ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಎಸ್‌.ಶ್ರೀಶಾಂತ್‌ ಅವರ ತಂದೆ ವಿ.ಶಾಂತಕುಮಾರನ್‌ ನಿಧನರಾಗಿದ್ದು, ಗಣ್ಯರು ಸಂತಾಪ ಸೂಚಿಸಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಎಸ್‌.ಶ್ರೀಶಾಂತ್‌ ಅವರ ತಂದೆ ವಿ.ಶಾಂತಕುಮಾರನ್‌ ನಾಯರ್‌ ನಿಧನರಾಗಿದ್ದಾರೆ. ಅವರಿಗೆ 89 ವರ್ಷವಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಎರ್ನಾಕುಲಂನ ಲಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಶುಕ್ರವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ ಎಂದು ವಾರದಿಯಾಗಿದೆ.

ವಿ.ಶಾಂತಕುಮಾರನ್‌ ನಾಯರ್‌ ಅವರು ಪತ್ನಿ ಟಿ.ಎನ್‌.ಸಾವಿತ್ರಿ ದೇವಿ, ಮಕ್ಕಳಾದ ದೀಪು, ನಿವೇದಿತಾ, ದಿವ್ಯಾ ಹಾಗೂ ಶ್ರೀಶಾಂತ್‌ ಅವರನ್ನು ಅಗಲಿದ್ದಾರೆ. ತಂದೆಯನ್ನು ಕಳೆದುಕೊಂಡ ಶ್ರೀಶಾಂತ್‌ಗೆ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಇನ್ನು ವಿ.ಶಾಂತಕುಮಾರನ್‌ ಅವರ ಪಾರ್ಥಿವ ಶರೀರವನ್ನು ಕೊಟ್ಟಮಂಗಲಂನಲ್ಲಿರುವ ಅವರ ಪೂರ್ವಜನರ ನಿವಾಸಕ್ಕೆ ಕೊಂಡೊಯ್ಯಲು ನಿರ್ಧರಿಸಲಾಗಿದೆ.

ಕೆಲವು ವರದಿಗಳ ಪ್ರಕಾರ, ಶ್ರೀಶಾಂತ್‌ ಕುಟುಂಬದ‌ ಕೆಲವು ಸದಸ್ಯರು ವಿದೇಶದಲ್ಲಿದ್ದಾರೆ. ಅವರು ಕೇರಳಕ್ಕೆ ಹಿಂದಿರುಗಿದ ನಂತರ ಕೊಟ್ಟಮಂಗಲಂನಲ್ಲಿರುವ ಪೂರ್ವಜರ ಮನೆಗೆ ಮೃತದೇಹ ಕೊಂಡೊಯ್ಯಲಿದ್ದಾರೆ ಎಂದು ಹೇಳಲಾಗಿದೆ. ಇಂದು ಸಂಜೆ ವೇಳೆಗೆ ಅಂತ್ಯಕ್ರಿಯೆ ನೆರವೇರಲಿದೆ. ವಿ.ಶಾಂತಕುಮಾರನ್‌ ನಾಯರ್‌ ಅವರು ಭಾರತೀಯ ಜೀವ ವಿಮಾ ನಿಗಮದಲ್ಲಿ ಪ್ರಾದೇಶಿಕ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದರು.

ತಂದೆಯನ್ನು ಕಳೆದುಕೊಂಡ ಶ್ರೀಶಾಂತ್‌ ಅವರಿಗೆ ಕ್ರಿಕೆಟ್‌ ದಿಗ್ಗಜರು ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. 43 ವರ್ಷದ ಶ್ರೀಶಾಂತ್‌ 2022 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ. ಅವರು ಭಾರತ ಪರ 27 ಟೆಸ್ಟ್, 53 ಏಕದಿನ ಮತ್ತು 10 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 87, 75 ಮತ್ತು 7 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಎಸ್. ಶ್ರೀಶಾಂತ್ ಐಪಿಎಲ್ ಸಮಯದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಎದುರಿಸುತ್ತಿದ್ದರು. 2015 ರಲ್ಲಿ ಕೆಳ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿದರೂ ಅಂತರರಾಷ್ಟ್ರೀಯ ಕ್ರಿಕೆಟ್ ಅಥವಾ ಐಪಿಎಲ್‌ಗೆ ಮರಳಲು ಸಾಧ್ಯವಾಗಲಿಲ್ಲ.

Scroll to load tweet…