ಬೆಂಗಳೂರಲ್ಲಿ ಬಾಡಿಗೆ ಮನೆಯಲ್ಲಿ ಇರೋದು ತುಂಬಾ ಕಷ್ಟ ಆಗ್ತಿದೆ. ಅದಕ್ಕೆ ಕಾರಣ ರೂಮ್‌ನ ಬಾಡಿಗೆ ದರ ಹೆಚ್ಚುತ್ತಿರೋದು. ಇದೀಗ ಯುವತಿಯೊಬ್ಬಳು 3BHK ಫ್ಲ್ಯಾಟ್‌ನ ಒಂದೇ ಒಂದು ಕೋಣೆಗೆ 30 ಸಾವಿರ ರೂಪಾಯಿ ಕಟ್ಟುತ್ತಿದ್ದಾಳೆ! ಅವಳ ಸೋಶಿಯಲ್ ಮೀಡಿಯಾ ಪೋಸ್ಟ್ ಭಾರೀ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ಇರೋರ ಸಂಕಷ್ಟ ಅವರಿಗೆ ಮಾತ್ರ ಗೊತ್ತು. ಒಂದೊಂದು ರೂಪಾಯಿಗೂ ಪರದಾಡುವ ಸ್ಥಿತಿಯಲ್ಲಿರೋರ ಸಂಖ್ಯೆಯೇ ಹೆಚ್ಚಿದೆ. ಸಂಬಳ ಅಂತಾ ಲಕ್ಷ ಲಕ್ಷ ಎಣಿಸಿದ್ರೂ ತಿಂಗಳ ಅಂತ್ಯದ ವೇಳೆಗೆ ಹಣ ನೀರಲ್ಲಿ ಹುಣಸೆ ಹಣ್ಣು ತೊಳೆದಂಥ ಪರಿಸ್ಥಿತಿ.
ವಿಷಯ ಹೀಗಿರುವಾಗ ಸಿಲಿಕಾನ್ ಸಿಟಿಯ 3BHK ಫ್ಲ್ಯಾಟ್‌ನ ಒಂದೇ ಒಂದು ಕೋಣೆಗೆ ಯುವತಿಯೊಬ್ಬಳು 30,000 ರೂಪಾಯಿ ಬಾಡಿಗೆ ಕಟ್ಟುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ಕೈಯಲ್ಲಿ ದುಡ್ಡಿದೆ, ಜೇಬು ತುಂಬಾ ಹಣ ಸಂಪಾದಿಸುತ್ತಾಳೆ ಅಂದುಕೊಂಡರೂ, ಆಕೆ ಮಾಡಿದ ಕಮೆಂಟ್ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮುಂದೆ ಏನಾಯ್ತು?
ಶಿವ್ಸ್ ಎಂಬ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಅಪ್‌ಲೋಡ್ ಆಗಿದೆ. ತನ್ನನ್ನು ಕಂಟೆಂಟ್ ಕ್ರಿಯೇಟರ್ ಎಂದು ಕರೆದುಕೊಂಡಿರುವ ಶಿವ್ಸ್, ತಾವು ಉಳಿದುಕೊಳ್ತಿರುವ ಕೊಠಡಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ 3BHK ಫ್ಲ್ಯಾಟ್‌ನಲ್ಲಿ ಒಂದು ರೂಮ್‌ಗೆ ತಿಂಗಳಿಗೆ ₹30,000 ಬಾಡಿಗೆ ಕಟ್ಟುತ್ತಿದ್ದೇನೆ. ನನ್ನ ಪ್ರಕಾರ ಇದು ಅತ್ಯುತ್ತಮ ಡೀಲ್ ಎಂದಿದ್ದಾಳೆ. ಇನ್ನೂ ಮುಂದುವರಿದು.. ನನ್ನ ಮೇಲೆ ಮುಗಿಬೀಳುವ ಮುನ್ನ ರೂಮ್ ಹೇಗಿದೆ ಎಂದು ನೀವೇ ನೋಡಿ.. ಎನ್ನುತ್ತ ಸುಂದರವಾದ ಒಳಾಂಗಣ, ದೊಡ್ಡ ಕಿಟಕಿ ಹಾಗೂ ಅದಕ್ಕೆ ಹೊಂದಿಕೊಂಡಿರುವ ವಿಶಾಲವಾದ ಬಾಲ್ಕನಿ ವ್ಯೂ ತೋರಿಸಿದ್ದಾಳೆ..
ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪರ-ವಿರೋಧ ಚರ್ಚೆ ಆರಂಭಿಸಿದ್ದಾರೆ. ಕೇವಲ ಒಂದೇ ಒಂದು ರೂಮ್‌ಗೆ 30 ಸಾವಿರ ಕಟ್ಟೋದು ಸಿಕ್ಕಾಪಟ್ಟೆ ದುಬಾರಿ ಎಂದಿದ್ದಾರೆ. ಇನ್ನು ಕೆಲವರು ಕೆಲವರು ಬೆಂಗಳೂರಿನ ಇಂದಿನ ಪರಿಸ್ಥಿತಿಗೆ ಇದು ನ್ಯಾಯಯುತ ದರ ಎಂದು ಸಮರ್ಥಿಸಿಕೊಂಡಿದ್ದಾರೆ.
ಆದರೆ ಒಬ್ಬ ಬಳಕೆದಾರ ಮಾತ್ರ.. ನಾನು ಸ್ಮಶಾನದ ವ್ಯೂ ಇರುವ 2BHK ಮನೆಗೆ ತಿಂಗಳಿಗೆ 50,000 ರೂ. ಬಾಡಿಗೆ ಕಟ್ಟುತ್ತಿದ್ದೇನೆ ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇತ್ತೀಚಿನ ದಿನಗಳಲ್ಲಿ ಇಂದಿರಾನಗರ, ಹಳಸೂರು, ವೈಟ್‌ಫೀಲ್ಡ್‌ನಂತಹ ಸುರಕ್ಷಿತ ಗೇಟೆಡ್ ಅಪಾರ್ಟ್‌ಮೆಂಟ್‌ಗಳಲ್ಲಿ ಮನೆ ಹುಡುಕಿದವರಿಗೆ ಮಾತ್ರ ₹30,000 ರೇಟ್ ಯಾಕೆ ಸಾಮಾನ್ಯ ಎಂಬುದು ಅರ್ಥವಾಗುತ್ತದೆ ಎಂದು ಅವರನ್ನು ಬೆಂಬಲಿಸಿದ್ದಾರೆ. ಒಟ್ಟಾರೆ.. ಬೆಂಗಳೂರಿನಲ್ಲಿ ಗಗನಕ್ಕೇರುತ್ತಿರುವ ಮನೆ ಬಾಡಿಗೆ ದರಗಳು ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿವೆ.
ಇನ್ನು, ಬೆಂಗಳೂರಲ್ಲಿ ಮನೆ ಬಾಡಿಗೆ ಹೆಚ್ಚಳ ಆಗಿರೋದು ಹೊಸ ವಿಚಾರವೇನೂ ಅಲ್ಲ. ಕೊರೊನಾ ನಂತರ ಬಹುತೇಕ ಐಟಿ ಕಂಪನಿಗಳು ವರ್ಕ್ ಫ್ರಮ್ ಆಫೀಸ್ ಕಡ್ಡಾಯಗೊಳಿಸಿದಾಗಿನಿಂದ ಬಾಡಿಗೆ ದರಗಳು ಗಗನಕ್ಕೇರಿವೆ. ಅದರಲ್ಲೂ ಇಂದಿರಾನಗರ, ಕೋರಮಂಗಲ, ವೈಟ್‌ಫೀಲ್ಡ್, ಎಚ್‌ಎಸ್‌ಆರ್ ಲೇಔಟ್ ಮತ್ತು ಬೆಳ್ಳಂದೂರಿನಂತಹ ಪ್ರಮುಖ ಐಟಿ ಕಾರಿಡಾರ್‌ಗಳ ಸುತ್ತಮುತ್ತ 2BHK ಹಾಗೂ 3BHK ಫ್ಲ್ಯಾಟ್‌ಗಳ ಬಾಡಿಗೆ ತಿಂಗಳಿಗೆ 60,000 ದಿಂದ 1 ಲಕ್ಷದವರೆಗೂ ತಲುಪಿದೆ.
ಜೊತೆಗೆ ಮನೆ ಮಾಲೀಕರು ಕೇಳುವ 5 ರಿಂದ 10 ತಿಂಗಳ ಭಾರೀ ಸೆಕ್ಯೂರಿಟಿ ಡೆಪಾಸಿಟ್ ದೊಡ್ಡ ಹೊರೆಯಾಗಿದೆ. ಹೊರರಾಜ್ಯ ಮತ್ತು ಇತರೆ ಜಿಲ್ಲೆಗಳಿಂದ ಬರುವ ಯುವ ಉದ್ಯೋಗಿಗಳಿಗೆ ಇದು ದೊಡ್ಡ ಆರ್ಥಿಕ ಹೊರೆಯಾಗಿದೆ. ಸಂಪೂರ್ಣ ಫ್ಲ್ಯಾಟ್ ಬಾಡಿಗೆಗೆ ಪಡೆಯಲು ಸಾಧ್ಯವಾಗದ ಯುವಜನರು 3BHK ಫ್ಲ್ಯಾಟ್‌ಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ತಾರೆ. ಮಾಸ್ಟರ್ ಬೆಡ್‌ರೂಮ್ ಅಥವಾ ಬಾಲ್ಕನಿ ಇರುವ ಪ್ರತ್ಯೇಕ ಕೊಠಡಿಗಳಿಗೆ ತಲಾ ₹25,000 ದಿಂದ ₹35,000 ವರೆಗೆ ಬಾಡಿಗೆ ಪಾವತಿಸುವ ಫ್ಲ್ಯಾಟ್‌ಮೇಟ್ ಸಂಸ್ಕೃತಿ ಸಾಮಾನ್ಯವಾಗಿದೆ.


