ಸಂಸದ ತೇಜಸ್ವಿ ಸೂರ್ಯ ಅವರು ನಮ್ಮ ಮೆಟ್ರೋವನ್ನು ತುಮಕೂರಿನವರೆಗೆ ವಿಸ್ತರಿಸುವ  ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ರಿಯಲ್ ಎಸ್ಟೇಟ್‌ಗೆ ಸಹಾಯ ಮಾಡುವ ಹುನ್ನಾರ ಎಂದಿರುವ ಅವರು, ಮೆಟ್ರೋ ಬದಲು ಕಡಿಮೆ ಖರ್ಚಿನ RRTS ಅಥವಾ ಸಬರ್ಬನ್ ರೈಲು ಯೋಜನೆ ಜಾರಿಗೊಳಿಸಲು ಸಲಹೆ ನೀಡಿದ್ದಾರೆ. 

ಬೆಂಗಳೂರು (ನ.17): ಒಂದೆಡೆ ಡಿಸಿಎಂ ಡಿಕೆ ಶಿವಕುಮಾರ್‌ ಅವರ ಸುರಂಗ ರಸ್ತೆ ಯೋಜನೆಗೆ ದೊಡ್ಡ ಅಡ್ಡಿಯಾಗಿ ನಿಂತಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈಗ ರಾಜ್ಯ ಸರ್ಕಾರ ನಮ್ಮ ಮೆಟ್ರೋವನ್ನು ತುಮಕೂರಿನವರೆಗೆ ವಿಸ್ತರಣೆ ಮಾಡಲು ವಿರೋಧ ವ್ಯಕ್ತಪಡಿಸಿದ್ದಾರೆ. ರಿಯಲ್‌ ಎಸ್ಟೇಟ್‌ಗೆ ಸಹಾಯ ಮಾಡೋಕೆ ಹೋದರೆ ಮಾತ್ರವೇ ಇಂಥ ಯೋಚನೆಗಳು ತಲೆಗೆ ಬರುತ್ತವೆ ಎಂದು ಹೇಳಿದ್ದಾರೆ. ಮೆಟ್ರೋ ಇರೋದು ನಗರ ಪ್ರದೇಶದಲ್ಲಿನ ಸಂಚಾರಕ್ಕೆ. ಯಾವುದೇ ಕಾರಣಕ್ಕೂ ಇದು ಜಿಲ್ಲೆ-ಜಿಲ್ಲೆಗಳ ನಡುವಿನ ಸಂಚಾರಕ್ಕೆ ಯೋಗ್ಯವಾದುದಲ್ಲ ಎಂದು ಹೇಳಿದ್ದಾರೆ.

ಬಸವನಗುಡಿ ಕಡಲೆಕಾಯಿ ಪರಿಷೆ ಉದ್ಘಾಟನೆ ಬಳಿಕ ಸಂಸದ ತೇಜಸ್ವಿ ಸೂರ್ಯಗೆ ಮಾಧ್ಯಮದವರು ಇದೇ ವಿಚಾರವಾಗಿ ಪ್ರಶ್ನೆ ಮಾಡಿದರು. ಯಾವುದೇ ಕಾರಣಕ್ಕೂ ತುಮಕೂರಿಗೆ ಮೆಟ್ರೋ ವಿಸ್ತರಣೆ ಮಾಡಬಾರದು ಎಂದು ಹೇಳಿದ್ದಾರೆ. ಯಾವ ಯೋಜನೆಗಳನ್ನು ಎಲ್ಲಿಗೆ ಮಾಡಬೇಕು. ಹೇಗೆ ಮಾಡಬೇಕು ಅನ್ನೋದೇ ಸರ್ಕಾರಕ್ಕೆ ಗೊತ್ತಿಲ್ಲ. ಮೆಟ್ರೋ ನಗರ ಪ್ರದೇಶದ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡೋದಕ್ಕೆ ಇರುವಂಥದ್ದು. ತುಮಕೂರಿಗೆ ಅಭಿವೃದ್ಧಿ ಬೇಕು. ಆದರೆ, ಅದಕ್ಕಾಗಿ ಬೇರೆ ರಾಜ್ಯಗಳಲ್ಲಿರುವಂತೆ RRTS ಮಾಡಬಹುದು ಎಂದು ಹೇಳಿದ್ದಾರೆ.

RRTS, ಸಬರ್ಬನ್‌ ರೈಲು ಯೋಜನೆ ಮಾಡಿ

ಇವತ್ತು ಮೆಟ್ರೋ ಒಂದು ಕಿಲೋಮೀಟರ್‌ಗೆ 450 ಕೋಟಿ ರೂಪಾಯಿ ಹಣ ಖರ್ಚಾಗುತ್ತದೆ. ಅದೇ RRTS ಗೆ 150 ಕೋಟಿ ಕಿಲೋಮೀಟರ್‌ಗೆ ಖರ್ಚಾಗುತ್ತದೆ. ಜೊತೆಗೆ RRTS ಅಥವಾ ಸಬರ್ಬನ್ ರೈಲು ಮಾಡಿದರೆ ಬಹಳ ಜನ ಪ್ರಯಾಣ ಮಾಡಲು ಸಾಧ್ಯವಾಗುತ್ತದೆ. ಮೆಟ್ರೋ ಡಿಸೈನ್ ಹೇಗಿದೆ ಅಂದರೆ ಅಲ್ಲಿ ಕುಳಿತುಕೊಳ್ಳೋದಕ್ಕಿಂತ ಹೆಚ್ಚಾಗಿ ನಿಲ್ಲಲು ಜಾಗ ಇರುತ್ತದೆ. ಕುಳಿತುಕೊಳ್ಳಲು ಬಹಳ ಕಡಿಮೆ ಜಾಗ ಮಾಡಿರುತ್ತಾರೆ. ರಿಯಲ್ ಎಸ್ಟೇಟ್ ಗೆ ಸಹಾಯ ಮಾಡೋಕೆ ಹೋದರೆ ಇಂತಹ ಯೋಜನೆ ತಲೆಗೆ ಬರುತ್ತದೆ. ಇವೆಲ್ಲಾ ಅದಕ್ಕೆ ಮಾಡುತ್ತಿರೋದು ಎಂದು ಹೇಳಿದ್ದಾರೆ.

ರಿಯಲ್ ಎಸ್ಟೇಟ್ ಗೆ ಸಹಾಯ ಮಾಡೋದಕ್ಕೆ ತುಮಕೂರು ಮೆಟ್ರೋ ಅಂತ ತೇಜಸ್ವಿ ಸೂರ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ನಮ್ಮ ಮೆಟ್ರೋ ತುಮಕೂರು, ಹೊಸಕೋಟೆ, ಮಾಗಡಿ ಇರಬಹುದು ಇಲ್ಲಿಗೆ ವಿಸ್ತರಣೆ ಆಗಬೇಕು. ಯಾಕಂದ್ರೆ ಟ್ರಾಫಿಕ್ ಕಡಿಮೆ ಆಗಬೇಕಲ್ವಾ? ಬೆಂಗಳೂರು ನಗರದಲ್ಲಿ ಮೆಟ್ರೋ ಇದರ ನಾಲ್ಕು ಪಟ್ಟು ಆಗಬೇಕು. ರಿಯಲ್ ಎಸ್ಟೇಟ್‌ಗೂ ಮೆಟ್ರೋಗೂ ಏನೂ ಸಂಬಂಧ ಇಲ್ಲ. ಪ್ರಯಾಣಿಕರಿಗೆ ಕುಳಿತುಕೊಳ್ಳಲು ಬೋಗಿಗಳ ಸಂಖ್ಯೆ ಹೆಚ್ಚು ಮಾಡಲಿ. 5 ನಿಮಿಷಕ್ಕೊಂದು ಮೆಟ್ರೋ ಬಿಡಲಿ. ಅಂಥಾ ಟೆಕ್ನಾಲಜಿ ಈಗ ಬಂದಿದೆ ಎಂದು ಹೇಳಿದ್ದಾರೆ.

400 ವರ್ಷಗಳ ಇತಿಹಾಸದ ಪರಂಪರೆ

ಬಸವನಗುಡಿ ಕಡಲೆಕಾಯಿ ಪರಿಷೆ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿದ ತೇಜಸ್ವಿ ಸೂರ್ಯ, 400 ವರ್ಷಗಳ ಇತಿಹಾಸದ ಪರಂಪರೆ ಹೇಗೆ ನಡೆಯುತ್ತಿತ್ತು ಅನ್ನೋದನ್ನು ತೋರಿಸುವ ಪರಿಷೆ ಇದು. ಹಾಗಾಗಿ ಎಲ್ಲರೂ ಮಕ್ಕಳು, ಕುಟುಂಬ ಸಮೇತರಾಗಿ ಬರಬೇಕು. ದೀಪಾಲಂಕಾರ ಈ ಬಾರಿ ಅದ್ಭುತವಾಗಿ ಮಾಡಿದ್ದಾರೆ. ಐದು ದಿನಗಳ ಕಾಲ ಪರಿಷೆ ವಿಸ್ತರಿಸಿದ್ದಾರೆ. ಈ ಆಯೋಜನೆಗಾಗಿ ಸಚಿವ ರಾಮಲಿಂಗರೆಡ್ಡಿಯವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.

ಈ ಬಗ್ಗೆ ಮಾತನಾಡಿದ ರಾಮಲಿಂಗಾ ರೆಡ್ಡಿ,'ನಮ್ಮ ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನ ಕಡಲೆಕಾಯಿ ಪರಿಷೆಗೆ 500 ವರ್ಷದ ಇತಿಹಾಸ ಇದೆ. ಸುತ್ತ ಮುತ್ತ ಜನ ಇಲ್ಲಿ ಕಡಲೆಕಾಯಿ ತಂದು ಪೂಜೆ ಮಾಡುತ್ತಿದ್ದರು. ಈ ವರ್ಷ ಸ್ವಲ್ಪ ವಿಭಿನ್ನವಾಗಿ ಪರಿಷೆ ಮಾಡುತ್ತಿದ್ದೇವೆ. ಹೋದ ವರ್ಷವೇ ಈ ತರಾನೆ ಪರಿಷೆ ಮಾಡಬೇಕಾಗಿತ್ತು. ನನಗೆ ಕಾಲು ಆಪರೇಷನ್ ಆಗಿದ್ದರಿಂದ ಮಾಡೋಕೆ ಆಗಿರಲಿಲ್ಲ. ಕಳೆದ ವರ್ಷದಂತೆ ಈ ವರ್ಷ ಕೂಡ ಟ್ಯಾಕ್ಸ್ ಇಲ್ಲ. ಸುಂಕ ವಸೂಲಿಯಲ್ಲಿ ವ್ಯಾಪಾರಸ್ಥರಿಗೆ ಸಾಕಷ್ಟು ಸಮಸ್ಯೆ ಆಗುತ್ತಿತ್ತು. ಲೈಟಿಂಗ್ ಸಾಂಕೇತಿಕವಾಗಿ ಇತ್ತು ಅದನ್ನು 4-5 ರಸ್ತೆಗಳಿಗೆ ವಿಸ್ತರಿಸಿದ್ದೇವೆ. ಮುಂದಿನ ವರ್ಷ ಇನ್ನಷ್ಟು ಗ್ರ್ಯಾಂಡ್ ಆಗಿ ಮಾಡೋಣ. ಮಹಾನಗರ ಪಾಲಿಕೆ ಅವರೂ ಒಂದಿಷ್ಟು ಅನುದಾನ ಕೊಡುತ್ತಾರೆ. ಪ್ರತೀ ವರ್ಷಕ್ಕಿಂತ ಹೆಚ್ಚಾಗಿಯೇ ಈ ಸಲ ಎಲ್ಲರೂ ಹೆಚ್ಚಿನ ಕೆಲಸ ಮಾಡಿದ್ದಾರೆ ಎಂದಿದ್ದಾರೆ.