿದ್ದರೆ, ಇದು 12 PS ಪವರ್ ಮತ್ತು 11 Nm ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು.ಎಂಜಿನ್ ಜೊತೆಗೆ 5-ಸ್ಪೀಡ್ ಕಂಟ್ರೋಲ್ ಗೇರ್‌ಬಾಕ್ಸ್ ನೀಡಲಾಗಿತ್ತು.

ಫೀಚರ್ಸ್ ವಿಷಯಕ್ಕೆ ಬಂದರೆ, ಪಲ್ಸರ್ N125 ಬೈಕ್‌ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ 'ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್' (Digital Instrument Cluster) ನೀಡಲಾಗಿದೆ. ಇದರ ಸಹಾಯದಿಂದ ರೈಡಿಂಗ್ ಮಾಡುವಾಗಲೇ ತನಗೆ ಬರುವ ಕಾಲ್ ಅಲರ್ಟ್‌ಗಳು, ಮಿಸ್ಡ್ ಕಾಲ್‌ಗಳು ಹಾಗೂ ಮೆಸೇಜ್ ನೋಟಿಫಿಕೇಶನ್‌ಗಳನ್ನು ಪರದೆಯ ಮೇಲೆ ನೋಡಬಹುದು. ಇದರೊಂದಿಗೆ ಯುಎಸ್‌ಬಿ (USB) ಚಾರ್ಜಿಂಗ್ ಪೋರ್ಟ್, ಫ್ಯುಯೆಲ್ ಇಂಡಿಕೇಟರ್ ಹಾಗೂ ರಿಯಲ್-ಟೈಮ್ ಮೈಲೇಜ್ ಮಾಹಿತಿಯೂ ಇದರಲ್ಲಿ ಲಭ್ಯವಿದೆ.

ಬಜಾಜ್ ಸಂಸ್ಥೆಗೆ 125ಸಿಸಿ ಸೆಗ್ಮೆಂಟ್ ಅತ್ಯಂತ ಪ್ರಮುಖ

ಬಜಾಜ್ ಆಟೋ ಕಂಪನಿಗೆ ಭಾರತೀಯ ಮಾರುಕಟ್ಟೆಯಲ್ಲಿ 125ಸಿಸಿ ಸಾಮರ್ಥ್ಯದ ವಿಭಾಗವು ಅತ್ಯಂತ ನಿರ್ಣಾಯಕವಾಗಿದೆ. ಕಂಪನಿಯ ಒಟ್ಟು ಮಾಸಿಕ ಬೈಕ್ ಮಾರಾಟದ ಪೈಕಿ ಬರೋಬ್ಬರಿ ಶೇಕಡಾ 32 ರಷ್ಟು ಪಾಲು ಕೇವಲ ಪಲ್ಸರ್ 125 ಸರಣಿಯಿಂದಲೇ ಬರುತ್ತದೆ. ಈ ಜನಪ್ರಿಯ ಸರಣಿಯಲ್ಲಿ ಸದ್ಯಕ್ಕೆ ಪಲ್ಸರ್ 125 (Pulsar 125), ಪಲ್ಸರ್ N125 (Pulsar N125) ಮತ್ತು ಪಲ್ಸರ್ NS125 (Pulsar NS125) ಬೈಕ್‌ಗಳು ಲಭ್ಯವಿವೆ. ಈ ಕಾರಣದಿಂದಾಗಿ, ಕಂಪನಿಯು ಈ ಸೆಗ್ಮೆಂಟ್ ಅನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆಯೇ ಹೊರತು ಗ್ರಾಹಕರ ನೆಚ್ಚಿನ ಬೈಕ್ ಅನ್ನು ಸಂಪೂರ್ಣವಾಗಿ ಕೈಬಿಡುವುದಿಲ್ಲ ಎಂಬುದು ಆಟೋ ತಜ್ಞರ ಅಭಿಪ್ರಾಯವಾಗಿದೆ.