ಕಾಳೇನ ಅಗ್ರಹಾರ-ತಾವರೆಕೆರೆ ಮೆಟ್ರೋ ಮಾರ್ಗ ಉದ್ಘಾಟನೆಗೆ ಕೇಂದ್ರದ ಒಪ್ಪಿಗೆಗಾಗಿ ಕಾಯಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಸಿಲ್ಕ್ಬೋರ್ಡ್-ಕೆ.ಆರ್.ಪುರ ಮಾರ್ಗದಲ್ಲಿ ಶೀಘ್ರವೇ ಪ್ರಾಯೋಗಿಕ ಸಂಚಾರ ಆರಂಭವಾಗಲಿದ್ದು, ಕಾಮಗಾರಿ ವಿಳಂಬ ಹಾಗೂ ಅನಗತ್ಯ ಬ್ಯಾರಿಕೇಡ್ ಅಳವಡಿಕೆ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರು: ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಮೆಟ್ರೋ ರೈಲು (ಗುಲಾಬಿ ಮಾರ್ಗ) ಸೇವೆ ಉದ್ಘಾಟನೆಗಾಗಿ ಕೇಂದ್ರ ಸರ್ಕಾರದ ಒಪ್ಪಿಗೆಗೆ ಕಾಯುತ್ತಿದ್ದೇವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಗುರುವಾರ ಮೆಟ್ರೋ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ ಮಾರ್ಗದ ಎಲ್ಲ ಪ್ರಯೋಗಿಕ ಪರೀಕ್ಷೆಗಳು ಮುಗಿದಿದ್ದು, ನಾಲ್ಕೈದು ದಿನಗಳಲ್ಲಿ ಕಾರ್ಯಾಚರಣೆಯ ಅನುಮತಿ ಸಿಗುವ ನಿರೀಕ್ಷೆ ಇದೆ. ಉದ್ಘಾಟಿಸಲು ದಿನಾಂಕ ನಿಗದಿಪಡಿಸುವಂತೆ ಕೋರಿ ಮುಖ್ಯಮಂತ್ರಿಯವರು ಪತ್ರ ಬರೆದಿದ್ದರೂ ಕೇಂದ್ರ ಸರ್ಕಾರದಿಂದ ಈವರೆಗೆ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ, ಮುಂದಿನ ವಾರ ಕೇಂದ್ರ ಸಚಿವರನ್ನು ನೇರವಾಗಿ ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದರು.
2027ರ ಜುಲೈನಲ್ಲಿ ಸಿಲ್ಕ್ಬೋರ್ಡ್-ಕೆ.ಆರ್.ಪುರ ಮಾರ್ಗ:
ಬೆಂಗಳೂರು ಏರ್ಪೋರ್ಟ್ನಿಂದ ಸಿಲ್ಕ್ಬೋರ್ಡ್ವರೆಗಿನ 58 ಕಿ.ಮೀ ಮೆಟ್ರೋ ನೀಲಿ ಮಾರ್ಗದ ಪೈಕಿ ಕೆ.ಆರ್.ಪುರದಿಂದ ಸಿಲ್ಕ್ ಬೋರ್ಡ್ವರೆಗಿನ 19.75 ಕಿ.ಮೀ ಉದ್ದದ ಮಾರ್ಗದಲ್ಲಿ ಈ ತಿಂಗಳ ಅಂತ್ಯದ ವೇಳೆಗೆ ಪ್ರಾಯೋಗಿಕ ಸಂಚಾರ ಆರಂಭಿಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ಪರೀಕ್ಷಾರ್ಥ ಹಾರಾಟ, ತಾಂತ್ರಿಕ ಅನುಮತಿ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಮುಂದಿನ ವರ್ಷದ ಜುಲೈ ವೇಳೆಗೆ ಕೆ.ಆರ್.ಪುರದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ವರೆಗಿನ ಮಾರ್ಗದಲ್ಲಿ ಪ್ರಯಾಣಿಕರ ಸಂಚಾರಕ್ಕೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ. ಹೆಬ್ಬಾಳದಿಂದ ಏರ್ಪೋರ್ಟ್ವರೆಗಿನ ಮಾರ್ಗದಲ್ಲಿ 2027ರ ನವೆಂಬರ್ ವೇಳೆಗೆ ಪ್ರಾಯೋಗಿಕ ಸಂಚಾರ ಮಾಡಲೇಬೇಕೆಂದು ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.
ಅಕ್ಟೋಬರ್ ಕೊನೆಯೊಳಗೆ ಟ್ರಯಲ್ ರನ್
ಮೆಟ್ರೋ ಕಾಮಗಾರಿ ನಡೆಯುತ್ತಿರುವ ಮಾರ್ಗದಲ್ಲಿ ರಸ್ತೆ ಮತ್ತು ಫುಟ್ಪಾತ್ಗಳನ್ನು ಒತ್ತುವರಿ ಮಾಡಿಕೊಂಡು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ಗುತ್ತಿಗೆದಾರರು ಹಾಗೂ ಮೆಟ್ರೋ ಅಧಿಕಾರಿಗಳ ವಿರುದ್ಧ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ.
ಗುರುವಾರ ಮೆಟ್ರೋ ರೈಲು ಅಧಿಕಾರಿಗಳೊಂದಿಗೆ ಹೆಬ್ಬಾಳ-ಕೆ.ಆರ್.ಪುರ ನಡುವಿನ ನೀಲಿ ಮಾರ್ಗದ ಮೆಟ್ರೋ ಪ್ರಗತಿ ಪರಿಶೀಲನೆ ನಡೆಸಿದ ಅವರು, ನಾಗವಾರ ರಿಂಗ್ ರಸ್ತೆಯ ಮಾನ್ಯತಾ ಟೆಕ್ ಪಾರ್ಕ್ ಬಳಿ ರಸ್ತೆಯನ್ನು ಅತಿಕ್ರಮಿಸಿಕೊಂಡು ಅತಿಯಾಗಿ ಬ್ಯಾರಿಕೇಡ್ ಅಳವಡಿಸಿರುವುದಕ್ಕೆ ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಆರ್.ಪುರದಿಂದ ನಾಗವಾರ ಮತ್ತು ಅಲ್ಲಿಂದ ಹೆಬ್ಬಾಳದವರೆಗಿನ ಮಾರ್ಗವು ಅತ್ಯಂತ ಸಂಕೀರ್ಣವಾಗಿದೆ. ಹೀಗಾಗಿ, ಕಾಮಗಾರಿ ತಡವಾಗಿದೆ. ಕೆ.ಆರ್.ಪುರ ಬಳಿ ಕಾಮಗಾರಿ ಆರಂಭಿಸಲು ಮರಗಳನ್ನು ಕಡಿಯುವುದಕ್ಕೆ ನ್ಯಾಯಾಲಯದಿಂದ ಒಂದು ವರ್ಷ ಕಾಲ ತಡೆಯಾಜ್ಞೆ ಇದ್ದ ಕಾರಣ, ಕಾಮಗಾರಿ ನಿಗದಿತ ಅವಧಿಗಿಂತ ಕನಿಷ್ಠ ಒಂದು ವರ್ಷ ವಿಳಂಬವಾಗಿದೆ ಎಂದರು.
ಬೇರೆ ನಗರಗಳಲ್ಲಿ ಮೆಟ್ರೋ ಕಾಮಗಾರಿಗೆ ಮರ ಕಡಿಯಲು ಹೈಕೋರ್ಟ್ ಹೋಗುವ ಅಗತ್ಯವಿರುವುದಿಲ್ಲ. ಆದರೆ, ಬೆಂಗಳೂರಿನಲ್ಲಿ ಪಿಐಎಲ್ ಹಾಕಿ, ಟ್ರೀ ಕಮಿಟಿ ಮತ್ತು ಹೈಕೋರ್ಟ್ ಅನುಮತಿ ಪಡೆದು, ಪ್ರತಿಯೊಂದು ಮರ ಕಡಿಯುವುದಕ್ಕೂ ಕಠಿಣವಾದ ಪ್ರಕ್ರಿಯೆಯನ್ನು ಪಾಲಿಸಬೇಕಾಗಿದೆ. ಇದರ ಜೊತೆಗೆ, ಹಲವೆಡೆ ಕಾವೇರಿ ನೀರು ಸರಬರಾಜು ಪೈಪ್ಲೈನ್ಗಳು ಮತ್ತು ಒಳಚರಂಡಿ ಲೈನ್ಗಳು ಅಡ್ಡಿಯಾಗಿವೆ. ಇವುಗಳನ್ನು ತೆರವುಗೊಳಿಸಿ ಹೊಸ ಲೈನ್ಗಳನ್ನು ಹಾಕಲು ಸುಮಾರು 6 ರಿಂದ 8 ತಿಂಗಳು ಕಾಲ ವಿಳಂಬವಾಗಿದೆ ಎಂದು ಸಚಿವರು ತಿಳಿಸಿದರು.
ಹೊರವರ್ತುಲ ರಸ್ತೆಯಲ್ಲಿ ಅತಿಯಾದ ವಾಹನ ದಟ್ಟಣೆ ಇರುವುದರಿಂದ ಹಗಲಿನಲ್ಲಿ ಕೆಲಸ ಮಾಡಲು ಸಾಧ್ಯವಾಗದೆ ಕೇವಲ ರಾತ್ರಿ 7 ಗಂಟೆಯಿಂದ ಬೆಳಗಿನ ಜಾವದವರೆಗೆ ಮಾತ್ರ ಕೆಲಸ ಮಾಡಬೇಕಾಗಿರುವುದು ವಿಳಂಬಕ್ಕೆ ಕಾರಣವಾಗಿದೆ. ಇಂತಹ ಸಂಕೀರ್ಣವಾದ ಕಾಮಗಾರಿಗಳನ್ನು ಮಾಡುವಾಗ ಸಣ್ಣಪುಟ್ಟ ಸಮಸ್ಯೆಗಳು ಬರುವುದು ಸಹಜವಾದರೂ, ಸಂಬಂಧಪಟ್ಟ ಗುತ್ತಿಗೆದಾರರು ನಿರೀಕ್ಷಿತ ಮಟ್ಟದಲ್ಲಿ ಮತ್ತು ವೇಗವಾಗಿ ಸ್ಪಂದಿಸುತ್ತಿಲ್ಲ. ಈಗಾಗಲೇ ಒಂದು ವರ್ಷ ತಡವಾಗಿದ್ದು, ಇನ್ನೂ ವಿಳಂಬ ಮಾಡದೆ ಅಕ್ಟೋಬರ್ ಕೊನೆಯೊಳಗೆ ಟ್ರಯಲ್ ರನ್ ಮಾಡುವಂತೆ ತಾಕೀತು ಮಾಡಿದ್ದೇನೆ ಎಂದು ಕೃಷ್ಣಬೈರೇಗೌಡ ವಿವರಿಸಿದರು.
ಅನಗತ್ಯ ಬ್ಯಾರಿಕೇಡ್ :
ಹೊರವರ್ತುಲ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ಮುಗಿದಿದ್ದರೂ ಕೆಲವೆಡೆ ಅನಗತ್ಯವಾಗಿ ಬ್ಯಾರಿಕೇಡ್ ಹಾಕಿ ಟ್ರಾಫಿಕ್ ಸಮಸ್ಯೆಯನ್ನು ಉಲ್ಬಣಗೊಳಿಸಲಾಗುತ್ತಿದೆ. ಇದು ಸರಿಯಲ್ಲ. ಹೀಗಾಗಿ, ಬ್ಯಾರಿಕೇಡ್ ಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.


