ಬೆಂಗಳೂರಿನ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ರೈಲು ಬರುತ್ತಿದ್ದಂತೆ ಹಳಿಗೆ ಹಾರಿದ ಘಟನೆ ನಡೆದಿದೆ. ಅಧಿಕಾರಿಗಳು ತಕ್ಷಣ ವಿದ್ಯುತ್ ಕಡಿತಗೊಳಿಸಿ ಆತನನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಇದರಿಂದ ನೇರಳೆ ಮಾರ್ಗದಲ್ಲಿ ಸ್ವಲ್ಪ ಸಮಯ ರೈಲು ಸಂಚಾರ ವ್ಯತ್ಯಯವಾಗಿತ್ತು.
ಬೆಂಗಳೂರು (ನ.10): ಬೆಂಗಳೂರಿನ ನಮ್ಮ ಮೆಟ್ರೋ (Namma Metro) ನೇರಳೆ ಮಾರ್ಗದ (Purple Line) ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ ಆತಂಕಕಾರಿ ಘಟನೆಯೊಂದು ನಡೆದಿದೆ. ನಿಲ್ದಾಣಕ್ಕೆ ರೈಲು ಆಗಮಿಸುತ್ತಿದ್ದಂತೆಯೇ ಪ್ರಯಾಣಿಕರೊಬ್ಬರು ದಿಢೀರನೆ ಅಪ್ ಟ್ರ್ಯಾಕ್ಗೆ ಹಾರಿದ್ದಾರೆ. ಕೂಡವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ವ್ಯಕ್ತಿಯನ್ನು ರಕ್ಷಣೆ ಮಾಡಿ ಅಸ್ಪತ್ರೆಗೆ ದಾಖಲಿಸಲಾಗಿದೆ.
ವಿಜಯನಗರ ನಿಲ್ದಾಣದಲ್ಲಿ ವ್ಯಕ್ತಿ ಮೆಟ್ರೋ ರೈಲು ಹಳಿಗೆ ಹಾರುವ ಘಟನೆ ಸಂಭವಿಸುತ್ತಿದ್ದಂತೆಯೇ ಮೆಟ್ರೋ ನಿಲ್ದಾಣದ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ತುರ್ತು ಕ್ರಮಗಳನ್ನು ಕೈಗೊಂಡು, ಹಳಿಗೆ ಹಾರಿದ ವ್ಯಕ್ತಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ತಕ್ಷಣವೇ ಆತನನ್ನು ವೈದ್ಯಕೀಯ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾಗಶಃ ಮೆಟ್ರೋ ರೈಲು ಸೇವೆ ಹಾಗೂ ಯಥಾಸ್ಥಿತಿ ಸಂಚಾರ
ರಕ್ಷಣಾ ಕಾರ್ಯಾಚರಣೆ ಮತ್ತು ಸುರಕ್ಷತಾ ತಪಾಸಣೆ ನಡೆಯುತ್ತಿದ್ದ ಸಮಯದಲ್ಲಿ ಸಾರ್ವಜನಿಕರಿಗೆ ಉಂಟಾಗುವ ಅನಾನುಕೂಲತೆಯನ್ನು ತಪ್ಪಿಸಲು, ಬಿಎಂಆರ್ಸಿಎಲ್ (BMRCL) ಬಾಧಿತವಲ್ಲದ ಮಾರ್ಗಗಳಲ್ಲಿ ಈ ಕೆಳಗಿನಂತೆ ಮೆಟ್ರೋ ಸಂಚಾರವನ್ನು ತಾತ್ಕಾಲಿಕವಾಗಿ ಪುನರಾರಂಭಿಸಿತ್ತು.
ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್) ಮತ್ತು ವೈಟ್ಫೀಲ್ಡ್ (ಕಾಡುಗೋಡಿ) ನಡುವೆ.
ವಿಜಯನಗರದಿಂದ ಚಲ್ಲಘಟ್ಟ ಕಡೆಗಿನ ಅತ್ತಿಗುಪ್ಪೆ, ದೀಪಾಂಜಲಿ ನಗರ ಹಾಗೂ ವಿಜಯನಗರದಿಂದ ಕೆಂಪೇಗೌಡ ನಿಲ್ದಾಣದವರೆಗಿನ ಹೊಸಹಳ್ಳಿ, ಮಾಗಡಿ ರಸ್ತೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೋ ನಿಲ್ದಾಣಗಳು ಒಟ್ಟು 6 ನಿಲ್ದಾಣಗಳಲ್ಲಿ ಮಾತ್ರ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗಿತ್ತು.
ಮೈಸೂರು ರಸ್ತೆ ಮತ್ತು ಚಲ್ಲಘಟ್ಟ ನಡುವೆ.
ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಮಧ್ಯಾಹ್ನ 13:58 (1:58 PM) ಗಂಟೆಯಿಂದ ನೇರಳೆ ಮಾರ್ಗದ ಸಂಪೂರ್ಣ ಮಾರ್ಗದಲ್ಲಿ ರೈಲು ಸಂಚಾರವನ್ನು ಯಥಾಸ್ಥಿತಿಗೆ ತರಲಾಯಿತು. ಇನ್ನು ಹಸಿರು ಮಾರ್ಗ (Green Line) ಮತ್ತು ಹಳದಿ ಮಾರ್ಗದ (Yellow Line) ರೈಲು ಸೇವೆಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಪ್ರಯಾಣಿಕರಿಗೆ ಉಂಟಾದ ತಾತ್ಕಾಲಿಕ ಅನಾನುಕೂಲಕ್ಕಾಗಿ ಬಿಎಂಆರ್ಸಿಎಲ್ ವಿಷಾದ ವ್ಯಕ್ತಪಡಿಸಿದ್ದು, ಈ ಸಮಯದಲ್ಲಿ ಸಾರ್ವಜನಿಕರು ನೀಡಿದ ಸಹಕಾರ ಹಾಗೂ ಸಹನೆಗೆ ಧನ್ಯವಾದಗಳನ್ನು ಸಲ್ಲಿಸಿದೆ.














