ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಆಹಾರ ಸುರಕ್ಷತೆ ಮತ್ತು ಆಹಾರದ ಗುಣಮಟ್ಟದ ಬಗ್ಗೆ ಆತಂಕ ಮೂಡಿಸುವ ಘಟನೆ ನಡೆದಿದೆ. ಸಸ್ಯಾಹಾರಿ ಬಿರಿಯಾನಿ ಆರ್ಡರ್ ಮಾಡಿದ್ದ ಪ್ರಯಾಣಿಕನಿಗೆ ಅದರಲ್ಲಿ ಚಿಕನ್ ತುಂಡುಗಳು ಪತ್ತೆಯಾಗಿವೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಆಹಾರ ಸುರಕ್ಷತೆ ಮತ್ತು ಆಹಾರದ ಗುಣಮಟ್ಟದ ಬಗ್ಗೆ ಆತಂಕ ಮೂಡಿಸುವ ಘಟನೆ ನಡೆದಿದೆ. ಸಸ್ಯಾಹಾರಿ ಬಿರಿಯಾನಿ ಆರ್ಡರ್ ಮಾಡಿದ್ದ ಪ್ರಯಾಣಿಕನಿಗೆ ಅದರಲ್ಲಿ ಚಿಕನ್ ತುಂಡುಗಳು ಪತ್ತೆಯಾಗಿವೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕ ರೆಸ್ಟೋರೆಂಟ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೆಜ್ ಬಿರಿಯಾನಿ ಆರ್ಡರ್ ಮಾಡಿದರೆ ಸಿಕ್ಕಿದ್ದು ಚಿಕನ್ ತುಂಡು!
ಪಿಯೂಷ್ ಅಗರ್ವಾಲ್ ಎಂಬ ಪ್ರಯಾಣಿಕ ಶನಿವಾರ ಕೆಂಪೇಗೌಡ ವಿಮಾನ ನಿಲ್ದಾಣದ 16 ಮತ್ತು 17ನೇ ಗೇಟ್ಗಳ ನಡುವಿನ 'ಟೇಸ್ಟ್ ಆಫ್ ಇಂಡಿಯಾ ಇನ್ 11' ಎಂಬ ರೆಸ್ಟೋರೆಂಟ್ನಲ್ಲಿ ವೆಜಿಟೇರಿಯನ್ ಬಿರಿಯಾನಿ ಆರ್ಡರ್ ಮಾಡಿದ್ದರು. ಬಿಲ್ನಲ್ಲೂ ಅದನ್ನು ಸಸ್ಯಾಹಾರಿ ಆಹಾರವೆಂದೇ ನಮೂದಿಸಲಾಗಿತ್ತು. ಆದರೆ ಬಿರಿಯಾನಿ ತಿನ್ನುವಾಗ ಅದರಲ್ಲಿ ಚಿಕನ್ ತುಂಡುಗಳು ಇರುವುದು ಪತ್ತೆಯಾಗಿದೆ. ಈ ಬಗ್ಗೆ ರೆಸ್ಟೋರೆಂಟ್ ಮ್ಯಾನೇಜರ್ ಅವರನ್ನು ಪ್ರಶ್ನಿಸಿದ ಪಿಯೂಷ್, ತಮ್ಮ ಕುಟುಂಬ ಕಟ್ಟುನಿಟ್ಟಿನ ಸಸ್ಯಾಹಾರಿಗಳೆಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಮಕ್ಕಳೂ ಅದು ಸಸ್ಯಾಹಾರಿ ಆಹಾರವೆಂದು ಭಾವಿಸಿ ಅರಿಯದೆಯೇ ಸೇವಿಸಿದ್ದಾರೆ. ಇದರಿಂದ ತಮ್ಮ ಕುಟುಂಬಕ್ಕೆ ತೀವ್ರ ಮಾನಸಿಕ ನೋವುಂಟಾಗಿದೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಪೂರ್ಣ ಬಿರಿಯಾನಿ ನಾನ್ವೆಜ್ ಆಗಿರಲಿಲ್ಲ, ಚಿಕನ್ ತುಂಡುಗಳಿದ್ದವು'
ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಪಿಯೂಷ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ಅವರು ಸ್ಪಷ್ಟನೆ ನೀಡಿದ್ದು, ತಮಗೆ ನೀಡಿದ ಬಿರಿಯಾನಿ ಸಂಪೂರ್ಣ ನಾನ್ವೆಜ್ ಆಗಿರಲಿಲ್ಲ. ಆದರೆ ಅದರಲ್ಲಿ ಸಣ್ಣ ಸಣ್ಣ ಚಿಕನ್ ತುಂಡುಗಳು ಇದ್ದವು ಎಂದು ತಿಳಿಸಿದ್ದಾರೆ. ಇಷ್ಟಾದರೂ ರೆಸ್ಟೋರೆಂಟ್ನಿಂದ ಪೂರ್ಣ ಬಿಲ್ ಪಾವತಿಸುವಂತೆ ಕೇಳಲಾಗಿದ್ದು, ಹಣವನ್ನೂ ಮರುಪಾವತಿ ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ. ಈ ಬಗ್ಗೆ ಆಹಾರ ಸುರಕ್ಷತಾ ಅಧಿಕಾರಿಗಳು, ಬೆಂಗಳೂರು ವಿಮಾನ ನಿಲ್ದಾಣದ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ತನಿಖೆ ನಡೆಸಬೇಕು. ಆರ್ಡರ್ ದಾಖಲೆಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ತನಿಖೆ ಆರಂಭಿಸಿದ ವಿಮಾನ ನಿಲ್ದಾಣದ ಆಡಳಿತ ಮಂಡಳಿ
ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣಾ ಸಂಸ್ಥೆಯಾದ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (BIAL) ಈ ಬಗ್ಗೆ ಪ್ರತಿಕ್ರಿಯಿಸಿದೆ. ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೆಸ್ಟೋರೆಂಟ್ ನಿರ್ವಹಣಾ ಸಂಸ್ಥೆಯಿಂದಲೂ ತನಿಖೆ
ರೆಸ್ಟೋರೆಂಟ್ ನಿರ್ವಹಣೆ ಮಾಡುತ್ತಿರುವ HMSHost Services India Pvt Ltd ಸಂಸ್ಥೆಯ ಕಾರ್ಯಾಚರಣೆ ನಿರ್ದೇಶಕ ಕತ್ತಿರವನ್ ರಾಧಾಕೃಷ್ಣನ್ ಕೂಡ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬೆಳಕಿಗೆ ಬಂದಿರುವ ಈ ಘಟನೆ ಗಂಭೀರ ಕಳವಳಕ್ಕೆ ಕಾರಣವಾಗಿದೆ. ಪ್ರಯಾಣಿಕರಿಗೆ ಉಂಟಾಗಿರುವ ನೋವು ಮತ್ತು ಅಸಮಾಧಾನವನ್ನು ಅರ್ಥಮಾಡಿಕೊಳ್ಳುತ್ತೇವೆ. ಘಟನೆಯ ನೈಜ ಕಾರಣ ಮತ್ತು ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಸಮಗ್ರ ಆಂತರಿಕ ತನಿಖೆ ನಡೆಸುತ್ತಿದ್ದೇವೆ ಎಂದು ಅವರು 'ಟೈಮ್ಸ್ ಆಫ್ ಇಂಡಿಯಾ'ಗೆ ತಿಳಿಸಿದ್ದಾರೆ. ಅಲ್ಲದೆ, ಆಹಾರದಲ್ಲಿ ಮಾಂಸ ಪತ್ತೆಯಾಗಿರುವುದನ್ನು ಅವರು ದೃಢಪಡಿಸಿದ್ದಾರೆ. ಆದರೆ ಈ ಪ್ರಮಾದ ಹೇಗೆ ಸಂಭವಿಸಿತು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.
ಇನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹಾಗೂ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳನ್ನು ಕೂಡ ಈ ಬಗ್ಗೆ ಸಂಪರ್ಕಿಸಲಾಗಿತ್ತು. ಆದರೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಯಾಗಿದೆ. ಒಟ್ಟಿನಲ್ಲಿ, ವಿಮಾನ ನಿಲ್ದಾಣದಂತಹ ಪ್ರಮುಖ ಸ್ಥಳದಲ್ಲಿ ವೆಜ್ ಎಂದು ಆರ್ಡರ್ ಮಾಡಿದ ಆಹಾರದಲ್ಲಿ ಚಿಕನ್ ತುಂಡುಗಳು ಪತ್ತೆಯಾಗಿರುವುದು ಆಹಾರ ತಯಾರಿಕೆ ಮತ್ತು ಪೂರೈಕೆಯಲ್ಲಿನ ಗುಣಮಟ್ಟದ ನಿಯಂತ್ರಣದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸದ್ಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ ಮತ್ತು ರೆಸ್ಟೋರೆಂಟ್ ನಿರ್ವಹಣಾ ಸಂಸ್ಥೆಯ ತನಿಖೆಯ ಬಳಿಕವಷ್ಟೇ ಘಟನೆಯ ಹಿಂದಿನ ನಿಖರ ಕಾರಣ ತಿಳಿಯಬೇಕಿದೆ.




