ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ತೆಲುಗು ಯುವಕನೊಬ್ಬ ಮಾಡಿದ ಟ್ವೀಟ್ ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಾಸ್ಯ ನಟ ನರಸಿಂಹರಾಜು ಅವರ ವಿಡಿಯೋ ಬಳಸಿ ಮಾಡಿದ ಈ ಪೋಸ್ಟ್ಗೆ ಕನ್ನಡಿಗರು ತಕ್ಕ ತಿರುಗೇಟು ನೀಡುತ್ತಿದ್ದಾರೆ. ಇದರ ಬೆನ್ನಲ್ಲೇ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹ ಹೆಚ್ಚಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಸಿಗಬೇಕು ಎಂಬ ಆಗ್ರಹದ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಪರಭಾಷಿಕನೊಬ್ಬ ಹರಿಬಿಟ್ಟ ಪೋಸ್ಟ್ ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
‘ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು’ ಎಂದು ತೆಲುಗು ಮೂಲದ ಯುವಕನೊಬ್ಬ ಮಾಡಿರುವ ಟ್ವೀಟ್ ಇದೀಗ ಕನ್ನಡಿಗರು ಮತ್ತು ಪರಭಾಷಿಕರ ನಡುವೆ ದೊಡ್ಡಮಟ್ಟದ ಡಿಜಿಟಲ್ ವಾರ್ಗೆ ನಾಂದಿ ಹಾಡಿದೆ.
ಹಾಸ್ಯ ನಟ ನರಸಿಂಹರಾಜು ವಿಡಿಯೋ ಪೋಸ್ಟ್
ಕನ್ನಡದ ಮೇರು ಹಾಸ್ಯ ನಟ ನರಸಿಂಹರಾಜು ಅವರ ದಶಕಗಳ ಹಿಂದಿನ ಹಳೆಯ ಸಿನಿಮಾವೊಂದರ ತುಣುಕನ್ನು ಆಂಧ್ರ ಮೂಲದ ವ್ಯಕ್ತಿ ಬಳಸಿದ್ದಾನೆ. ವಿಡಿಯೋದಲ್ಲಿ ನರಸಿಂಹರಾಜು ಅವರು ಹಲವು ಭಾಷೆಗಳನ್ನು ಮಿಕ್ಸ್ ಮಾಡಿ ಮಾತನಾಡುವ ದೃಶ್ಯವನ್ನು ಪೋಸ್ಟ್ ಮಾಡಿರುವ ಆತ, ‘ಬೆಂಗಳೂರಿನಲ್ಲಿ ಎಲ್ಲ ಭಾಷೆಯ ಜನರೂ ಇದ್ದಾರೆ. ಹೀಗಾಗಿ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು’ ಎಂದು ಬರೆದುಕೊಂಡಿದ್ದಾನೆ.
ಕನ್ನಡದ ಶ್ರೇಷ್ಠ ಕಲಾವಿದರ ದೃಶ್ಯವನ್ನೇ ದುರ್ಬಳಕೆ ಮಾಡಿಕೊಂಡು ಕರ್ನಾಟಕದ ರಾಜಧಾನಿಯ ಅಸ್ಮಿತೆಗೆ ಕೈಹಾಕಿರುವುದು ಕನ್ನಡಿಗರನ್ನು ಕೆರಳಿಸಿದೆ. ಈ ಪೋಸ್ಟ್ ಕಣ್ಣಿಗೆ ಬೀಳುತ್ತಿದ್ದಂತೆಯೇ ಜಾಲತಾಣದಲ್ಲಿ ಕನ್ನಡಿಗರು ಆಕ್ರೋಶ ಹೊರಹಾಕಿದ್ದು, ಲೆಕ್ಕವಿಲ್ಲದಷ್ಟು ರೀಟ್ವೀಟ್ ಮತ್ತು ಕಮೆಂಟ್ಗಳ ಮೂಲಕ ಪ್ರತ್ಯುತ್ತರ ನೀಡುತ್ತಿದ್ದಾರೆ.
'ಹೈದರಾಬಾದ್ ಅನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ನೋಡೋಣ'
ಬೆಂಗಳೂರು ಕರ್ನಾಟಕದ ಅವಿಭಾಜ್ಯ ಅಂಗ ಮತ್ತು ಕನ್ನಡಿಗರ ಹೆಮ್ಮೆ. ನಮ್ಮ ಊರಿನ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ. ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡುವುದಾದರೆ, ಮೊದಲು ನಿಮ್ಮ ಹೈದರಾಬಾದ್ ಅನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ನೋಡೋಣ ಎಂದು ನೆಟ್ಟಿಗರು ನೇರ ಸವಾಲು ಹಾಕಿದ್ದಾರೆ.
ಪ್ರಸ್ತುತ ಎಕ್ಸ್ ಖಾತೆಯಲ್ಲಿ ಕನ್ನಡಿಗರು ಹಾಗೂ ತೆಲುಗು ನೆಟ್ಟಿಗರ ನಡುವೆ ಭಾರೀ ವಾಗ್ವಾದ ನಡೆಯುತ್ತಿದೆ. ಬದುಕು ಕಟ್ಟಿಕೊಳ್ಳಲು ಬಂದು ಅನ್ನ ನೀಡಿದ ನೆಲದ ಮೇಲೆಯೇ ಸವಾರಿ ಮಾಡಲು ಹೊರಟರೆ ಸಹಿಸುವುದಿಲ್ಲ ಎಂದು ಕನ್ನಡಪರ ಹೋರಾಟಗಾರರು ಹಾಗೂ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಕನ್ನಡಿಗರ ನೌಕರಿಗಾಗಿ ಮಹಿಷಿ ವರದಿ ಮಂಡಿಸುವಂತೆ ಒತ್ತಾಯ
ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ ಸೂಕ್ತ ಕಾನೂನು ರೂಪಿಸಬೇಕು. ನ.1ರ ಕನ್ನಡ ರಾಜ್ಯೋತ್ಸವದಂದು ಈ ಕುರಿತು ಅಧಿಕೃತ ಘೋಷಣೆ ಮಾಡಬೇಕೆಂದು ಕರ್ನಾಟಕ ವಿಕಾಸ ರಂಗ ಸರ್ಕಾರವನ್ನು ಒತ್ತಾಯಿಸಿದೆ.
ಮಂಗಳವಾರ ಈ ಕುರಿತು ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಯವರ ಅಧಿಕೃತ ಕಚೇರಿ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕರ್ನಾಟಕ ವಿಕಾಸ ರಂಗದ ರಾಜ್ಯಾಧ್ಯಕ್ಷ ವ.ಚ. ಚನ್ನೇಗೌಡ ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ.
ಐಟಿ, ಬಿಟಿ ಸೇರಿ ಖಾಸಗಿ ರಂಗದ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ 14 ಅಂಶಗಳನ್ನು ಒಳಗೊಂಡ ಪರಿಷ್ಕೃತ ವರದಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ 2017ರ ಫೆಬ್ರವರಿ 1ರಂದೇ ಸರ್ಕಾರಕ್ಕೆ ಸಲ್ಲಿಸಿತ್ತು. ಅಂದಿನಿಂದಲೂ ಈ ವರದಿ ಜಾರಿಗಾಗಿ ಕನ್ನಡಪರ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸುತ್ತಿವೆ. ಆದರೆ ಈವರೆಗೂ ಸಾಧ್ಯವಾಗದಿರುವುದು ಕನ್ನಡಿಗರ ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.






