ಜಯನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಸಂಪೂರ್ಣವಾಗಿ ಕಾನೂನುಬಾಹಿರವಾಗಿತ್ತು ಎಂದು ಪರಾಜಿತ ಅಭ್ಯರ್ಥಿ ಸೌಮ್ಯರೆಡ್ಡಿ ಹೈಕೋರ್ಟ್‌ನಲ್ಲಿ ದೂರಿದ್ದಾರೆ. ಸಿ.ಕೆ. ರಾಮಮೂರ್ತಿ ಅವರ 16 ಮತಗಳ ಗೆಲುವಿಗೆ ಕಾರಣವಾದ ಮರು ಎಣಿಕೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಅವರು ಅರ್ಜಿಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು (ಏ.3): ಕಳೆದ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ವೇಳೆ ನಡೆದ ಮತಗಳ ಮರು ಪರಿಶೀಲನೆ ಮತ್ತು ಮರು ಎಣಿಕೆ ಪ್ರಕ್ರಿಯೆ ಸಂಪೂರ್ಣವಾಗಿ ಕಾನೂನುಬಾಹಿರವಾಗಿತ್ತು ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸೌಮ್ಯರೆಡ್ಡಿ ದೂರಿದ್ದಾರೆ. ಮತದಾನದ ವೇಳೆ ಚಲಾವಣೆಯಾದ ಎಲ್ಲಾ 827 ಅಂಚೆ ಮತಗಳನ್ನು ಮರು ಎಣಿಕೆ ಮಾಡಲು ನಿರ್ದೇಶಿಸುವಂತೆ ಕೋರಿ ಸೌಮ್ಯಾ ರೆಡ್ಡಿ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿ, ನ್ಯಾಯಮೂರ್ತಿ ಎಸ್. ರಾಚಯ್ಯ ಅವರ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.

Add Asianetnews Kannada as a Preferred SourcegooglePreferred

ಈ ವೇಳೆ ಸಾಕ್ಷಿ ವಿಚಾರಣೆಗೆ ಹಾಜರಾದ ಸೌಮ್ಯಾ ರೆಡ್ಡಿ, ಪ್ರತಿವಾದಿಯಾಗಿರುವ ವಿಜೇತ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ಪರ ವಕೀಲರ ಸವಾಲುಗಳಿಗೆ ಉತ್ತರಿಸಿದರು. ತಿರಸ್ಕೃತಗೊಂಡ 198 ಅಂಚೆ ಮತಗಳನ್ನು ನಿಮ್ಮ ಮನವಿಯಂತೆ ಚುನಾವಣಾಧಿಕಾರಿ ಮತ್ತು ಚುನಾವಣಾ ವೀಕ್ಷಕರು ಮರು ಪರಿಶೀಲಿಸಿದ್ದರು. ಅದರಲ್ಲಿ 124 ಮತಗಳು ಸಿಂಧು ಎಂದು ನಿರ್ಧರಿಸಿದ್ದರು. ಬಳಿಕ ಒಟ್ಟಾರೆ ಮತಗಳ ಮರು ಎಣಿಕೆ, ಮರು ಪರಿಶೀಲನೆ ನಡೆಸಿದ ನಂತರ ಅಂತಿಮವಾಗಿ ಸಿ.ಕೆ. ರಾಮಮೂರ್ತಿ 16 ಮತಗಳ ಅಂತರಿಂದ ಗೆಲವು ಸಾಧಿಸಿದ್ದಾಗಿ ಘೋಷಿಸಿದ್ದರು. ಇದು ಹೌದಲ್ಲವೇ? ಎಂದು ವಕೀಲರು ಪ್ರಶ್ನಿಸಿದರು.

ಅದಕ್ಕೆ ಸೌಮ್ಯ ರೆಡ್ಡಿ ಉತ್ತರಿಸಿ, ಚುನಾವಣಾಧಿಕಾರಿ ಮತ್ತು ಚುನಾವಣಾ ವೀಕ್ಷಕರ ಘೋಷಣೆ ತಾಂತ್ರಿಕವಾಗಿ ಸರಿ ಹೌದು. ಆದರೆ, ಮತಗಳ ಮರು ಎಣಿಕೆ ಮತ್ತು ಮರು ಪರಿಶೀಲನೆ ಪ್ರಕ್ರಿಯೆ ಸಂಪೂರ್ಣವಾಗಿ ಕಾನೂನುಬಾಹಿರವಾಗಿ ಮಾಡಲಾಗಿದೆ. ಅದಕ್ಕಾಗಿಯೇ ನಾನು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇನೆ ಎಂದರು.

ಏಪ್ರಿಲ್‌ 6ಕ್ಕೆ ವಿಚಾರಣೆ ಮುಂದೂಡಿಕೆ

ರಾಮಮೂರ್ತಿ ಪರ ವಕೀಲರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸೌಮ್ಯರೆಡ್ಡಿ, ನಾನು 42 ಮತಗಳ ಅಂತದಿಂದ ಗೆದ್ದಿದ್ದೇನೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಯಿತು. ಅದನ್ನು ನೋಡಿ ಗೆಲುವಿನ ಸರ್ಟಿಫಿಕೇಟ್ ಪಡೆದುಕೊಳ್ಳಲು ಮತ ಎಣಿಕೆ ಕೇಂದ್ರಕ್ಕೆ ಹೋಗಿದ್ದೆ. ಆಗ ಈ ಎಲ್ಲಾ ವಿವಾದ-ಗೊಂದಲ ಪ್ರಾರಂಭವಾಯಿತು ಎಂದರು. ಸೌಮ್ಯಾ ರೆಡ್ಡಿ ಅವರ ಉತ್ತರ ದಾಖಲಿಸಿಕೊಂಡ ನ್ಯಾಯಪೀಠ, ಸಾಕ್ಷಿ ವಿಚಾರಣೆಗೆ ವಕೀಲರ ಇನ್ನೂ ಕೆಲವು ಪ್ರಶ್ನೆಗಳಿದ್ದ ಕಾರಣಕ್ಕೆ ವಿಚಾರಣೆಯನ್ನು ಸೋಮವಾರ (ಏ.6) ಮಧ್ಯಾಹ್ನ 3.30ಕ್ಕೆ ಮುಂದೂಡಲಾಯಿತು.