ಬೆಂಗಳೂರಿನ ಯಲಹಂಕದಲ್ಲಿ ನಿವೃತ್ತ ಬಿಎಸ್‌ಎಫ್ ಯೋಧರೊಬ್ಬರು ತಮ್ಮ ಮನೆಯ ಮೇಲ್ಛಾವಣಿಯಲ್ಲಿ 'ನಾರಿ ಸುವರ್ಣ' ತಳಿಯ ಕುರಿಗಳನ್ನು ಯಶಸ್ವಿಯಾಗಿ ಸಾಕುತ್ತಿದ್ದಾರೆ. ಕೇವಲ ಎರಡು ಕುರಿಗಳಿಂದ ಆರಂಭವಾದ ಇವರ ಕೃಷಿ ಪ್ರಯಾಣ ಈಗ 35 ಕುರಿಗಳಿಗೆ ತಲುಪಿದ್ದು, ತಿಂಗಳಿಗೆ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಸಣ್ಣ ಜಾಗದಲ್ಲೂ ಲಾಭದಾಯಕ ಹೈನುಗಾರಿಕೆ ಮಾಡಬಹುದು ಎಂಬುದಕ್ಕೆ ಇವರೇ ಸಾಕ್ಷಿ.

ಬೆಂಗಳೂರು: ಕೃಷಿಯಲ್ಲಿ ನಿರ್ಧಿಷ್ಟ ಆದಾಯ ಸಿಗದ ಕಾರಣ ಹಲವು ರೈತರು ಸ್ಥಿರ ಆದಾಯ ನೀಡುವ ಮೂಲಗಳನ್ನು ಹುಡುಕಾಟ ನಡೆಸುತ್ತಿದ್ದಾರೆ. ಹಲವರು ಹೈನುಗಾರಿಕೆ ಜೊತೆಗೆ ಕುರಿ ಸಾಕಣಿಕೆ ಪ್ರಮುಖ್ಯತೆ ನಿಡುತ್ತಿದ್ದಾರೆ. ಅದರಲ್ಲೂ ಸಣ್ಣ ಮತ್ತು ಅತಿಸಣ್ಣ ರೈತರು, ನಿರುದ್ಯೋಗಿ ಯುವಕರು ಸಹ ಇತ್ತ ಮುಖ ಮಾಡುತ್ತಿದ್ದಾರೆ. ಇಂತಹದ್ದೆ ಹೊಸ ಪ್ರಯೋಗದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ ಯಲಹಂಕದಲ್ಲಿ ವಾಸಿಸುತ್ತಿರುವ ನಿವೃತ್ತ ಬಿಎಸ್ಎಫ್ ಯೋಧಯೊಬ್ಬರು ಯಶಸ್ವಿಯಾಗಿದ್ದಾರೆ.

ಐದು ಕುರಿಗಳಿಂದ ಆರಂಭವಾದ ಜರ್ನಿ!

ಇದರ ಹೆಸರು ನಾಗರಾಜ್ ಅವರು ಯಲಹಂಕದ ಕಟ್ಟಿಗೇನ ಹಳ್ಳಿಯ ಶಿವಶಂಕರ ಲೇಔಟ್‌ನ ನಿವಾಸಿಯಾಗಿದ್ದು, ಬಿಎಸ್‌ಎಫ್‌ನಲ್ಲಿ ಚಾಲಕರಾಗಿ ಸೇವೆ ಸಲ್ಲಿಕೆ ಮಾಡಿ ನಿವೃತ್ತಿ ಪಡೆದುಕೊಂಡಿದ್ದಾರೆ. ನಿವೃತ್ತಿಯಾದ ಬಳಿಕ ಮನೆಯಲ್ಲಿ ಉಳಿದುಕೊಂಡಿದ್ದ ನಾಗರಾಜ್ ಅವರು ಒಂದು ಟೋಯಿಂಗ್ ವಾಹನ ಹೊಂದಿದ್ದು, ಇಲ್ಲಿಯೂ ಚಾಲಕರಾಗಿ ನಿತ್ಯ ದುಡಿಯುತ್ತಿದ್ದಾರೆ. ಆದರೆ ಕೃಷಿ ಮೇಲಿನ ಇವರ ಆಸಕ್ತಿ ಮಾತ್ರ ಕಡಿಮೆ ಆಗಿರಲಿಲ್ಲ. ಇದರಿಂದ ಏನಾದರೂ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದ ಇವರಿಗೆ, ತಮ್ಮ 30-40 ಅಡಿ ಮನೆಯ ಮೇಲ್ಛಾವಣಿಯ ಖಾಲಿ ಸ್ಥಳದಲ್ಲಿ ಎರಡು ಕುರಿ ಸಾಕಾಣಿಕೆ ಮಾಡುವ ಯೋಜನೆ ಮಾಡಿದ್ದರು. ಮೊದಲು ಎರಡು ಕುರಿಗಳಿಂದ ಆರಂಭವಾದ ಇವರ ಪ್ರಯಾಣ ಈಗ 35 ಕುರಿಗಳ ವರೆಗೂ ಬೆಳೆದಿದೆ.

ವಿಶೇಷ ಎಂದರೆ, ನಾಗರಾಜ್ ಅವರು ನಾರಿ ಸುವರ್ಣ ತಳಿಯ ಕುರಿಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಮೊದಲು ಎರಡು ಕುರಿಗಳು ಆ ಬಳಿಕ ಅವುಗಳನ್ನು 10ಕ್ಕೆ ಹೆಚ್ಚಿಸಿ, ಈಗ ನಮ್ಮ ಬಳಿ 35 ಕುರಿಗಳು, ನೇಪಾಳ ತಳಿಯ ಐದು ಮೇಕೆಗಳನ್ನು ಮೇಕೆ ಹಾಲಿಗೆ ಸಾಕಾರಣೆ ಮಾಡುತ್ತಿದ್ದೇವೆ. ಮನಸ್ಸಿದ್ದರೆ ಮಾರ್ಗ, ನಿಮಗೆ ಕೆಲಸ ಮಾಡುವ ಮನಸ್ಸು ಇದ್ದರೆ ಅದೇ ಎಲ್ಲವೂ ಆಗುತ್ತದೆ ಎಂದು ನಾಗರಾಜ್ ತಿಳಿಸಿದ್ದಾರೆ.

2010ರಲ್ಲಿ ಯಲಹಂಕದಲ್ಲಿ ಮನೆ ನಿರ್ಮಾಣ ಮಾಡಿದ್ದೇವು. ಮನೆಯ ಮೇಲೆಯೇ ಕುರಿ ಸಾಕಾಣಿಕೆ ಮಾಡುತ್ತಿದ್ದೇವೆ. ಕುರಿಗಳಿಗೆ ಆಹಾರವಾಗಿ ನಾವು ಸೈಲೇಜ್ ಮೇವು ನೀಡುತ್ತಿದ್ದೇವೆ. ಉಳಿದಂತೆ ಜೋಳ ಸೇರಿದಂತೆ ಕೈತಿಂಡಿ ನೀಡುತ್ತೇವೆ. ಪ್ರತಿ ಮೂರು ದಿನಕ್ಕೆ ಎರಡು ಕುರಿಗಳನ್ನು ತೊಳೆಯುತ್ತೇವೆ. ಕಾಲ ಕಾಲಕ್ಕೆ ವ್ಯಾಕ್ಸಿನ್ ಮಾಡಿಸುವ ಕಾರಣ ಇದುವರೆಗೂ ಯಾವುದೇ ರೋಗ ಸಮಸ್ಯೆ ಕಂಡು ಬಂದಿಲ್ಲ. ದಿನಕ್ಕೆ ಒಂದು ಗಂಟೆ ಮಾತ್ರ ಕುರಿಗಳ ಪೋಷಣೆ ಮಾಡುತ್ತಿದ್ದು, ಉಳಿದ ಸಮಯದಲ್ಲಿ ಬೇರೆ ಕೆಲಸ ಮಾಡುತ್ತೇವೆ ಎಂದು ನಾಗರಾಜ್ ತಿಳಿಸಿದ್ದಾರೆ.

ಕುರಿಗಳ ನಿರ್ವಹಣೆ ನಗರದಲ್ಲಿ ಹೇಗೆ ಸಾಧ್ಯ?

ಮಹಾರಾಷ್ಟ್ರ ನಾರಿ ಸುವರ್ಣ ಸಂವರ್ಧನಾ ಕೇಂದ್ರಿದಿಂದ ಕುರಿಗಳನ್ನು ತಂದಿದ್ದೇವೆ. ಈಗಾಗಲೇ ನಾವು ಹೂಡಿಕೆ ಮಾಡಿರುವ ಹಣ ವಾಪಸ್ ಬಂದಿದೆ. ಈ ತಳಿಯ ವಿಶೇಷ ಎಂದರೆ, ನಮ್ಮ ನಾಟಿ ತಳಿಯ ಕುರಿಗಳು ಒಮ್ಮೆ ಒಂದು ಮರಿಯನ್ನು ಮಾತ್ರ ನೀಡುತ್ತವೆ. ಆದರೆ ಈ ತಳಿಯ ಕುರಿಗಳು 2-3 ಮರಿಗಳನ್ನು ನೀಡುತ್ತದೆ. ಇದರಿಂದ ನಮಗೆ ಡಬಲ್ ಲಾಭ ಸಿಗುತ್ತದೆ ಎಂದು ತಿಳಿಸಿದರು.

ಕುರಿಗಳು ಎಂದರೆ ಹಲವು ವಾಸನೆ ಬರುತ್ತದೆ ಎಂದು ಹೇಳಿತ್ತಾರೆ, ಆದರೆ ನಾವು ಆ ದಿನ ವೆಸ್ಟ್ ಅನ್ನು ಅವತ್ತೇ ಕ್ಲೀನ್ ಮಾಡುತ್ತೇವೆ. ಕುರಿ ಗೊಬ್ಬರವನ್ನು ರಸ್ತೆ ಪಕ್ಕದ ಗಿಡಗಳನ್ನು ಬೆಳೆಸುವವರು, ಟೋಲ್‌ಗಳ ಬಳಿ ಉದ್ಯಾನವನ ನಿರ್ವಹಿಸುವವರು ಹಾಗೂ ಮನೆಯ ಮೇಲೆ ಗಾರ್ಡನ್ ಮಾಡುವವರು ಬಂದು ತೆಗೆದುಕೊಂಡು ಹೋಗುತ್ತಾರೆ ಎಂದು ವಿವರಿಸಿದರು.

ವೇವು, ಕೈತಿಂಡಿ ನಿರ್ವಹಣೆ

ನಮ್ಮ ಬಳಿ ಇರುವ ಕುರಿಗಳು ಒಂದು ಬಾರಿಗೆ ನಾಲ್ಕು ಮರಿಗಳು ಹಾಕಿದ ಉದಾಹರಣೆಗಳು ಇದೆ. ನಾವು ಹಲವು ಕುರಿಗಳನ್ನು ಮಾರಾಟ ಮಾಡಿದ್ದೇವೆ. ನನ್ನಂತೆ ಹಲವರು ಮಾಡಬಹುದು, ಆದರೆ ನಿಮಗೆ ಮೇವು ಇರ್ಬೇಕು. ಈಗ ನಾನು ನೆಲಮಂಗಲದಿಂದ ಸೈಲೇಜ್ ತರಿಸುತ್ತಿದ್ದೇನೆ. ಒಂದು ಕೆಜಿಗೆ 8 ರೂಪಾಯಿಯಂತೆ ನಾವು ಮೇವು ತರಿಸುತ್ತಿದ್ದೇವೆ. ಒಂದು ಕುರಿಗೆ ದಿನಕ್ಕೆ ಎರಡು ಕೆಜಿ ಮೇವು ನೀಡಬೇಕು. ನಮಗೆ ದಿನಕ್ಕೆ ಸರಾಸರಿ 60 ಕೆಜಿ ಮೇವು ಬೇಕು. ಒಂದು ಮೂಟೆ ಸೈಲೇಜ್‌ಗೆ 400 ರೂಪಾಯಿ ನೀಡುತ್ತಿದ್ದೇವೆ, ದಿನಕ್ಕೆ ಒಂದು ಮೂಟೆಯಂತೆ ತಿಂಗಳಿಗೆ 30 ರಿಂದ 31 ಮೂಟೆ ಮೇವು ನಮಗೆ ಸಾಕಾಗುತ್ತದೆ. ನಾನು ಒಬ್ಬನೇ ಇಷ್ಟು ಕುರಿಗಳ ನಿರ್ವಹಣೆ ಮಾಡುತ್ತಿದ್ದು, ಗೋದಿ, ಜೋಳ, ಹುರುಳಿ ಕಾಳು, ಕಾಡಲೇ ಕಾಳಗಳನ್ನು ನಿತ್ಯ ನೆನೆಸಿ ಮಧ್ಯಾಹ್ನದ ಸಮಯದಲ್ಲಿ ಸ್ವಲ್ಪ ಅರಿಶಿಣ ಮತ್ತು ಉಪ್ಪು ಸೇವಿಸಿ ಎಲ್ಲಾ ಕುರಿಗಳಿಗೂ ನೀಡುತ್ತೇವೆ. ಯಾವುದೇ ರೋಗದ ಸಮಸ್ಯೆಗಳು ಇದುವರೆಗೂ ನಮಗೆ ಕಂಡು ಬಂದಿಲ್ಲ ಎಂದಿದ್ದಾರೆ.

ಆದಾಯ ಮತ್ತು ಉಳಿತಾಯ?

ಕುರಿ ಸಾಕಾಣಿಕೆ ಬಗ್ಗೆ ಯಾವುದೇ ವಿಶೇಷ ತರಬೇತಿ ಪಡೆದಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಮನೆಯಲ್ಲಿ ನೋಡಿ ಕಲಿತಿರುವುದು ನಮಗೆ ಈಗ ಸಹಾಯವಾಗಿದೆ. ಗರ್ಭಿಣಿ ಕುರಿಗೆ ಒಂದು ಬೆಲೆ, ಹೆಣ್ಣು ಮರಿಗಳಿಗೆ ಮತ್ತು ಗಂಡು ಮರಿಗಳಿಗೆ ಬೇರೆ ಬೇರೆ ಬೆಲೆ ಇರುತ್ತದೆ. ಈಗ ನನ್ನ ಬಳಿ ಇರುವ ಕುರಿಗಳಲ್ಲಿ ಐದು ಕುರಿಗಳನ್ನ ಮಾರಾಟ ಮಾಡಿದ್ದೇನೆ. ನಾಲ್ಕು ತಿಂಗಳ ಗಂಡು ಮರಿಗೆ 35 ಸಾವಿರ ರೂಪಾಯಿ, ಹೆಣ್ಣು ಮರಿಯೊಂದಕ್ಕೆ 22 ಸಾವಿರ ರೂಪಾಯಿಯಂತೆ ನಾಲ್ಕು ಮರಿಗಳನ್ನು ಮಾರಾಟ ಮಾಡಿದ್ದೇನೆ. ನನಗೆ ತಿಂಗಳಿಗೆ ಸುಮಾರು 60 ಸಾವಿರ ರೂಪಾಯಿ ಆದಾಯ ಇದರಿಂದ ಸಿಗುತ್ತಿದ್ದು, 18 ಸಾವಿರ ಖರ್ಚು ತೆಗೆದರೆ ಉಳಿದ ಹಣ ನಮಗೆ ಉಳಿತಾಯವಾಗಲಿದೆ ಎಂದು ತಿಳಿಸಿದ್ದಾರೆ.

ಯುವಕರಿಗೆ ಮಾಹಿತಿ ನೀಡಲು ಸಿದ್ಧ!

ತಿಂಗಳಿಗೆ ಕನಿಷ್ಠ ಮೂರು ಮರಿಗಳನ್ನು ಮಾರಾಟ ಮಾಡುತ್ತೇನೆ. ಕಡಿಮೆ ಸಂಖ್ಯೆಯಲ್ಲಿ ಈ ಸ್ಥಳಕ್ಕೆ ಎಷ್ಟು ಸೂಕ್ತವೋ ಅಷ್ಟೇ ಕುರಿಗಳನ್ನು ಸಾಕಾಣಿಕೆ ಮಾಡುತ್ತಿದ್ದು, ಯಾರಾದರೂ ಕುರಿ ಸಾಕಾಣಿಕೆ ಮಾಡಲು ಬಂದರೆ ಅವರಿಗೆ ಅಗತ್ಯ ಮಾರ್ಗದರ್ಶನ ನೀಡಲು ಸಿದ್ಧರಿದ್ದೇವೆ. ಅಲ್ಲದೇ, ನಮ್ಮ ಬಳಿ ಕುರಿ ಇಲ್ಲ ಎಂದರೆ, ನಮ್ಮಂತೆ ನಾರಿ ಸುವರ್ಣ ಕುರಿಗಳನ್ನು ಸಾಕಾಣಿಕೆ ಮಾಡುತ್ತಿರುವ ಇತರ ರೈತರ ಮಾಹಿತಿ ನೀಡುತ್ತೇವೆ. ನೀವು ಅಲ್ಲಿ ಹೋಗಿ ಕುರಿಗಳನ್ನು ಖರೀದಿ ಮಾಡಬಹುದು. ಮರಿ ಹಾಕಲು ಸಿದ್ಧವಾಗಿರುವ ಕುರಿಯನ್ನು ಮಾರಾಟ ಮಾಡುತ್ತೇವೆ. ಕಳೆದ ನಾಲ್ಕು ವರ್ಷಗಳಿಂದ ಕುರಿ ಸಾಕಾಣಿಕೆ ಮಾಡುತ್ತಿದ್ದೇವೆ ಎಂದು ವಿವರಿಸಿದ್ದಾರೆ. ಕುರಿಗಳನ್ನು ಗಂಡಸರು ಮಾತ್ರ ಸಾಕಾಣಿಕೆ ಮಾಡಬೇಕು ಅಂತ ಏನು ಇಲ್ಲ ಹೆಣ್ಣು ಮಕ್ಕಳು ಕೂಡ ಸಾಕಾಣಿಕೆ ಮಾಡಬಹುದು. ಕುರಿಗಳ ಕೊಠಡಿ ಕ್ಲೀನ್ ಆಗಿ ಇರಲು ಫ್ಯಾನ್ ಗಳನ್ನು ಹಾಕುತ್ತೇವೆ. ಇದರಿಂದ ತೇವಾಂಶ ಕಡಿಮೆಯಾಗಿ ವಾಸನೆ ಬರೋದಿಲ್ಲ. ಯಾವಾಗಲು ಸ್ವಚ್ಛವಾಗಿ ಇರುತ್ತದೆ. ನನಗೆ ಈಗ 60 ವರ್ಷ, ನೀವು ದುಡಿಮೆ ಮಾಡಿದರೆ ಮಾತ್ರ ನಿಮಗೆ ಗೌರವ ಸಿಗುತ್ತದೆ. ನಾನು ಸಾಕಿದ ಕುರಿಗಳನ್ನು ಕೊಡಗು ಜಿಲ್ಲೆಯ ರೈತರಿಗೂ ಮಾರಾಟ ಮಾಡಿದ್ದೇವೆ. ಈ ಕುರಿಗಳು ಎಲ್ಲಾ ವಾತಾವರಣಕ್ಕೂ ಹೊಂದಿಕೊಳ್ಳುತ್ತವೆ ಎಂದು ಯೂಟ್ಯೂಬ್‌ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.

ಏನಿದು ನಾರಿ ಸುವರ್ಣ ತಳಿ?

ನಾರಿ ಸುವರ್ಣ ತಳಿ ಇಸ್ರೇಲ್ ಮೂಲದ ಆವಾಸಿ ತಳಿಯಾಗಿದ್ದು, ಪಶ್ಚಿಮ ಬಂಗಾಳದ ಅವಳಿ ಮರಿ ನೀಡುವ ಗೆರೋಲ್ ತಳಿ, ಹೆಚ್ಚು ತೂಕ ಬರುವ ತಳಿ ಡೆಕ್ಕನಿ ತಳಿ, ರುಚಿ ಕರ ಮಾಂಸದ ಬಂಡೂರು ತಳಿ ಸೇರಿದಂತೆ ಐದು ತಳಿಗಳ ಸಂಕರಣ ತಳಿಯೇ ನಾರಿ ಸುವರ್ಣ. ಈ ತಳಿಯ ಕುರಿಗಳು ಹೆಚ್ಚು ರೋಗನಿರೋಧಕ ಶಕ್ತಿ ಹೊಂದಿದ್ದು, ಅಲ್ಲದೆ ಹೆಚ್ಚು ಲಾಭ ತಂದುಕೊಡುತ್ತವೆ.

ಕುರಿ ಸಾಕಾಣಿಕೆದಾರರಿಗೆ ಏನು ಲಾಭ?

ನಾರಿ ಸುವರ್ಣ ತಳಿ ಬಹು ಬೇಡಿಕೆಯ ಕುರಿಯಾಗಿದ್ದು, ಪ್ರತಿ ಕುರಿ 25 ಸಾವಿರ ರೂ.ವರೆಗೆ ಮಾರಾಟವಾಗಲಿದೆ. ಈ ತಳಿ ಅವಳಿ, ತ್ರಿವಳಿ ಮರಿ ಹಾಕುವುದರಿಂದ ರೈತರಿಗೆ, ಕುರಿಗಾರರಿಗೆ ಆರ್ಥಿಕ ಸ್ವಾವಲಂಬನೆಗೆ ಅನುಕೂಲವಾಗಲಿದೆ.