Night Curfew in Bengaluru: ನಿಯಮ ಮೀರುವವರ ವಿರುದ್ಧ ಹದ್ದಿನಗಣ್ಣು: ಗೌರವ್ ಗುಪ್ತಾ!
*ಪಬ್, ಹೋಟೆಲ್, ಬಾರ್‌ಗಳಿಗೆ ದಿಢೀರ್ ಮಾರ್ಷಲ್ ಭೇಟಿ
*ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಬಿಬಿಎಂಪಿ
*ರಾತ್ರಿ 10ರಿಂದ ಮುಂಜಾನೆ 5ರವರೆಗೆ ನಿಷೇಧಾಜ್ಞೆ
*ಅನಗತ್ಯವಾಗಿ ಓಡಾಡಿದವರ ವಿರುದ್ಧ ಕಠಿಣ ಕ್ರಮ: ಕಮಲ್ ಪಂತ್
ಬೆಂಗಳೂರು (ಡಿ. 28): ಸರ್ಕಾರದ ಕಠಿಣ ಕೋವಿಡ್ ನಿಯಮಗಳನ್ನು (Covid 19 Guidelines) ಪಾಲಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸಿದ್ಧವಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್‌ಗುಪ್ತಾ ತಿಳಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ರಾಜ್ಯಾದ್ಯಂತ ಡಿ.28ರಿಂದ ಹತ್ತು ದಿನ ರಾತ್ರಿ ಕರ್ಫ್ಯೂ ಜಾರಿಗೆ ತಂದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ನಿಯಮಗಳನ್ನು ಮೀರುವವರ ವಿರುದ್ಧ ಪಾಲಿಕೆ ಹದ್ದಿನ ಕಣ್ಣು ಇಡಲಿದೆ. ಪಬ್, ಹೋಟೆಲ್, ಕ್ಲಬ್, ಬಾರ್‌ಗಳಿಗೆ ದಿಢೀರ್ ಭೇಟಿ ನೀಡಿ ಸರ್ಕಾರ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆಯೇ ಎಂದು ಮಾರ್ಷಲ್‌ಗಳು, ಗೃಹರಕ್ಷಕರು, ಆರೋಗ್ಯ ಅಧಿಕಾರಿಗಳು ನಿಗಾ ವಹಿಸುವರು ಎಂದು ಹೇಳಿದರು.
ನಿಯಮಗಳನ್ನು ಉಲ್ಲಂಘಿಸಿ ಓಡಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅನಾವಶ್ಯಕವಾಗಿ ರಾತ್ರಿ 10ರ ಬಳಿಕ ತಿರುಗಾಡುವ ವಾಹನಗಳನ್ನು ಸಂಚಾರಿ ಪೊಲೀಸರು (Traffic Police) ತಪಾಸಣೆಗೆ ಒಳಪಡಿಸಲಿದ್ದಾರೆ. ಈಗಾಗಲೇ ಸರ್ಕಾರ ತಿಳಿಸಿರುವಂತೆ ತುರ್ತು ಸೇವೆಗಳನ್ನು ಹೊರತುಪಡಿಸಿ ಇತರರು ನಿಯಮ ಉಲ್ಲಂಘಿಸಿದರೆ ಪೊಲೀಸರು ನಿಗಾ ಇಡಲಿದ್ದಾರೆ. ಶೇ.100ರಷ್ಟುಸರ್ಕಾರದ ಮಾರ್ಗಸೂಚಿಗಳ ಪಾಲನೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆ ನಡೆಸದಂತೆ ಮಾತುಕತೆ:
ಡಿ.31ರಿಂದ ಕಸ ವಿಲೇವಾರಿ ಗುತ್ತಿಗೆದಾರರು ಬಾಕಿ ಹಣ ಪಾವತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿರುವ ಕುರಿತು ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು, ಬೆಂಗಳೂರು ನಗರಕ್ಕೆ ಕಸದಿಂದ ತೊಂದರೆಯಾಗದಂತೆ ಗುತ್ತಿಗೆದಾರರೊಂದಿಗೆ ಮತುಕತೆ ನಡೆಸುತ್ತೇವೆ. ಕಸ ಸಂಗ್ರಹವಾಗದಂತೆ ಕ್ರಮಕೈಗೊಳ್ಳುತ್ತೇವೆ. ಅನಿರ್ದಿಷ್ಟಾವಧಿ ಮುಷ್ಕರ ಕೈಬಿಡುವಂತೆ ಮನವಿ ಮಾಡಿ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುವುದಾಗಿ ಗೌರವ್ ಗುಪ್ತಾ ಹೇಳಿದರು.
ಇಂದಿನಿಂದ ನಗರದಲ್ಲಿ ರಾತ್ರಿ ನಿಷೇಧಾಜ್ಞೆ
ಓಮಿಕ್ರೋನ್ ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಡಿ.28ರಿಂದ ಜ.7ರ ವರೆಗೆ ರಾತ್ರಿ 10ರಿಂದ ಮುಂಜಾನೆ 5ರವರೆಗೆ ನಗರದಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ ನೀಡಲಾಗಿರುವ ವಿನಾಯಿತಿ ಹೊರತುಪಡಿಸಿ ಉಳಿದಂತೆ ಕರ್ಫ್ಯೂ ವೇಳೆ ಅನಗತ್ಯವಾಗಿ ಓಡಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಕರ್ಫ್ಯೂ ನಿಯಮ ಉಲ್ಲಂಘಿಸುವವ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ (ಎನ್‌ಡಿಎಂಎ) ಅಡಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ರಾತ್ರಿ ಕರ್ಫ್ಯೂ ರಾತ್ರಿ 10ರಿಂದ ಮುಂಜಾನೆ 5ರವರೆಗೆ ಜಾರಿ ಇರಲಿದೆ. ರಾಜ್ಯ ಸರ್ಕಾರ ಕೆಲ ವರ್ಗಗಳ ಸಂಚಾರಕ್ಕೆ ವಿನಾಯಿತಿ ನೀಡಿದೆ. ಬಸ್, ಕ್ಯಾಬ್ ಸೇವೆ ಎಂದಿನಂತೆ ಇರಲಿದೆ. ಇದರ ಹೊರತಾಗಿ ನಗರದ ಎಲ್ಲ ಭಾಗಗಳಲ್ಲೂ ನಾಕಾಬಂದಿ ಹಾಕಲಿದ್ದು, ಪೊಲೀಸರ ಗಸ್ತು ಇರಲಿದೆ. ಕರ್ಫ್ಯೂ ಸಮಯದಲ್ಲಿ ಓಡಾಡಲು ಯಾವುದೇ ಪಾಸ್ ಇರುವುದಿಲ್ಲ. ಆಸ್ಪತ್ರೆಗೆ ತೆರಳುವವರು ಸೂಕ್ತ ದಾಖಲೆ ತೋರಿಸಬೇಕು. ಪ್ರಯಾಣಿಕರು ಟಿಕೆಟ್ ತೋರಿಸಬೇಕು ಎಂದು ಹೇಳಿದರು.
ರಾತ್ರಿ 10ಕ್ಕೆ ಬಾರ್, ಪಬ್ ಕ್ಲೋಸ್!
ಡಿ.28ರಿಂದಲೇ ರಾತ್ರಿ ಕರ್ಫ್ಯೂ ಜಾರಿಯಾಗುವುದರಿಂದ ಸಾರ್ವಜನಿಕವಾಗಿ ಹೊಸವರ್ಷ ಸಂಭ್ರಮಾಚರಣೆಗೆ ಅವಕಾಶವಿಲ್ಲ. ಇಂದಿರಾ ನಗರ, ಕೋರಮಂಗಲ, ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ನಗರದಲ್ಲಿ ಅನಗತ್ಯವಾಗಿ ಜನರ ಓಡಾಟಕ್ಕೆ ಕಡಿವಾಣ ಹಾಕಲಾಗುವುದು. ಅಂತೆಯೆ ಡಿ.28ರಿಂದ ಜ.2ರ ವರೆಗೆ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳು, ಹೋಟೆಲ್‌ಗಳಲ್ಲಿ ಶೇ.50ರಷ್ಟುಗ್ರಾಹಕರ ಪ್ರವೇಶಕ್ಕೆ ಅವಕಾಶವಿದೆ. ರಾತ್ರಿ 10ರ ಬಳಿಕ ಎಲ್ಲವನ್ನೂ ಬಂದ್ ಮಾಡಬೇಕು. ರಾತ್ರಿ ಕಪ್ರ್ಯೂ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್‌್ತ ಏರ್ಪಡಿಸುವುದಾಗಿ ಕಮಲ್ ಪಂತ್ ತಿಳಿಸಿದರು.
ಇದನ್ನೂ ಓದಿ:
1) Farmers Welfare: ರೈತರ ಆದಾಯ ಹೆಚ್ಚಳಕ್ಕೆ 2ನೇ ಕೃಷಿ ನಿರ್ದೇಶನಾಲಯ: ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ
2) Covid 19 Variant: ಒಮಿಕ್ರೋನ್ ಸ್ಫೋಟ: ಸೋಮವಾರ ದಾಖಲೆಯ 156 ಹೊಸ ಕೇಸ್!
3) Covid in India: ಭಾರತಕ್ಕೂ ಬಂತು ಕೋವಿಡ್ ಗುಳಿಗೆ, ತುರ್ತು ಬಳಕೆಗೆ ಶಿಫಾರಸು!