ಅಮೃತ ನಗರೋತ್ಥಾನ ಯೋಜನೆಯಡಿ ಮುಂದಿನ 3 ವರ್ಷ ₹6000 ಕೋಟಿ ವೆಚ್ಚ ಮಾಡಲು ಸಚಿವ ಸಂಪುಟ ಸಮ್ಮತಿ,ಮೂಲಭೂತ ಸೌಲಭ್ಯಕ್ಕೆ ಆದ್ಯತೆ!
ಬೆಂಗಳೂರು (ಜ. 7): ಬೆಂಗಳೂರು ಸಮಗ್ರ (Bengaluru Development) ಅಭಿವೃದ್ಧಿಗೆ ರಾಜ್ಯ ಸರ್ಕಾರವು ಕಟಿಬದ್ಧವಾಗಿದ್ದು, ಅಮೃತ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಅಭಿವೃದ್ಧಿಗೆ ಮುಂದಿನ ಮೂರು ವರ್ಷಗಳಲ್ಲಿ ಒಟ್ಟು ಆರು ಸಾವಿರ ಕೋಟಿ ರು. ವೆಚ್ಚ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ (J C Madhuswamy) ಹೇಳಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ (Cabinet Meeting) ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಅಮೃತ ನಗರೋತ್ಥಾನ ಯೋಜನೆಯಡಿ ಆರು ಸಾವಿರ ಕೋಟಿ ರು. ವೆಚ್ಚ ಮಾಡಲು ತೀರ್ಮಾನಿಸಲಾಗಿದೆ. ಪ್ರತಿ ವರ್ಷ ಎರಡು ಸಾವಿರ ಕೋಟಿ ರು.ನಂತೆ ಮೂರು ವರ್ಷಗಳ ಕಾಲ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
78000 ಮಂದಿಗೆ ನೊಟೀಸ್:
ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ಧತಿಯಡಿಯಲ್ಲಿ 2016-17ನೇ ಸಾಲಿನಿಂದ ಕೆಲವು ತೆರಿಗೆದಾರರಿಂದ ಮತ್ತು ಸರ್ಕಾರದಿಂದಲೂ ತಪ್ಪಾಗಿದೆ. ಇದನ್ನು ಸರಿಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಕಡಿಮೆ ತೆರಿಗೆ ಪಾವತಿ ಮಾಡಿದ 78,000 ಜನರಿಗೆ ನೊಟೀಸ್ (Notice) ನೀಡಲಾಗಿದೆ. ದಂಡ ಹಾಕಿ ತೆರಿಗೆ ಪಾವತಿಸಲು ಪ್ರತಿ ವರ್ಷ ಶೇ.2ರಷ್ಟುಕಟ್ಟಲು ಅನುಮತಿ ನೀಡಲಾಗಿದೆ. ಸರ್ಕಾರದಿಂದಲೂ ತಪ್ಪಾಗಿದ್ದು, ಕೆಲವೆಡೆ ವಲಯಗಳನ್ನು ತಪ್ಪಾಗಿ ಗುರುತಿಸಲಾಗಿದೆ. ಅಂತಹ ಕಡೆಯಲ್ಲಿ ತೆರಿಗೆ ಹೆಚ್ಚಾಗಿ ಪಾವತಿ ಮಾಡಿದ್ದರೆ ಉಳಿಕೆ ಮೊತ್ತವನ್ನು ಮುಂದಿನ ಸಲಕ್ಕೆ ಸರಿದೂಗಿಸಲು ಕ್ರಮ ಕೈಗೊಳ್ಳುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದರು.
ಇದನ್ನೂ ಓದಿ:Covid 19 Guidelines: ಬೆಂಗಳೂರು ಹೊರಗೆ ಕೋವಿಡ್ ನಿರ್ಬಂಧ ಸಡಿಲ?
ಬೆಂಗಳೂರು ಜಲಮಂಡಳಿಯ (Bengaluru Water BoardI ತೊರೆಕಾಡನಹಳ್ಳಿ, ಹಾರೋಹಳ್ಳಿ, ತಾತಗುಣಿಯ ಕಾವೇರಿ 1ನೇ ಹಂತ, 2ನೇ ಹಂತ ಮತ್ತು 3ನೇ ಹಂತ ಜಲರೇಚಕ ಯಂತ್ರಾಗಾರದಲ್ಲಿ ವಿದ್ಯುತ್ ಸ್ವಿಚ್ ಗೇರ್‌ಗಳನ್ನು ಪುನರ್ ನಿರ್ಮಾಣ ಕಾಮಗಾರಿಯ 44.50 ಕೋಟಿ ರು. ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ನೀರಾವರಿ ಯೋಜನೆಯ ಮೂಲಕ ಬೆಂಗಳೂರು ಪೂರ್ವ ತಾಲೂಕಿನ 22 ಕೆರೆಗಳಿಗೆ ನೀರು ತುಂಬಿಸಲು ಮತ್ತು ಹೊಸಕೋಟೆ ತಾಲೂಕಿನ ದೊಡ್ಡಕೆರೆಗೆ ನೀರು ತುಂಬಿಸುವ ಏತ ನೀರಾವರಿ ಯೊಜನೆ ಪುನರುಜ್ಜೀವನ ಕಾಮಗಾರಿಗಳನ್ನು 93.50 ಕೋಟಿ ರು. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
300 ಎಲೆಕ್ಟ್ರಾನಿಕ್ ಬಸ್ ಖರೀದಿ
ಕೋವಿಡ್ ಸಮಸ್ಯೆ ಎದುರಾದ ಕಾರಣ ಬಿಎಂಟಿಸಿ ಎ.ಸಿ. ವಾಹನಗಳಿಗೆ (BMTC) ಬೇಡಿಕೆ ತಗ್ಗಿದ್ದ ಹಿನ್ನೆಲೆಯಲ್ಲಿ 300 ನಾನ್ ಎ.ಸಿ. ಎಲೆಕ್ಟ್ರಿಕಲ್ ಬಸ್‌ಗಳನ್ನು (Electrical Bus) ಖರೀದಿಸಲು ಅನುಮೋದನೆ ನೀಡಲಾಗಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.ಬಿಎಂಟಿಸಿ ಮೊದಲು 30 ಎ.ಸಿ. ಎಲೆಕ್ಟ್ರಿಕಲ್ ಬಸ್ ಖರೀದಿಸಲು ತೀರ್ಮಾನಿಸಿತ್ತು. ಆದರೆ, ಕೋವಿಡ್ ತಲೆದೋರಿದ ಪರಿಣಾಮ ಎ.ಸಿ. ವಾಹನಗಳಿಗೆ ಬೇಡಿಕೆ ಕಡಿಮೆಯಾಗಿದೆ. ರಾಜ್ಯ ಸರ್ಕಾರ 100 ಕೋಟಿ ರು. ವೆಚ್ಚದಲ್ಲಿ ಕೇಂದ್ರ ಸರ್ಕಾರ ಪ್ರತಿ ಬಸ್‌ಗೆ ನೀಡುವ ಗರಿಷ್ಠ ಬೇಡಿಕೆ ಪ್ರೋತ್ಸಾಹ ಧನ ಸೇರಿಸಿಕೊಂಡು 300 ಎಲೆಕ್ಟ್ರಿಕಲ್ ಬಸ್‌ಗಳನ್ನು ಕ್ರಾಸ್ ಕಾಸ್ಟ್ ಕಾಂಟ್ರಾಕ್ಟ್ ಬಿಡ್ಡಿಂಗ್ ಮೂಲಕ ಕಾರ್ಯಾಚರಣೆ ಕೈಗೊಳ್ಳಲು ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:Karnataka BJP : ನನ್ಮಗ ಎಲ್ಲಾ ಹಾಳ್ ಮಾಡಿದ್ದಾನೆ - ಬಯಲಾಯ್ತು ಬಿಜೆಪಿ ನಾಯಕರ ಗುಸು ಗುಸು !
