ಇತ್ತೀಚೆಗೆ ನಡೆದ 13ನೇ ಆವೃತ್ತಿಯ ವಿಪ್ರೋ ಬೆಂಗಳೂರು ಮ್ಯಾರಾಥಾನ್‌ನಲ್ಲಿ ಕುಡಿಯುವ ನೀರಿನ ಕೊರತೆ ಮತ್ತು ಕಳಪೆ ಜನಸಂದಣಿ ನಿರ್ವಹಣೆಯಿಂದಾಗಿ ಸ್ಪರ್ಧಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಶೀರ್ಷಿಕೆ ಪ್ರಾಯೋಜಕತ್ವ ವಹಿಸಿದ್ದ ವಿಪ್ರೋ ಸಂಸ್ಥೆಯ ಬ್ರ್ಯಾಂಡ್ ಇಮೇಜ್‌ಗೆ ಭಾರಿ ಪೆಟ್ಟು ಬಿದ್ದಿದೆ.
ಬೆಂಗಳೂರು (ಸೆ.29): ಬೃಹತ್ ಸಾರ್ವಜನಿಕ ಮತ್ತು ಕ್ರೀಡಾಕೂಟಗಳಿಗೆ ಬ್ರ್ಯಾಂಡ್ ಹೆಸರುಗಳನ್ನು ಜೋಡಿಸುವುದು ಸಂಸ್ಥೆಯ ಇಮೇಜ್ ಹೆಚ್ಚಿಸಲು ಸಹಕಾರಿ ಎಂಬ ನಂಬಿಕೆ ಇದೆಯಾದರೂ, ಆ ಕಾರ್ಯಕ್ರಮಗಳ ಆಯೋಜನೆಯಲ್ಲಿ ಎಡವಟ್ಟು ಸಂಭವಿಸಿದಾಗ ಅದು ಆ ಸಂಸ್ಥೆಯ ಬ್ರ್ಯಾಂಡ್‌ಗೆ ಕಂಟಕವಾಗಿ ಪರಿಣಮಿಸುತ್ತದೆ ಎನ್ನುವುದಕ್ಕೆ 'ವಿಪ್ರೋ ಬೆಂಗಳೂರು ಮ್ಯಾರಾಥಾನ್' ಸಾಕ್ಷಿಯಾಗಿದೆ. ಸೆಪ್ಟೆಂಬರ್ 27ರ ಭಾನುವಾರ ನಡೆದ 13ನೇ ಆವೃತ್ತಿಯ ಬೆಂಗಳೂರು ಮ್ಯಾರಾಥಾನ್‌ನಲ್ಲಿ ಕುಡಿಯುವ ನೀರಿನ ಅಭಾವ, ಅಗತ್ಯ ಶೌಚಾಲಯಗಳ ಕೊರತೆ ಮತ್ತು ಕಳಪೆ ಜನಸಂದಣಿ ನಿಯಂತ್ರಣ (Crowd Management) ವ್ಯವಸ್ಥೆಯ ವಿರುದ್ಧ ಸ್ಪರ್ಧಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಕಾರ್ಯಕ್ರಮದ ಶೀರ್ಷಿಕೆ ಪ್ರಾಯೋಜಕತ್ವ (Title Sponsor) ವಹಿಸಿಕೊಂಡಿದ್ದ ಪ್ರಸಿದ್ಧ ಐಟಿ ಸಂಸ್ಥೆ ವಿಪ್ರೋ (Wipro), ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ.
ಎನ್‌ಇಬಿ ಸ್ಪೋರ್ಟ್ಸ್ (NEB Sports), ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್, ವಿಪ್ರೋ ಬೆಂಗಳೂರು ಮತ್ತು ಶ್ರೀರಾಮ್ ಪ್ರಾಪರ್ಟೀಸ್ ಜಂಟಿ ಸಹಯೋಗದಲ್ಲಿ ಈ ಮ್ಯಾರಾಥಾನ್ ಆಯೋಜಿಸಲಾಗಿತ್ತು. ಆದರೆ, ಓಟ ಮುಗಿದ ಬೆನ್ನಲ್ಲೇ ನೂರಾರು ಸ್ಪರ್ಧಿಗಳು ಎಕ್ಸ್ (ಟ್ವಿಟರ್) ಹಾಗೂ ಇತರ ಸೋಶಿಯಲ್ ಮೀಡಿಯಾ ವೇದಿಕೆಯಲ್ಲಿ ತಮ್ಮ ಅಸಮಾಧಾನವನ್ನು "ವಿಪ್ರೋ ಮ್ಯಾರಾಥಾನ್‌ನ ಎಡವಟ್ಟು" ಎಂದೇ ಹಂಚಿಕೊಳ್ಳಲು ಆರಂಭಿಸಿದ್ದಾರೆ.
ನೀರಿಲ್ಲ, ತೊಳೆದಿಲ್ಲದ ಕಪ್‌ಗಳು!: ಜಾಲತಾಣಗಳಲ್ಲಿ ಹರಿದುಬಂದ ದೂರುಗಳು
ಮ್ಯಾರಾಥಾನ್‌ನಲ್ಲಿ ಭಾಗವಹಿಸಿದ್ದ ಶಾಜ್ ಎ. ಖಾನ್ ಎಂಬುವವರು ಎಕ್ಸ್‌ನಲ್ಲಿ ತಮ್ಮ ಕಹಿ ಅನುಭವವನ್ನು ಹಂಚಿಕೊಂಡು, "ಓಟದ 6 ಕಿಲೋಮೀಟರ್‌ನಿಂದ 16-17 ಕಿಲೋಮೀಟರ್ ನಡುವಿನ ಯಾವುದೇ ಹೈಡ್ರೇಶನ್ ಸ್ಟೇಷನ್‌ಗಳಲ್ಲಿ ಕುಡಿಯುವ ನೀರು ಲಭ್ಯವಿರಲಿಲ್ಲ," ಎಂದು ಆರೋಪಿಸಿದ್ದಾರೆ.
ಮತ್ತೊಬ್ಬ ಸ್ಪರ್ಧಿ ಶ್ರಿತಿಲೇಖಾ ಅವರು, ಈ ಆಯೋಜನೆಯನ್ನು ಸಂಪೂರ್ಣ Logistical Disaster ಎಂದು ಕರೆದಿದ್ದಾರೆ. "10 ಕಿ.ಮೀ. ಮಾರ್ಗ ದಾಟಿದ ನಂತರ ಕುಡಿಯುವ ನೀರು ಸಂಪೂರ್ಣವಾಗಿ ಖಾಲಿಯಾಗಿತ್ತು. ಅಲ್ಲದೆ, ತೊಳೆಯದ ಪ್ಲಾಸ್ಟಿಕ್ ಕಪ್‌ಗಳನ್ನು ಮರುಬಳಕೆ ಮಾಡಲಾಗುತ್ತಿತ್ತು. ಇದು ಸಾರ್ವಜನಿಕ ಆರೋಗ್ಯಕ್ಕೆ ಬೆದರಿಕೆ ಒಡ್ಡುವ ಗಂಭೀರ ವಿಚಾರ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓಟ ಮುಗಿಯುವ ಅಂತಿಮ ಘಟ್ಟದಲ್ಲಿ ಎಲ್ಲ ಓಟಗಾರರನ್ನು ಒಂದೇ ಕ್ರೀಡಾಂಗಣಕ್ಕೆ ಕಳುಹಿಸಿದ್ದರಿಂದ, ನಿರ್ಗಮನ ದ್ವಾರದ ಬಳಿ Dangerous Human Bottleneck ಸೃಷ್ಟಿಯಾಗಿತ್ತು ಎಂದೂ ಅವರು ದೂರಿದ್ದಾರೆ.

ಮಧ್ಯದಲ್ಲೇ ನೀರು ಖಾಲಿ; ರಸ್ತೆ ಬದಿಯ ಸಾರ್ವಜನಿಕರಿಂದ ನೀರು ಪಡೆದ ಸ್ಪರ್ಧಿಗಳು
ಹಾಫ್ ಮ್ಯಾರಾಥಾನ್‌ನಲ್ಲಿ ಓಡಿದ ಏಕತಾ ಸಿರೋಹಿ ಎಂಬುವವರು ಮಾತನಾಡಿ, "ಮೊದಲ 10 ಕಿ.ಮೀ.ವರೆಗೆ ಎಲ್ಲವೂ ಸರಿಯಾಗಿತ್ತು. ಆದರೆ ಅದಾದ ಬಳಿಕ ಎದುರಾದ ವಾಟರ್ ಸ್ಟೇಷನ್‌ಗಳಲ್ಲಿ ನೀರೇ ಇರಲಿಲ್ಲ. ತೀವ್ರ ನಿರಾಶೆಯಾಯಿತು. ಕೊನೆಗೆ ಓಟ ವೀಕ್ಷಿಸಲು ರಸ್ತೆ ಬದಿ ನಿಂತಿದ್ದ ಸಾರ್ವಜನಿಕರು ನೀಡಿದ ನೀರನ್ನು ಕುಡಿದು ಓಟ ಮುಂದುವರಿಸಬೇಕಾಯಿತು," ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಹಾಫ್ ಮ್ಯಾರಾಥಾನ್ ಓಟದ ಕೊನೆಯ ಹಂತದಲ್ಲಿ 5 ಕೆ ಮತ್ತು 10 ಕೆ ಸ್ಪರ್ಧಿಗಳನ್ನು ಒಂದೇ ಮಾರ್ಗದಲ್ಲಿ ಬೆರೆಸಿದ್ದರಿಂದ, ಸಣ್ಣ ಮಕ್ಕಳೊಂದಿಗೆ ಓಡುತ್ತಿದ್ದವರ ಕಾರಣಕ್ಕೆ ವೃತ್ತಿಪರ ಓಟಗಾರರಿಗೆ ಅಡ್ಡಿಯಾಯಿತು ಎಂದು ಅವರು ಜನಸಂದಣಿ ನಿರ್ವಹಣೆಯ ಲೋಪವನ್ನು ಬೊಟ್ಟು ಮಾಡಿದ್ದಾರೆ.

ಬ್ರ್ಯಾಂಡ್ ವರ್ಚಸ್ಸಿಗೆ ಹಾನಿ ತಂದ ಪ್ರಾಯೋಜಕತ್ವ
ಸಾಮಾನ್ಯವಾಗಿ ಕ್ರೀಡಾಕೂಟಗಳ ಪ್ರಾಯೋಜಕತ್ವ ವಹಿಸುವುದರಿಂದ ಕಂಪನಿಗಳಿಗೆ ಫಿಟ್‌ನೆಸ್, ಆರೋಗ್ಯಕರ ಸಮುದಾಯ ಮತ್ತು ಸಾಧನೆಯ ಪ್ರತಿಬಿಂಬ ಸಿಗುತ್ತದೆ. ಆದರೆ, ಶೀರ್ಷಿಕೆ ಪ್ರಾಯೋಜಕತ್ವ ಪಡೆಯುವ ಬ್ರ್ಯಾಂಡ್‌ಗಳು ಕಾರ್ಯಕ್ರಮದ ಪ್ರತಿಯೊಂದು ಅನುಭವಕ್ಕೂ ನೇರ ಹೊಣೆಗಾರರಾಗುತ್ತವೆ. ಇಲ್ಲಿ ಸಂಘಟಕರು ಎಡವಿದ್ದರೂ, ಓಟಗಾರರು ಮತ್ತು ಸಾರ್ವಜನಿಕರು "ವಿಪ್ರೋ ಮ್ಯಾರಾಥಾನ್" ಎಂದೇ ಟೀಕಿಸುತ್ತಿರುವುದು, ಬ್ರ್ಯಾಂಡ್ ಪ್ರಚಾರದ ಮೌಲ್ಯವು ಕೇವಲ ಜಾಹೀರಾತು ಪ್ರದರ್ಶನದಿಂದ ಮಾತ್ರವಲ್ಲ, ಅಲ್ಲಿ ನೀಡಲಾಗುವ ಸೇವೆಯ ಗುಣಮಟ್ಟವನ್ನೂ ಅವಲಂಬಿಸಿರುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ.


