ನೂಡಲ್ಸ್ನಲ್ಲಿ ಖಾರ ಹೆಚ್ಚಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಫಾಸ್ಟ್ಫುಡ್ ಅಂಗಡಿಯ ಮೂವರು ಕಾರ್ಮಿಕರ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪ ನಡೆದಿದೆ.
ನೂಡಲ್ಸ್ನಲ್ಲಿ ಖಾರ ಹೆಚ್ಚಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಫಾಸ್ಟ್ಫುಡ್ ಅಂಗಡಿಯ ಮೂವರು ಕಾರ್ಮಿಕರ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪ ನಡೆದಿದೆ. ಅಸ್ಸಾಂ ಮೂಲದ ಮೂವರು ಕಾರ್ಮಿಕರ ಮೇಲೆ ಹಲ್ಲೆ ನಡೆದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಕ್ಟೋಬರ್ 29ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ನೂಡಲ್ಸ್ನ ರುಚಿ ವಿಚಾರವಾಗಿ ಆರಂಭವಾದ ಸಣ್ಣ ಜಗಳ ವಿಕೋಪಕ್ಕೆ ತಿರುಗಿದೆ. ಹಲ್ಲೆ ನಡೆಸಿದವರು ಮದ್ಯದ ಅಮಲಿನಲ್ಲಿದ್ದರು ಎಂದು ವರದಿಯಾಗಿದೆ.
ನೂಡಲ್ಸ್ ಖಾರಕ್ಕೆ ಆಕ್ಷೇಪ, ಬಳಿಕ ಕಾರ್ಮಿಕರ ಮೇಲೆ ಹಲ್ಲೆ!
ಮಾಹಿತಿಯ ಪ್ರಕಾರ, ಎಲೆಕ್ಟ್ರಾನಿಕ್ ಸಿಟಿ ಸಮೀಪದ ಫಾಸ್ಟ್ಫುಡ್ ಅಂಗಡಿಗೆ ಬಂದಿದ್ದ ಕೆಲವರು ನೂಡಲ್ಸ್ನಲ್ಲಿ ಖಾರ ಹೆಚ್ಚಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಅಂಗಡಿಯಲ್ಲಿದ್ದ ಕಾರ್ಮಿಕರೊಂದಿಗೆ ಮಾತಿನ ಚಕಮಕಿ ನಡೆದಿದೆ. ಆರಂಭದಲ್ಲಿ ವಾಗ್ವಾದಕ್ಕೆ ಸೀಮಿತವಾಗಿದ್ದ ಜಗಳ ಬಳಿಕ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ.
ಆರೋಪಿಗಳು ಅಸ್ಸಾಂ ಮೂಲದ ಮೂವರು ಕಾರ್ಮಿಕರನ್ನು ತಳ್ಳಾಡಿ, ಒದ್ದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯ ಪರಿಣಾಮ ಕಾರ್ಮಿಕರು ನೆಲಕ್ಕೆ ಬಿದ್ದಿದ್ದಾರೆ. ಈ ಘಟನೆಯ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿವೆ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಘಟನೆಗೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ಕುರಿತು ತನಿಖೆ ಕೈಗೊಂಡಿದ್ದು, ಹಲ್ಲೆಯಲ್ಲಿ ಭಾಗಿಯಾಗಿರುವವರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ದೆಹಲಿಯಲ್ಲೂ ಈ ಹಿಂದೆ ಇಂತಹದ್ದೇ ಘಟನೆ ವರದಿ
ಇನ್ನು ಅಕ್ಟೋಬರ್ ತಿಂಗಳಲ್ಲೇ ದೆಹಲಿಯಲ್ಲೂ ಮಹಿಳೆಯರು ಮತ್ತು ಅವರ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ ಆರೋಪದ ಘಟನೆ ವರದಿಯಾಗಿತ್ತು. ನಾಗಾಲ್ಯಾಂಡ್ ಮೂಲದ ಮಹಿಳೆಯೊಬ್ಬರು ದೆಹಲಿಯ ಚಾಣಕ್ಯಪುರಿಯ ಅಶೋಕ ಹೋಟೆಲ್ ಬಳಿ ಮೂವರು ವ್ಯಕ್ತಿಗಳು ತಮ್ಮನ್ನು ಹಾಗೂ ಸ್ನೇಹಿತರನ್ನು ಬಿಳಿ ಬಣ್ಣದ ಮರ್ಸಿಡಿಸ್ ಕಾರಿನೊಳಗೆ ಬಲವಂತವಾಗಿ ಕರೆದೊಯ್ಯಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಅವರ ವೈದ್ಯ ಸ್ನೇಹಿತನ ಮೇಲೂ ಹಾಕಿ ಸ್ಟಿಕ್ ಮತ್ತು ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಲಾಗಿತ್ತು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿರುವ ಈ ಘಟನೆ ಸಾರ್ವಜನಿಕ ಸ್ಥಳಗಳಲ್ಲಿ ಸಣ್ಣ ವಿಚಾರಗಳಿಗೂ ಹಿಂಸಾಚಾರಕ್ಕೆ ಇಳಿಯುತ್ತಿರುವ ಪ್ರವೃತ್ತಿ ಮತ್ತೊಮ್ಮೆ ಆತಂಕ ಮೂಡಿಸಿದೆ.




