ಬೆಂಗಳೂರು [ನ.07]:  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೇವೆ ನೀಡುತ್ತಿರುವ ಹವಾನಿ ಯಂತ್ರಿತ ‘ವಾಯು ವಜ್ರ ಬಸ್’ಗಳಲ್ಲಿ ಪ್ರಯಾಣಿಸುವವರ ಅನುಕೂಲಕ್ಕಾಗಿ ‘ಆನ್ ಲೈನ್ ಮುಂಗಡ ಟಿಕೆಟ್ ಬುಕಿಂಗ್’ ವ್ಯವಸ್ಥೆ ಜಾರಿಗೆ ಬಿಎಂಟಿಸಿ ಗಂಭೀರವಾಗಿ ಚಿಂತಿಸಿದೆ.

ಬಿಎಂಟಿಸಿಗೆ ಉತ್ತಮ ಆದಾಯ ತಂದುಕೊಡುತ್ತಿರುವ ವಾಯು ವಜ್ರ ಬಸ್ ಸೇವೆಯನ್ನು ಮತ್ತಷ್ಟು ಉತ್ತಮಗೊಳಿಸುವ ಹಾಗೂ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಆನ್‌ಲೈನ್‌ನಲ್ಲಿ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಪರಿಚಯಿಸಲು ಚಿಂತಿಸಲಾಗಿದೆ. ಪ್ರಯಾಣಿಕರು ಮೇಕ್ ಮೈ ಟ್ರಿಪ್, ಬುಕ್ ಗೋಯಿಬಿಬು ಸೇರಿದಂತೆ ಹಲವು ಆನ್ ಲೈನ್ ಪೋರ್ಟಲ್‌ಗಳಲ್ಲಿ ವಿಮಾನ ಪ್ರಯಾಣಕ್ಕೆ ಟಿಕೆಟ್ ಖರೀದಿಸುತ್ತಾರೆ. ಈ ಪೋರ್ಟಲ್‌ಗಳಲ್ಲಿ ವಿಮಾನ ಟಿಕೆಟ್ ಖರೀದಿ ಜತೆಗೆ ಹೋಟೆಲ್ ಬುಕಿಂಗ್, ಕ್ಯಾಬ್ ಮುಂಗಡ ಬುಕಿಂಗ್ ಸಹ ಅವಕಾಶ ವಿರುತ್ತದೆ.

ಅದರಂತೆ ವಾಯು ವಜ್ರ ಬಸ್‌ಗಳ ಪ್ರಯಾಣಕ್ಕೂ ಮುಂಗಡ ಟಿಕೆಟ್ ಬುಕಿಂಗ್ ಗೆ ಅವಕಾಶ ನೀಡುವುದರಿಂದ ಪ್ರಯಾಣಿಕರಿಗೆ ಅನುಕೂಲ ವಾಗಲಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಆನ್‌ಲೈನ್ ಮುಂಗಡ ಟಿಕೆಟ್ ಬುಕಿಂಗ್ ಗೆ ಸಂಬಂಧಿಸಿದಂತೆ ಮೇಕ್ ಮೈ ಟ್ರಿಪ್ ಸೇರಿದಂತೆ ಕೆಲ ಪೋರ್ಟಲ್‌ಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಚರ್ಚಿಸಲು ನಿರ್ಧರಿಸಲಾಗಿದೆ. ಈ ಆನ್‌ಲೈನ್ ಪೋರ್ಟಲ್‌ಗಳಲ್ಲಿ ಮುಂಗಡ ಟಿಕೆಟ್ ಬುಕಿಂಗ್ ಪ್ರಕ್ರಿಯೆ, ಟಿಕೆಟ್ ಹಣ ವರ್ಗಾವಣೆ ಸೇರಿದಂತೆ ಇಡೀ ವ್ಯವಸ್ಥೆಯ ಸಾಧಕ-ಬಾಧಕಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಮುಂದಿನ ಹೆಜ್ಜೆ ಇರಿಸಲು ಬಿಎಂಟಿಸಿ ತೀರ್ಮಾನಿಸಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

110 ಬಸ್ ಕಾರ್ಯಾಚರಣೆ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಚ್ ಎಎಲ್ ಮೈನ್ ಗೇಟ್, ವೈಟ್ ಫೀಲ್ಡ್, ಬನಶಂಕರಿ, ಜಂಬೂಸವಾರಿ ದಿಣ್ಣೆ, ಕಾಡುಗೋಡಿ ಬಸ್ ನಿಲ್ದಾಣ, ಎಲೆಕ್ಟ್ರಾನಿಕ್ ಸಿಟಿ, ಕೆ.ಆರ್ .ಪುರಂ, ಎಚ್‌ಎಸ್‌ಅರ್ ಲೇಔಟ್, ಬಿಟಿಎಂ, ಹೆಬ್ಬಾಳ ಸೇರಿದಂತೆ 16 ಮಾರ್ಗಗಳಲ್ಲಿ ವಾಯು ವಜ್ರ ಬಸ್ ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ಮಾರ್ಗಗಳಲ್ಲಿ ಪ್ರತಿ ದಿನ 110 ಬಸ್‌ಗಳು 751ಟ್ರಿಪ್ ಮಾಡುತ್ತಿವೆ.