Asianet Suvarna News Asianet Suvarna News

Loudspeaker Permission ಧ್ವನಿವರ್ಧಕ ಬಳಸಲು ಅರ್ಜಿ ಸಲ್ಲಿಸಿ, ಕಮಲ್ ಪಂತ್ ಸೂಚನೆ!

  • ಧ್ವನಿವರ್ಧಕ ಬಳಕೆಗೆ ಆಯಾ ವಿಭಾಗದ ಎಸಿಪಿ ಕಚೇರಿಗೆ ಅರ್ಜಿ ಸಲ್ಲಿಸಿ
  • ಶಬ್ಧ ಮಾಲಿನ್ಯ ನಿಯಂತ್ರಣ ನಿಯಮ 2000ನ್ನು ಜಾರಿಗೊಳಿಸಲು ಸುತ್ತೋಲೆ
  • ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಸೂಚನೆ
Police Commissioner of Bangalore kamal pant ask to submit form for loudspeaker permission ckm
Author
Bengaluru, First Published May 13, 2022, 5:15 AM IST

ಬೆಂಗಳೂರು(ಮೇ.13): ರಾಜ್ಯ ಸರ್ಕಾರದ ಮಾರ್ಗಸೂಚಿ ಹೊರಡಿಸಿದ ಬೆನ್ನಲ್ಲೇ ನಗರ ವ್ಯಾಪ್ತಿಯಲ್ಲಿ ಧ್ವನಿ ವರ್ಧಕ ಬಳಕೆ ಸಂಬಂಧ ಮೇ.25ವರೊಳಗೆ ಎಸಿಪಿ ಕಚೇರಿಗೆ ಅರ್ಜಿ ಸಲ್ಲಿಸುವಂತೆ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಸೂಚಿಸಿದ್ದಾರೆ.

ಇತ್ತೀಚೆಗೆ ರಾಜ್ಯದಲ್ಲಿ ಧ್ವನಿವರ್ಧಕ ಬಳಕೆ ಸಂಬಂಧ ಮಾರ್ಗಸೂಚಿಸಿ ಹೊರಡಿಸಿದೆ. ಇದರಲ್ಲಿ ಧ್ವನಿವರ್ಧಕ ಬಳಕೆ ಮುನ್ನ ಹದಿನೈದು ದಿನದೊಳಗೆ ನಗರ ವ್ಯಾಪ್ತಿಯಲ್ಲಿ ಎಸಿಪಿ ಹಾಗೂ ಜಿಲ್ಲಾ ಮಟ್ಟದಲ್ಲಿ ಡಿವೈಎಸ್ಪಿಗಳಿಂದ ಅನುಮತಿ ಪಡೆಯುವಂತೆ ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಧ್ವನಿವರ್ಧಕ ಬಳಕೆಗೆ ಆಯಾ ವಿಭಾಗದ ಎಸಿಪಿ ಕಚೇರಿಗೆ ಅರ್ಜಿ ಸಲ್ಲಿಸಿ ಅನುಮತಿಪಡೆಯುವಂತೆ ಆಯುಕ್ತರು ಹೇಳಿದ್ದಾರೆ.

ಮತ್ತೆ ಸ್ಪೀಕರ್ ಸದ್ದು, ಸರ್ಕಾರದ ಆದೇಶ ಆಜಾನ್​ಗೆ ಅನ್ವಯ ಆಗಲ್ಲ ಎಂದ ವಕ್ಫ್ ಮಂಡಳಿ ಅಧ್ಯಕ್ಷ

ಧ್ವನಿವರ್ಧಕ ಬಳಕೆಗೆ ಅನುಮತಿ ಅಗತ್ಯ: ಡಿಸಿ
ಚಾಮರಾಜನಗರ ಶಬ್ಧ ಮಾಲಿನ್ಯ ನಿಯಂತ್ರಣ ನಿಯಮ ಸಂಬಂಧ ಹೊರಡಿಸಲಾದ ಸುತ್ತೋಲೆ ಅನ್ವಯ ಧ್ವನಿವರ್ಧಕ ಬಳಸುವವರು 15 ದಿನಗಳೊಳಗೆ ಅನುಮತಿ ಪಡೆಯಬೇಕಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶಬ್ಧ ಮಾಲಿನ್ಯ ನಿಯಂತ್ರಣ ಸಂಬಂಧ ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಇಲಾಖೆ ಹೊರಡಿಸಿರುವ ಸುತ್ತೋಲೆ ಸಂಬಂಧ ಶಬ್ಧ ಮಾಲಿನ್ಯ ನಿಯಂತ್ರಣ ಕುರಿತ ಕ್ರಮ ಕೈಗೊಳ್ಳುವ ಸಂಬಂಧ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಶಬ್ಧ ಮಾಲಿನ್ಯ ನಿಯಂತ್ರಣ ನಿಯಮ 2000ನ್ನು ಜಾರಿಗೊಳಿಸಲು ಸುತ್ತೋಲೆ ಹೊರಡಿಸಲಾಗಿದೆ. ಧ್ವನಿವರ್ಧಕ ಬಳಕೆ ಸಂಬಂಧ ಸುತ್ತೋಲೆಯಲ್ಲಿ ನೀಡಿರುವ ನಿರ್ದೇಶನಗಳನ್ನು ಪಾಲಿಸಬೇಕಿದೆ. ಧ್ವನಿವರ್ಧಕಗಳ ಬಳಕೆಗೆ ಅನುಮತಿಸುವ ಅರ್ಜಿ ಪರಿಶೀಲಿಸಿ ನಿರ್ಧರಿಸಲು ತಹಶೀಲ್ದಾರ್‌, ಪೊಲೀಸ್‌ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿನಿಧಿ ಸಮಿತಿ ರಚಿಸಲು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ತಹಶೀಲ್ದಾರ್‌ ಕಚೇರಿಯಲ್ಲಿ ಧ್ವನಿವರ್ಧಕ ಬಳಕೆ ಅರ್ಜಿ ನಮೂನೆ ಲಭ್ಯವಿದ್ದು, ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು.

ರಾತ್ರಿ ವೇಳೆ ಧ್ವನಿವರ್ಧಕ ಬಳಕೆ ನಿಷೇಧ: ಮಾರ್ಗಸೂಚಿ ಉಲ್ಲಂಘಿಸಿದ್ರೆ ಕಠಿಣ ಕ್ರಮ: ಸಚಿವ ಆರಗ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್‌ ಮಾತನಾಡಿ, ಧ್ವನಿವರ್ಧಕ ಬಳಕೆಗೆ ಅನುಮತಿ ಪಡೆದುಕೊಳ್ಳುವವರು ನಿಯಮಾವಳಿಯಲ್ಲಿ ಸೂಚಿಸಿರುವ ಶಬ್ದದ ಪ್ರಮಾಣದ ಮಿತಿಯನ್ನು ಪಾಲಿಸಬೇಕಿದೆ. ಧ್ವನಿವರ್ಧಕ ಬಳಕೆ ಸಂಬಂಧ ಹಗಲು ಸಮಯವನ್ನು ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಹಾಗೂ ರಾತ್ರಿ ಸಮಯವನ್ನು ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ನಿಗದಿ ಮಾಡಲಾಗಿದೆ.

ಸಭೆಯಲ್ಲಿ ಎಡಿಸಿ ಕಾತ್ಯಾಯಿನಿದೇವಿ, ಡಿವೈಎಸ್‌ಪಿ ನಾಗರಾಜು, ತಹಶೀಲ್ದಾರ ರವಿಶಂಕರ್‌, ನಂಜಯ್ಯ, ಮಂಜುಳಾ, ನಾಗರಾಜು, ಆನಂದನಾಯಕ, ಜಿಲ್ಲಾ ಪರಿಸರ ಅಧಿಕಾರಿ ರಘುರಾಮ್‌, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಾದ ಪಂಕಜ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಕೆ. ಸುರೇಶ್‌ ಇದ್ದರು.

ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಯಾವುದೇ ಧ್ವನಿವರ್ಧಕ ಬಳಕೆಗೆ ಅವಕಾಶವಿಲ್ಲ. ಬೇರೆ ಸಮಯದಲ್ಲಿ ಧ್ವನಿವರ್ಧಕಗಳಿಂದ ಉತ್ಪತ್ತಿಯಾಗುವ ಶಬ್ದದ ಪ್ರಮಾಣ ಎಷ್ಟಿರಬೇಕು ಎಂಬ ಬಗ್ಗೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಕೈಗಾರಿಕಾ ವಲಯ, ವಸತಿ ಪ್ರದೇಶಗಳು, ವಾಣಿಜ್ಯ ವಲಯ ಹಾಗೂ ನಿಶ್ಶಬ್ದ ವಲಯಗಳಲ್ಲಿ ಯಾವ ಪ್ರಮಾಣದಲ್ಲಿರಬೇಕು ಎಂಬುದೂ ತಿಳಿಸಲಾಗಿದೆ. ಯಾವ ದರ್ಜೆಯ ಅಧಿಕಾರಿಗಳು ಧ್ವನಿವರ್ಧಕಗಳಿಗೆ ಅನುಮತಿ ನೀಡಬಹುದು ಹಾಗೂ ಕಾನೂನು ಬಾಹಿರವಾಗಿ ಇರುವ ಧ್ವನಿವರ್ಧಕಗಳನ್ನು ತೆಗೆದು ಹಾಕುವುದು ಯಾರ ಜವಾಬ್ದಾರಿ ಎಂಬುದರ ಬಗ್ಗೆಯೂ ಉಲ್ಲೇಖಿಸಲಾಗಿದೆ. ಹೀಗಾಗಿ ಧ್ವನಿವರ್ಧಕ ಉಪಯೋಗಿಸುವವರು 15 ದಿನದೊಳಗಾಗಿ ಸಂಬಂಧಪಟ್ಟಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ಇಲ್ಲದಿದ್ದರೆ ತಾರತಮ್ಯವಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Follow Us:
Download App:
  • android
  • ios