ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ರಾಮೇಶ್ವರಂ ಕೆಫೆ ಮಾಲೀಕರು ತಮ್ಮ ಹೋಟೆಲ್‌ನ ಆಹಾರ ಯಾಕೆ ದುಬಾರಿ ಎಂಬುದಕ್ಕೆ ಸ್ಪಷ್ಟನೆ ನೀಡಿದ್ದಾರೆ, ಆದರೆ ರಾಘವೇಂದ್ರ ರಾವ್ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್ ವ್ಯಕ್ತವಾಗಿದೆ.

ಬೆಂಗಳೂರು: ರಾಮೇಶ್ವರಂ ಕೆಫೆ ಹಲವು ವಿಚಾರಗಳಿಗಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಜನರ ಮರಳೋ, ಜಾತ್ರೆ ಮರಳೋ ಎಂಬಂತೆ ಜನರು ರಾಮೇಶ್ವರಂ ಕೆಫೆಗೆ ಆಗಮಿಸೋದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿರುತ್ತವೆ. ಹಾಗೆಯೇ ರಾಮೇಶ್ವರಂ ಕೆಫೆಯಲ್ಲಿ ಬಳಕೆ ಮಾಡಲಾಗುವ ತುಪ್ಪ ಮತ್ತು ಆಹಾರದ ಬೆಲೆಯೂ ಟ್ರೋಲ್ ಆಗುತ್ತಿರುತ್ತವೆ. ತನ್ನದೇ ಆದ ಗ್ರಾಹಕರನ್ನು ಹೊಂದಿರುವ ರಾಮೇಶ್ವರಂ ಕೆಫೆ ಮಾಲೀಕರು, ಇಲ್ಲಿಯ ಆಹಾರ ಯಾಕೆ ದುಬಾರಿ ಎಂಬ ಪ್ರಶ್ನೆಗೆ ಪ್ರಶಸ್ತಿ ಸಮಾರಂಭವೊಂದರಲ್ಲಿ ಉತ್ತರಿಸಿದ್ದಾರೆ.

ರಾಮೇಶ್ವರಂ ಕೆಫೆ ಯಾಕೆ ಇಷ್ಟೊಂದು ದುಬಾರಿ?

ರಾಮೇಶ್ವರಂ ಕೆಫೆ ಮಾಲೀಕರಾದ ರಾಘವೇಂದ್ರ ರಾವ್ ಮತ್ತು ದಿವ್ಯಾ ರಾಘವೇಂದ್ರ ರಾವ್ ಅವರಿಗೆ ಸನ್ ಉದಯ ವಾಹಿನಿಯು 2026ರ ವರ್ಷದ ಕನ್ನಡಿಗ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಪ್ರಶಸ್ತಿ ಪ್ರದಾನ ಬಳಿಕ ನಿರೂಪಕಿ, ನಟಿ ಅಂಕಿತಾ ಅಮರ್, ರಾಮೇಶ್ವರಂ ಕೆಫೆ ದೇವಸ್ಥಾನ ಇದ್ದ ಹಾಗೆ. ಇಲ್ಲಿಯ ಆಹಾರ ಪ್ರಸಾದ ಸೇವಿಸಿದಂತೆ ಹೇಳುತ್ತೀರಿ. ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದ ಉಚಿತವಾಗಿ ಸಿಗಬೇಕು ಅಲ್ಲವಾ? ರಾಮೇಶ್ವರಂ ಕೆಫೆ ಯಾಕೆ ಇಷ್ಟೊಂದು ದುಬಾರಿ ಎಂದು ಪ್ರಶ್ನೆ ಮಾಡುತ್ತಾರೆ.

ದುಬಾರಿ ಪ್ರಶ್ನೆಗೆ ರಾಘವೇಂದ್ರ ರಾವ್ ಉತ್ತರವೇನು?

ಈ ಪ್ರಶ್ನೆಗೆ ಉತ್ತರಿಸಿದ ರಾಘವೇಂದ್ರ ರಾವ್, ರಾಮೇಶ್ವರಂ ಕೆಫೆ ದುಬಾರಿ ಅಲ್ಲ. ನಾವು ತರಕಾರಿ ಸೇರಿದಂತೆ ಪ್ರತಿಯೊಂದು ವಸ್ತುವನ್ನು ಗುಣಮಟ್ಟ ನೋಡಿ ತೆಗೆದುಕೊಂಡು ಬರುತ್ತವೆ. ದೇವಸ್ಥಾನದಲ್ಲಿ ಪ್ರಸಾದವನ್ನು ಹೇಗೆ ಶ್ರದ್ಧೆಯಿಂದ ಮಾಡ್ತಾರೋ? ಹಾಗೆಯೇ ನಮ್ಮಲ್ಲಿಯೂ ಆಹಾರ ತಯಾರಿಸಲಾಗುತ್ತದೆ. ನಮ್ಮ ಹುಡುಗರು ಸಹ ಬೆಳಗ್ಗೆ ದೇವರನ್ನು ನೆನೆದು ಅಡುಗೆಕೆಲಸ ಆರಂಭಿಸುತ್ತಾರೆ. ಪ್ರತಿದಿನ ಬೆಳಗ್ಗೆ 5 ಗಂಟೆಗೆ ರಾಷ್ಟ್ರಗೀತೆ ಹಾಡುವ ಮೂಲಕ ನಮ್ಮ ಕೆಲಸಗಳು ಆರಂಭಗೊಳ್ಳುತ್ತವೆ. ಇದುವೇ ನಮ್ಮ ಕೆಫೆಯ ವಿಶೇಷತೆ. ಕೆಫೆಯಲ್ಲಿ ಬೇರೆ ಬೇರೆ ಭಾಗದ ಜನರು ಕೆಲಸ ಮಾಡುತ್ತಾರೆ. ಈ ಎಲ್ಲರನ್ನೂ ರಾಷ್ಟ್ರಗೀತೆ ಒಂದುಗೂಡಿಸುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ದಿವ್ಯಾ ರಾವ್, ನನಗೆ ನಮ್ಮ ಯಜಮಾನರನ್ನು ಈ ರೀತಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೋಡಬೇಕು ಅನ್ನೋದು ನನ್ನ ಆಸೆಯಾಗಿತ್ತು. ಮುಂಬೈ, ವಿದೇಶಗಳಿಗೆ ಹೋದಾಗ ಜನರು ನಮ್ಮನ್ನು ಗುರುತಿಸುತ್ತಾರೆ. ನಮ್ಮವರೇ ನಮ್ಮನ್ನು ಗುರುತಿಸಿದಾಗ ಹೆಚ್ಚು ಸಂತಸವಾಗುತ್ತದೆ ಎಂದು ಹೇಳಿದರು.

ರಾಘವೇಂದ್ರ ರಾವ್ ಹೇಳಿಕೆ ಟ್ರೋಲ್!

ಸದ್ಯ ರಾಘವೇಂದ್ರ ರಾವ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ. ರಾಮೇಶ್ವರಂ ಕೆಫೆಯಲ್ಲಿ ತರಕಾರಿನ ಮಂಗಳ ಗ್ರಹದಿoದ ತರುಸ್ತಾರೆ ಅoತ ಕಾಣುತ್ತೆ ಎಂದು ತಮಾಷೆ ಮಾಡಿದ್ದಾರೆ. ರಾಮೇಶ್ವರಂ ಕೆಫೆಯಲ್ಲಿ ಒಬ್ಬ ಬಡವ ಹೋಗಿ ಒಂದೇ ಒಂದು ಪ್ಲೇಟ್ ಇಡ್ಲಿ ತಿನ್ನಲು ಆಗಲ್ಲ. ದುಬಾರಿ ಏನಿಲ್ಲ ಒಂದು ದೋಸೆ ಬರಿ 200 ರೂಪಾಯಿ ಅಷ್ಟೇ. ಕಲಬೆರೆಕೆ ಮಾಡಲ್ಲ ಅಂತೆ. ಹಾಗಾದ್ರೆ ಬೆಂಗಳೂರಲ್ಲಿ ಅದೆಷ್ಟೋ ಒಳ್ಳೆ ಹೋಟೆಲ್ ಇದೆ. ಅವರ ಬೆಲೆ ಇವರಿಗಿಂತ ತುಂಬಾ ಕಡಿಮೆ ಇದೆ. ಹಾಗಾದ್ರೆ ಅವರಿ ಕಲಬೆರೆಕೆ ಮಾಡ್ತಾರಾ ಎಂದು ಪ್ರಶ್ನಿಸಿದ್ದಾರೆ.