ಬಂಧಿತ ಆರೋಪಿಗಳಿಂದ 11 ಗ್ರಾಂ ಎಂಡಿಎಂ ಮಾದಕವಸ್ತು, 7 ಗ್ರಾಂ ಹೈಡ್ರಾ ಮ್ಯಾಂಗೋ ಹಾಗೂ 2.5 ಕೆ.ಜಿ. ಗಾಂಜಾ ಜಪ್ತಿ. 

ಬೆಂಗಳೂರು(ಜೂ.02): ರಾಜಧಾನಿಯಲ್ಲಿ ಶಾಲಾ-ಕಾಲೇಜುಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ನಗರ ಪೊಲೀಸರು ಶಾಲಾ-ಕಾಲೇಜುಗಳಿಂದ ನೂರು ಮೀಟರ್‌ ವ್ಯಾಪ್ತಿಯಲ್ಲಿರುವ ಅಂಗಡಿಗಳ ಮೇಲೆ ದಾಳಿ ಮುಂದುವರೆಸಿದ್ದಾರೆ. ದಾಳಿ ವೇಳೆ ಅಂಗಡಿಗಳಲ್ಲಿ ಅಕ್ರಮವಾಗಿ ಮಾದಕವಸ್ತುಗಳು ಹಾಗೂ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿ ಪ್ರಕರಣ ದಾಖಲಿಸುತ್ತಿದ್ದಾರೆ.

ಕಳೆದ ಎರಡು ದಿನಗಳಿಂದ ಪಶ್ಚಿಮ ವಿಭಾಗದ ಎಲ್ಲಾ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ದಾಳಿ ನಡೆಸಿರುವ ಪೊಲೀಸರು ಒಟ್ಟು 164 ಪ್ರಕರಣ ದಾಖಲಿಸಿದ್ದಾರೆ. ಈ ಪೈಕಿ ಮಾದಕವಸ್ತು ಸೇವನೆ ಆರೋಪದಡಿ ಐಪಿಸಿ ಸೆಕ್ಷನ್‌ 27 ಬಿ ಅಡಿ 154 ಪ್ರಕರಣ ದಾಖಲಿಸಿ, 154 ಜನರನ್ನು ಬಂಧಿಸಲಾಗಿದೆ. ಮಾದಕವಸ್ತು ಮಾರಾಟ ಆರೋಪದಡಿ 10 ಜನರನ್ನು ಬಂಧಿಸಿ 11 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆಯಡಿ 10 ಪ್ರಕರಣ ದಾಖಲಿಸಲಾಗಿದೆ.

ಹೆರಾಯಿನ್‌ ಕೇಸ್‌ನಲ್ಲಿ 20 ವರ್ಷ ಜೈಲಿನಲ್ಲಿದ್ದ ವ್ಯಕ್ತಿ, ತನಿಖೆಯಾದ ನಂತ್ರ ಗೊತ್ತಾಯ್ತು ಅದು ಡ್ರಗ್ಸ್‌ ಅಲ್ಲ ಪೌಡರ್‌!

ಕೇಂದ್ರ ವಿಭಾಗದ ಪೊಲೀಸ್‌ ಠಾಣೆಗಳ ವ್ಯಾಪ್ತಿಯ ಶಾಲಾ-ಕಾಲೇಜುಗಳ ನೂರು ಮೀಟರ್‌ ವ್ಯಾಪ್ತಿಯಲ್ಲಿರುವ ಅಂಗಡಿಗಳ ಮೇಲೆ ದಾಳಿ ಮಾಡಿದ್ದು, ಎನ್‌ಡಿಪಿಎಸ್‌ ಕಾಯ್ದೆಯಡಿ 21 ಪ್ರಕರಣ ದಾಖಲಿಸಲಾಗಿದೆ. 18 ಮಂದಿ ಮಾದಕವಸ್ತು ವ್ಯಸನಿಗಳು ಹಾಗೂ 3 ಮಂದಿ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 11 ಗ್ರಾಂ ಎಂಡಿಎಂ ಮಾದಕವಸ್ತು, 7 ಗ್ರಾಂ ಹೈಡ್ರಾ ಮ್ಯಾಂಗೋ ಹಾಗೂ 2.5 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ.