ಬೀದರ್ನ ಕರ್ನಾಟಕ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ರಫೀಕ್ ತಾಳಿಕೋಟಿ ಅವರು ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ 8 ವಿದ್ಯಾರ್ಥಿಗಳಿಗೆ ಸ್ವಂತ ಖರ್ಚಿನಲ್ಲಿ ವಿಮಾನ ಪ್ರಯಾಣದ ಉಡುಗೊರೆ ನೀಡಿದ್ದಾರೆ. ಈ ಹಿಂದೆ ಶಿವಮೊಗ್ಗ, ಕೊಪ್ಪಳ ಮತ್ತು ಮಹಾರಾಷ್ಟ್ರದಲ್ಲೂ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿಮಾನಯಾನದ ಅವಕಾಶ ಕಲ್ಪಿಸಿದ್ದರು.
ಬೀದರ್: ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರೋತ್ಸಾಹ ನೀಡಲು ಶಿಕ್ಷಕರು ಒಂದು ವಿಶೇಷ ಯೋಚನೆಯನ್ನು ಮಾಡಿದ್ದರು. ತಮ್ಮ ಸ್ವತಃ ಹಣದಿಂದ ವಿದ್ಯಾರ್ಥಿಗಳಿಗೆ ವಿಶೇಷ ವಿಮಾನ ಪ್ರಯಾಣ ಬುಕ್ ಮಾಡಿ, ಮಕ್ಕಳಿಗೆ ಸ್ಡಡಿ ಟೂರ್ ಏರ್ಪಡಿಸಿದ್ದಾರೆ. ಬೀದರ್ನ ಕರ್ನಾಟಕ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ರಫೀಕ್ ತಾಳಿಕೋಟಿ ಈ ಮಹತ್ವದ ಕೆಲಸ ಮಾಡಿದ್ದಾರೆ. ಶಾಲೆಯ ಶಿಕ್ಷಕರಾಗಿರುವ ಅವರು ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕಗಳಿಸಿ ವಿದ್ಯಾರ್ಥಿಗಳನ್ನು ವಿಮಾನ ಹತ್ತಿಸಿ ಅವರ ಕನಸು ನನಸು ಮಾಡಿದ್ದಾರೆ.
SSLC ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ಉಡುಗೊರೆ ಸಿಕ್ಕಿದೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಮಾನಯಾನದ ಭಾಗ್ಯ ಯೋಜನೆಯನ್ನು ವಿಜ್ಞಾನ ಶಿಕ್ಷಕರು ಘೋಷಣೆ ಮಾಡಿದ್ದರು. ಇದರಂತೆ ಬೀದರ್ ನ ಕರ್ನಾಟಕ ಪ್ರೌಢಶಾಲೆಯ ಎಂಟು ವಿದ್ಯಾರ್ಥಿಗಳಿಗೆ ವಿಮಾನಯಾನ ಭಾಗ್ಯ ಕೊಡಿಸಿದ್ದಾರೆ.
ಶಿಕ್ಷಕರ ಪ್ರಯತ್ನಕ್ಕೆ ಮೆಚ್ಚುಗೆ
ಬೀದರ್ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿದ್ಯಾರ್ಥಿಗಳು ಇಂದು ಪ್ರಯಾಣ ಬೆಳೆಸಿದ್ದಾರೆ. ಆ ಮೂಲಕ ಎಸ್ಎಸ್ಎಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ವಿಶೇಷ ಗೌರವ ಸಿಕ್ಕಿದೆ. ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಆಕಾಶದಲ್ಲಿ ಹಾರುವ ಅವಕಾಶ ನೀಡಲಾಗಿದ್ದು, ವಿದ್ಯಾರ್ಥಿಗಳ ಸಾಧನೆಗೆ ವಿಭಿನ್ನ ಪ್ರೋತ್ಸಾಹ ನೀಡುವ ಕಾರ್ಯವನ್ನು ಮಾಡಿರುವ ಶಿಕ್ಷಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ಹಿಂದೆ ಶಿವಮೊಗ್ಗದ ಲಿಂಗಾಪುರ ಗ್ರಾಮದಲ್ಲಿಯೂ ಶಿಕ್ಷಕರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ವಿದ್ಯಾರ್ಥಿಗಳಿಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶವನ್ನು ಕಲ್ಪಿಸಿದ್ದರು. ಗ್ರಾಮದಲ್ಲಿದ್ದ 36 ವಿದ್ಯಾರ್ಥಿಗಳಿ ಪೈಕಿ 6, 7 ತರಗತಿಯ 10 ಮಂದಿಗೆ ವಿಮಾನ ಪ್ರಯಾಣಯಾನ ಭಾಗ್ಯ ಸಿಕ್ಕಿತ್ತು.
ಐದು ಲಕ್ಷದೊಂದಿಗೆ ವಿಮಾನ ಪ್ರಯಾಣ ಭಾಗ್ಯ
ಕೊಪ್ಪಳದ ಜಿಲ್ಲಾ ಬಹುದೂರ್ಬಂಡಿ ಗ್ರಾಮದ ಶಾಲೆಯ ಹೆಡ್ ಮಾಸ್ಟರ್ ಬೀರಪ್ಪ ಅವರು ಸುಮಾರು ಐದು ಲಕ್ಷ ರೂಪಾಯಿ ಖರ್ಚು ಮಾಡಿ 24 ವಿದ್ಯಾರ್ಥಿಗಳು, ಶಿಕ್ಷಕರು, ಅಡುಗೆ ಸಹಾಯರು ಸೇರಿ ಒಟ್ಟು 40 ಮಂದಿಗೆ ವಿಮಾನ ಪ್ರಯಾಣ ಮಾಡಿಸಿದ್ದರು. ಜಿಂದಾಲ್ ವಿಮಾನ ನಿಲ್ದಾಣದಿಂದ ಪ್ರತ್ಯೇಕ ವಿಮಾನ ಬುಕ್ ಮಾಡಿ ಕರೆದುಕೊಂಡು ಬಂದಿದ್ದರು. ಕೊಪ್ಪಳದ ಎಂಪಿ ಹಿಟ್ನಾಲ್ ಅವರು ವಿದ್ಯಾರ್ಥಿಗಳ ಪ್ರವಾಸಕ್ಕೆ ಬಾವುಟ ಹಾರಿಸಿ ಗ್ರೀನ್ ಸಿಗ್ನಲ್ ನೀಡಿದ್ದರು.
28 ವಿದ್ಯಾರ್ಥಿಗಳಿಗೆ ಲಕ್ಕಿ ಚಾನ್ಸ್
ಇದಕ್ಕೂ ಮುನ್ನ ಮಹಾರಾಷ್ಟ್ರ ಅಮರಾವತಿ ಜಿಲ್ಲೆಯ 28 ವಿದ್ಯಾರ್ಥಿಗಳನ್ನು ವಿಮಾನದಲ್ಲಿ ಕರೆದುಕೊಂಡು ಹೋಗಲಾಗಿತ್ತು. ಶಿಕ್ಷಣ ಇಲಾಖೆಯ ಅಧಿಕಾರಿಗಳು, ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಇದರೊಂದಿಗೆ ವಿಮಾನದಲ್ಲಿ ಪ್ರಯಾಣಿಸಿದ್ದ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದರು.







