* ಕರ್ನಾಟಕದಲ್ಲಿ ಲೌಡ್‌ಸ್ಪೀಕರ್ ವಿವಾದ* ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ನಿಷೇಧ* ಸರ್ಕಾರದ ಆದೇಶ ಆಜಾನ್​ಗೆ ಅನ್ವಯ ಆಗಲ್ಲ * ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೊಹಮ್ಮದ್ ಷಫಿ ಸಾ-ಆದಿ ಹೇಳಿಕೆ

ಬೆಂಗಳೂರು, (ಮೇ.12): ಕರ್ನಾಟಕದಲ್ಲಿ ಇನ್ಮುಂದೆ ಲೌಡ್‌ಸ್ಪೀಕರ್ (Loud Speaker) ಬಳಸುವುದಕ್ಕೆ ಕೆಲ ಮಾರ್ಗಸೂಚಿಗಳನ್ನ ಪ್ರಕಟಿಸಲಾಗಿದೆ. ಲೌಡ್‌ಸ್ಪೀಕರ್ 15 ದಿನಗಳ ಒಳಗೆ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ತಿಳಿಸಿದೆ. ಜೊತೆಗೆ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕ ಬಳಸದಂತೆ ಸೂಚನೆ ನೀಡಿದೆ. 

ಈ ಆದೇಶಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಸರ್ಕಾರದ ಆದೇಶ ಆಜಾನ್‌ಗೆ ಅನ್ವಯ ಆಗುವುದಿಲ್ಲ. ಬೆಳಗ್ಗೆ 5 ಗಂಟೆಗೆ ಕೂಗುವ ಆಜಾನ್ ಅದು ಪ್ರಾರ್ಥನೆ ಅಲ್ಲ. ಬೆಳಗ್ಗೆ 5 ಗಂಟೆಗೆ ಕೂಗುವುದು ಪ್ರಾರ್ಥನೆಗೆ ಕರೆಯುವ ಸಂದೇಶ ಎಂದಿದ್ದಾರೆ.

 ಸುಪ್ರೀಂಕೋರ್ಟ್ ಆದೇಶದಲ್ಲೂ ಆಜಾನ್ ಬಗ್ಗೆ ವಿರೋಧ ಇಲ್ಲ. ಆಜಾನ್‌ಗೆ ನಾವು ಧ್ವನಿವರ್ಧಕ ಮೂಲಕವೇ ಕರೆಯಬೇಕು. ಸರ್ಕಾರದ ಆದೇಶ ಏನಿದೆ ಅದನ್ನ ಪಾಲನೆ ಮಾಡುತ್ತೇವೆ. ಆದರೆ ಆಜಾನ್‌ಗೆ ತಡೆಯಿಲ್ಲ ಎಂದು ಮೊಹಮ್ಮದ್ ಷಫಿ ಸಾ-ಆದಿ ಹೇಳಿದ್ದಾರೆ.

ರಾಜ್ಯದಲ್ಲೀಗ ಆಜಾನ್ VS ಸುಪ್ರಭಾತ: ಯಾವ ಜಿಲ್ಲೆಯಲ್ಲಿ ಹೇಗಿದೆ ಪರಿಸ್ಥಿತಿ? ಇಲ್ಲಿದೆ ವಿವರ

ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ
ದೇವಸ್ಥಾನ, ಮಸೀದಿಗಳಿಗೆ ನಿರ್ದಿಷ್ಟ ಶಬ್ದ ಮಾಡುವ ಸ್ಪೀಕರ್‌ ಬಳಕೆಗೆ ಸೂಚನೆ ನೀಡಿದ್ದು, ಎಲ್ಲರೂ ಆ ನಿಯಮ ಪಾಲನೆ ಮಾಡಬೇಕು. ಮಂದಿರ ಇರಬಹುದು, ಮಸೀದಿ‌ ಇರಬಹುದು ಎಲ್ಲ ಕಡೆ ಸರ್ಕಾರದ ಆದೇಶ ಪಾಲನೆ ಕಡ್ಡಾಯ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ಈಗಾಗಲೇ ಆದೇಶ ಇದ್ದರೂ ನಿಯಮ ಪಾಲನೆ ಆಗಿರಲಿಲ್ಲ. ಈಗ ನೋಟಿಸ್ ಜಾರಿ ಮಾಡಿದ ಬಳಿಕ ದೇವಸ್ಥಾನಗಳಿಗೂ ಅನ್ವಯ ಆಗಲಿದೆ. ಈವರೆಗೂ ಯಾವುದೇ ಉಲ್ಲಂಘನೆ ಕಂಡುಬಂದಿಲ್ಲ. ಆಜಾನ್ ಹಾಗೂ ಸುಪ್ರಭಾತ ನಿರ್ಧಿಷ್ಟ ಸಮಯದಲ್ಲೇ ನಡೆಯಬೇಕಿದೆ ಎಂದರು.ರಾತ್ರಿ, ಹಗಲು ನಿರ್ದಿಷ್ಟ ಅವಧಿಯಲ್ಲಿ ಮೈಕ್ ಹಾಕಬೇಕು. ಒಂದು ವೇಳೆ ಪಾಲನೆ ಆಗಿಲ್ಲವೆಂದರೆ ತಪ್ಪಾಗುತ್ತದೆ. 2002ರಲ್ಲಿ ಮಂದಿರ, ಮಸೀದಿ ಎಷ್ಟು ಡೆಸಿಬಲ್ ಮೈಕ್ ಹಾಕಬೇಕೆಂದು ಕೋರ್ಟ್ ಹೇಳಿದೆ. ಸುತ್ತೋಲೆ ಹೊರಡಿಸಿರುವುದು ನಮಗೆ ಅನ್ವಯ ಆಗುತ್ತದೆ. ಪೊಲೀಸ್ ಇಲಾಖೆ, ಪರಿಸರ ಮಾಲಿನ್ಯ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಬೆಳಗ್ಗೆ ಸುಪ್ರಭಾತ, ಮಸೀದಿಯಲ್ಲಿ ಅಜಾನ್ ನಡೆಯುತ್ತದೆ. ಸಮಯ ಮಿತಿಗೆ ಅನುಗುಣವಾಗಿ ಮಾಡುತ್ತಾರೆ ಎಂದು ಹೇಳಿದರು.

ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ನಿಷೇಧ
 ಅಜಾನ್ ವಿರುದ್ಧ ಹನುಮಾನ್ ಚಾಲೀಸಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸುವ ನಿರ್ದೇಶನಗಳ ಭಾಗವಾಗಿ 15 ದಿನಗಳಲ್ಲಿ ಅಧಿಕಾರಿಗಳಿಂದ ಲಿಖಿತ ಅನುಮತಿಯನ್ನು ಪಡೆಯಲು ಧ್ವನಿ-ಉತ್ಪಾದಿಸುವ ಉಪಕರಣಗಳ ಎಲ್ಲಾ ಬಳಕೆದಾರರನ್ನು ಸರ್ಕಾರ ಕೇಳಿದೆ. ಒಂದು ಧ್ವನಿವರ್ಧಕ ಅಥವಾ ಲೌಡ್ ಸ್ಪೀಕರ್ ರಾತ್ರಿ 10 ರಿಂದ ಬೆಳಗ್ಗೆ 6.00) ಸಂವಹನಕ್ಕಾಗಿ ಮುಚ್ಚಿದ ಆವರಣಗಳನ್ನು ಹೊರತುಪಡಿಸಿ ಬೇರೆಲ್ಲೂ ಬಳಸಬಾರದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. 

ಅನುಮತಿ ಪಡೆಯದವರು, ಸ್ವಯಂಪ್ರೇರಣೆಯಿಂದ ಧ್ವನಿವರ್ಧಕಗಳು ಮತ್ತು ಧ್ವನಿ-ಉತ್ಪಾದಿಸುವ ಉಪಕರಣಗಳನ್ನು ತೆಗೆದುಹಾಕಬೇಕು. ಇಲ್ಲವೇ ನೀಡಲಾದ ಗಡುವಿನಿಂದ 15 ದಿನಗಳಲ್ಲಿ ಗೊತ್ತುಪಡಿಸಿದ ಪ್ರಾಧಿಕಾರದಿಂದ ಅದನ್ನು ತೆಗೆದುಹಾಕಲಾಗುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಿದೆ. ಅಧಿಸೂಚನೆಯು 2002 ರ ಸರ್ಕಾರಿ ಆದೇಶವನ್ನು ಉಲ್ಲೇಖಿಸಿದ್ದು, ಶಬ್ದ ಮಾಲಿನ್ಯವನ್ನು ಕಡಿಮೆ ಮಾಡುವ ಜವಾಬ್ದಾರಿಯಾಗಿ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ.