ಬೆಂಗಳೂರು [ನ.05]: ಬೆಂಗಳೂರಿನ ಬಹುದಿನದ ಬೇಡಿಕೆಯಾಗಿರುವ, ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿರುವ ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ವಿಸ್ತರಿತ ರೈಲ್ವೆ ಮಂಡಳಿಯಿಂದಲೂ ಒಪ್ಪಿಗೆ ಸಿಕ್ಕಿದೆ. ಈ ಕುರಿತು ಬೆಂಗಳೂರಲ್ಲಿ ಮಂಗಳವಾರ ರೈಲ್ವೆ ಮಂಡಳಿಯ ಮುಖ್ಯಸ್ಥರು, ರಾಜ್ಯ ರೈಲ್ವೆ ಸಚಿವ ಸುರೇಶ್‌ ಅಂಗಡಿ ಮತ್ತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನಡುವೆ ಸಮಾಲೋಚನೆ ನಡೆಯಲಿದ್ದು ಯೋಜನೆಗೆ ಬಾಕಿ ತಾಂತ್ರಿಕ ಪ್ರಕ್ರಿಯೆಗಳನ್ನು ಶೀಘ್ರವೇ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ತೀರ್ಮಾನ ಹೊರಬೀಳುವ ನಿರೀಕ್ಷೆಯಿದೆ.

ದೆಹಲಿಯ ರೈಲ್ವೆ ಭವನದಲ್ಲಿ ಸೋಮವಾರ ನಡೆದ ವಿಸ್ತರಿತ ರೈಲ್ವೆ ಮಂಡಳಿಯ ಸಭೆಯಲ್ಲಿ 18,000 ಕೋಟಿ ರು. ವೆಚ್ಚದಲ್ಲಿ ಈ ಯೋಜನೆ ಜಾರಿಗೆ ತರಲು ಒಪ್ಪಿಗೆ ಸೂಚಿಸಲಾಗಿದೆ. ಹಣಕಾಸು ಸಚಿವಾಲಯ, ನೀತಿ ಆಯೋಗ, ಅಂಕಿ-ಅಂಶಗಳ ಸಚಿವಾಲಯದ ಅಧಿಕಾರಿಗಳು ಈ ವೇಳೆ ಸಭೆಯಲ್ಲಿ ಇದ್ದರು.

ರೈಲ್ವೆ ಮಂಡಳಿಯ ಒಪ್ಪಿಗೆಯಿಂದಾಗಿ ಯೋಜನೆ ಜಾರಿಗಿದ್ದ ಬಹುದೊಡ್ಡ ಅಡ್ಡಿಯೊಂದು ನಿವಾರಣೆಯಾದಂತಾಗಿದೆ. ಉಳಿದಂತೆ ಯೋಜನೆ ಜಾರಿಗೆ ಬರಬೇಕಾದರೆ ಕೇಂದ್ರ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಸಲ್ಲಿಕೆಯಾಗಿ ಸಚಿವ ಸಂಪುಟ ಒಪ್ಪಿಗೆ ಸೂಚಿಸಬೇಕಿದೆ.

ಒಟ್ಟು ನಾಲ್ಕು ಕಾರಿಡಾರ್‌ನಲ್ಲಿ 148 ಕಿ.ಮೀ. ಉದ್ದದ ಈ ಯೋಜನೆ ಜಾರಿಗೆ ಬರಲಿದ್ದು, ಇದರ ವ್ಯಾಪ್ತಿಯಲ್ಲಿ 53 ನಿಲ್ದಾಣಗಳಿರಲಿವೆ.