ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲನ್ನು ಯಶವಂತಪುರದವರೆಗೆ ವಿಸ್ತರಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಇದರಿಂದ ಬೆಂಗಳೂರು ಮತ್ತು ಕರಾವಳಿ ಜಿಲ್ಲೆಗಳ ನಡುವಿನ ಹಗಲು ಹೊತ್ತಿನ ಪ್ರಯಾಣದ ಸಮಯ ಭಾರೀ ಉಳಿತಾಯವಾಗಲಿದೆ. ನವೆಂಬರ್ ಮೂರನೇ ವಾರದೊಳಗೆ ಈ ನೂತನ ರೈಲು ಸೇವೆಗೆ ಚಾಲನೆ ದೊರೆಯುವ ನಿರೀಕ್ಷೆಯಿದೆ.
ಬೆಂಗಳೂರು (ಅ.31): ಕರಾವಳಿ ಕರ್ನಾಟಕ ಹಾಗೂ ರಾಜಧಾನಿ ಬೆಂಗಳೂರು ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ರೈಲ್ವೆ ಸಚಿವಾಲಯದಿಂದ ಭಾರಿ ಸಿಹಿ ಸುದ್ದಿ ಸಿಕ್ಕಿದೆ. ಪ್ರಸ್ತುತ ಚಾಲನೆಯಲ್ಲಿದ್ದ ಮಂಗಳೂರು ಸೆಂಟ್ರಲ್-ಮಡಗಾಂವ್ ವಂದೇ ಭಾರತ್ ರೈಲನ್ನು ಯಶವಂತಪುರದವರೆಗೆ ವಿಸ್ತರಿಸಿ 'ಯಶವಂತಪುರ-ಮಡಗಾಂವ್-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್' (ಮಂಗಳೂರು ಜಂಕ್ಷನ್ ಮಾರ್ಗವಾಗಿ) ಹೆಸರಿನಲ್ಲಿ ಚಾಲನೆ ನೀಡಲು ರೈಲ್ವೆ ಮಂಡಳಿಯು ನೂತನ ವೇಳಾಪಟ್ಟಿಯೊಂದಿಗೆ ಅಧಿಕೃತ ಅನುಮೋದನೆ ನೀಡಿದೆ.
ರಾಜಧಾನಿಯಿಂದ ಕರಾವಳಿ ಭಾಗಕ್ಕೆ ರಾತ್ರಿ ವೇಳೆಯಲ್ಲಿ ಸಂಚರಿಸುವ 'ಪಂಚಗಂಗಾ ಎಕ್ಸ್‌ಪ್ರೆಸ್' ರೈಲಿಗೆ ದಿನನಿತ್ಯ ವಿಪರೀತ ದಟ್ಟಣೆ ಇರುತ್ತಿತ್ತು. ಈಗ ಪಂಚಗಂಗಾ ಮಾದರಿಯಲ್ಲೇ ಬೆಂಗಳೂರಿನಿಂದ ಕರಾವಳಿಗೆ ತೆರಳಲು ಬೆಳಗ್ಗಿನ ಸಮಯದಲ್ಲಿ ಅತ್ಯಂತ ವೇಗದ 'ವಂದೇ ಭಾರತ್ ಎಕ್ಸ್‌ಪ್ರೆಸ್' ದೊರೆಯುತ್ತಿರುವುದು ಪ್ರಯಾಣಿಕರಿಗೆ ಮಹತ್ವದ ಸಮಯ ಉಳಿತಾಯ ಮಾಡಲಿದೆ.
ನವೆಂಬರ್ 3ನೇ ವಾರದೊಳಗೆ ಈ ವಿಸ್ತರಿತ ನೂತನ ರೈಲು ಸೇವೆಗೆ ಚಾಲನೆ ನೀಡಲಾಗುವುದು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಭರವಸೆ ನೀಡಿದ್ದಾರೆ. ಸಚಿವರು ಖುದ್ದಾಗಿ ಮಂಗಳೂರಿಗೆ ಆಗಮಿಸಿ ಈ ರೈಲಿಗೆ ಉದ್ಘಾಟನೆ ನೆರವೇರಿಸಲಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ. ಈ ಮೂರೂ ಕರಾವಳಿ ಜಿಲ್ಲೆಗಳನ್ನು ಬೆಂಗಳೂರಿಗೆ ವೇಗವಾಗಿ ಬೆಸೆಯುವ ಈ ಯೋಜನೆ ಕರಾವಳಿಗರ ಬಹುದಿನಗಳ ಕನಸಾಗಿತ್ತು. ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಿರಂತರ ಶ್ರಮದಿಂದಾಗಿ ರೈಲ್ವೇ ಸಚಿವಾಲಯವು ಪ್ರಸ್ತುತ ಇದ್ದ 20645/20646 ಮಡಗಾಂವ್-ಮಂಗಳೂರು ಸೆಂಟ್ರಲ್ ವಂದೇ ಭಾರತ್ ರೈಲನ್ನು ರದ್ದುಗೊಳಿಸಿ, ಸಂಪೂರ್ಣ ನೂತನ ಸಂಖ್ಯೆಯೊಂದಿಗೆ ಯಶವಂತಪುರದವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.
ರೈಲ್ವೆ ಮಂಡಳಿಯ ನೂತನ ಸಮಯ ಮತ್ತು ವೇಳಾಪಟ್ಟಿ (26655 / 26656)
ರೈಲ್ವೇ ಬೋರ್ಡ್ ಬಿಡುಗಡೆ ಮಾಡಿರುವ ನೂತನ ಆದೇಶದ ಪ್ರಕಾರ, ರೈಲು ಸಂಖ್ಯೆ 26655 ಯಶವಂತಪುರ - ಮಡಗಾಂವ್ ಮತ್ತು ರೈಲು ಸಂಖ್ಯೆ 26656 ಮಡಗಾಂವ್ - ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ವಾರದಲ್ಲಿ 6 ದಿನ ಸಂಚರಿಸಲಿದೆ.
ಯಶವಂತಪುರದಿಂದ ಹೊರಡುವ ಸಮಯ (26655): ಯಶವಂತಪುರದಿಂದ ಪ್ರತಿದಿನ (ಬುಧವಾರ ಹೊರತುಪಡಿಸಿ) ಬೆಳಿಗ್ಗೆ 07:35 ಕ್ಕೆ ಹೊರಟು, ಮಧ್ಯಾಹ್ನ 03:05 ಕ್ಕೆ ಮಂಗಳೂರು ಜಂಕ್ಷನ್, ಸಂಜೆ 07:45 ಕ್ಕೆ ಕಾರವಾರ ಹಾಗೂ ರಾತ್ರಿ 08:55 ಕ್ಕೆ ಮಡಗಾಂವ್ ತಲುಪಲಿದೆ.
ಮಡಗಾಂವ್‌ನಿಂದ ಹೊರಡುವ ಸಮಯ (26656): ಮಡಗಾಂವ್‌ನಿಂದ ಪ್ರತಿದಿನ (ಗುರುವಾರ ಹೊರತುಪಡಿಸಿ) ಬೆಳಿಗ್ಗೆ 08:20 ಕ್ಕೆ ಹೊರಟು, 09:03 ಕ್ಕೆ ಕಾರವಾರ, ಮಧ್ಯಾಹ್ನ 01:50 ಕ್ಕೆ ಮಂಗಳೂರು ಜಂಕ್ಷನ್ ಹಾಗೂ ರಾತ್ರಿ 09:15 ಕ್ಕೆ ಯಶವಂತಪುರ ತಲುಪಲಿದೆ.
ಯಶವಂತಪುರ - ಮಡಗಾಂವ್ ವಂದೇ ಭಾರತ್ ಪೂರ್ಣ ವೇಳಾಪಟ್ಟಿ
| ನಿಲ್ದಾಣಗಳು (Station) | ಯಶವಂತಪುರ - ಮಡಗಾಂವ್ (26655) ಆಗಮನ/ಹೊರಡುವಿಕೆ | ಮಡಗಾಂವ್ - ಯಶವಂತಪುರ (26656) ಆಗಮನ/ಹೊರಡುವಿಕೆ |
| ಯಶವಂತಪುರ (Yesvantpur) | -- / 07:35 (D) | 21:15 (A) / -- |
| ಶ್ರವಣಬೆಳಗೊಳ (Shravanabelagola) | 09:03 / 09:05 | 18:43 / 18:45 |
| ಹಾಸನ (Hassan) | 09:38 / 09:40 | 18:13 / 18:15 |
| ಸಕಲೇಶಪುರ (Sakleshpur) | 10:20 / 10:22 | 17:30 / 17:32 |
| ಸುಬ್ರಹ್ಮಣ್ಯ ರೋಡ್ (Subrahmanya Road) | 12:40 / 12:42 | 15:28 / 15:30 |
| ಕಬಕ ಪುತ್ತೂರು (Kabaka Puttur) | 13:25 / 13:27 | 14:43 / 14:45 |
| ಮಂಗಳೂರು ಜಂಕ್ಷನ್ (Mangaluru Jn.) | 15:05 / 15:15 | 13:50 / 14:00 |
| ತೋಕೂರು (Thokur - Passing) | 15:45 | 13:20 |
| ಉಡುಪಿ (Udupi) | 16:20 / 16:22 | 12:18 / 12:20 |
| ಕುಂದಾಪುರ (Kundapura) | 16:38 / 16:40 | 11:48 / 11:50 |
| ಮೂಕಾಂಬಿಕಾ ರೋಡ್ ಬೈಂದೂರು | 17:20 / 17:22 | 11:20 / 11:22 |
| ಮುರುಡೇಶ್ವರ (Murdeshwar) | 18:00 / 18:02 | 11:00 / 11:02 |
| ಗೋಕರ್ಣ ರೋಡ್ (Gokarna Road) | 19:00 / 19:02 | 09:48 / 09:50 |
| ಕಾರವಾರ (Karwar) | 19:45 / 19:47 | 09:03 / 09:05 |
| ಮಡಗಾಂವ್ (Madgaon) | 20:55 (A) / -- | -- / 08:20 (D) |
ನಿಲುಗಡೆ ನಿಲ್ದಾಣಗಳು: ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಮುರುಡೇಶ್ವರ, ಗೋಕರ್ಣ ರೋಡ್ ಹಾಗೂ ಕಾರವಾರ.
ಪ್ರಯಾಣದ ದಿನಗಳು
- 26655 ಯಶವಂತಪುರದಿಂದ: ವಾರದಲ್ಲಿ 6 ದಿನ (ಬುಧವಾರ ಹೊರತುಪಡಿಸಿ).
- 26656 ಮಡಗಾಂವ್‌ನಿಂದ: ವಾರದಲ್ಲಿ 6 ದಿನ (ಗುರುವಾರ ಹೊರತುಪಡಿಸಿ)
ಮಂಗಳೂರು ಜಂಕ್ಷನ್‌ನಲ್ಲಿ ನಿರ್ವಹಣೆ
ಈ ರೈಲನ್ನು ಯಶವಂತಪುರದಲ್ಲಿ ಪ್ರಾಥಮಿಕ ನಿರ್ವಹಣೆ (PM) ಹಾಗೂ ಮಡಗಾಂವ್‌ನಲ್ಲಿ OEM ನಿರ್ವಹಣೆ ನಡೆಯಲಿದೆ. ನೀರು ಪೂರೈಕೆಗಾಗಿ ಮಂಗಳೂರು ಜಂಕ್ಷನ್‌ನಲ್ಲಿ 10 ನಿಮಿಷ ತಂಗಲಿದೆ. ರೇಕ್ಸ್ ಸೇವೆಗಾಗಿ ಒಟ್ಟು 2 ವಂದೇ ಭಾರತ್ ರಾಕ್‌ಗಳನ್ನು ನಿಯೋಜಿಸಲಾಗಿದೆ.
ಕೊಂಕಣ ರೈಲ್ವೆ ವಿಲೀನ ಹಾಗೂ ಸ್ಲೀಪರ್ ವಂದೇ ಭಾರತ್ ಚಿಂತನೆ
ಇದೇ ವೇಳೆ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ವಿಷಯದ ಕುರಿತು ಸಚಿವ ಅಶ್ವಿನ್ ವೈಷ್ಣವ್ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಅಲ್ಲದೆ, ದಕ್ಷಿಣ ಭಾರತದ ಮೊದಲ ಸ್ಲೀಪರ್ ವಂದೇ ಭಾರತ್ ಎಕ್ಸ್‌ಪ್ರೆಸ್ ಆದ 'ಬೆಂಗಳೂರು-ಮುಂಬೈ' ರೈಲು ಸಹ ಶೀಘ್ರದಲ್ಲೇ ಚಾಲನೆಗೊಳ್ಳಲು ನಿಗದಿಯಾಗಿದೆ. ಬೆಳಗ್ಗೆ 07:35ಕ್ಕೆ ಬೆಂಗಳೂರಿನಲ್ಲಿ ರೈಲು ಹತ್ತಿದರೆ ಕೇವಲ 7 ಗಂಟೆ 30 ನಿಮಿಷಗಳಲ್ಲಿ ಮಂಗಳೂರು ಜಂಕ್ಷನ್ ಹಾಗೂ 12 ಗಂಟೆ 10 ನಿಮಿಷಗಳಲ್ಲಿ ಕಾರವಾರ ತಲುಪಬಹುದು. ಘಾಟ್ ರಸ್ತೆಯ ಸುಂದರ ಪ್ರಕೃತಿಯ ನಡುವೆ ಪ್ರಯಾಣಿಕರಿಗೆ ಕರಾವಳಿಗೆ ತಲುಪಲು ಈ ನೂತನ ವಂದೇ ಭಾರತ್ ಸೂಪರ್‌ಫಾಸ್ಟ್ ಕನೆಕ್ಟಿವಿಟಿ ನೀಡಲಿದೆ.






