ಮದುವೆಯಾದ ಹತ್ತು ದಿನಗಳಲ್ಲೇ ಗಂಡ ನಾಪತ್ತೆಯಾದ ಕಾರಣ, ಪಾವಗಡ ಮೂಲದ ನವವಧು ಸಿಂಧು ತನ್ನ ಗಂಡನನ್ನು ತಕ್ಷಣ ಹುಡುಕಿಕೊಡುವಂತೆ ಆಗ್ರಹಿಸಿ ನೆಲಮಂಗಲದ ಮಾಕಳಿ ಗ್ರಾಮದ ಬಳಿ ಸತತ ಮೂರು ದಿನಗಳಿಂದ ಮೊಬೈಲ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿದ್ದಳು.

ನೆಲಮಂಗಲ(ಅ.20): ನನ್ನ ಗಂಡನನ್ನು ತಕ್ಷಣ ಹುಡುಕಿಕೊಡಿ ಎಂದು ಪಟ್ಟು ಹಿಡಿದು ಕಳೆದ ಮೂರು ದಿನಗಳಿಂದ ಪೊಲೀಸರಿಗೆ ಹಾಗೂ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿದ್ದ ನವವಧುವೊಬ್ಬಳು, ನೆಲಮಂಗಲ ಸಮೀಪದ ಮಾಕಳಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಮತ್ತೆ ಬೃಹತ್ ಮೊಬೈಲ್ ಟವರ್ ಏರಿ ಕುಳಿತು ಭಾರಿ ಹೈಡ್ರಾಮಾ ಸೃಷ್ಟಿಸಿದ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಪಾವಗಡ ಮೂಲದ ನಿವಾಸಿಯಾಗಿರುವ ಸಿಂಧು (20) ಎಂಬಾಕೆಯೇ ಈ ರೀತಿ ಹುಚ್ಚಾಟ ಮೆರೆದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಯುವತಿ.

ಮದುವೆಯಾದ 10 ನೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ

ಘಟನೆಯ ಹಿನ್ನೆಲೆಯನ್ನು ಕೆದಕಿದಾಗ, ಸಿಂಧು ಕಳೆದ ಅಕ್ಟೋಬರ್ 6 ರಂದು 'ಗಣೇಶ್' ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆದರೆ, ಮದುವೆಯಾದ ಕೇವಲ 10 ದಿನಗಳಲ್ಲೇ ನವವಧು ಸಿಂಧು ನೀಡುತ್ತಿದ್ದ ಕಿರುಕುಳ ಹಾಗೂ ಕಾಟ ತಾಳಲಾರದೆ ಗಂಡ ಗಣೇಶ್ ಯಾರಿಗೂ ಹೇಳದೆ ಕೇಳದೆ ಮನೆಬಿಟ್ಟು ಓಡಿಹೋಗಿದ್ದ. ಗಂಡ ಕಾಣೆಯಾದ ಹಿನ್ನೆಲೆಯಲ್ಲಿ ಸಿಂಧು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರೂ, ತಾಳ್ಮೆಗೆಟ್ಟ ಸಿಂಧು ರಸ್ತೆಗಿಳಿದು ಡ್ರಾಮಾ ಆರಂಭಿಸಿದ್ದಳು.

ಮೂರು ದಿನಗಳಿಂದ ಸರಣಿ ಹೈಡ್ರಾಮಾ: ಪೊಲೀಸರ ನಿದ್ರೆ ಕೆಡಿಸಿದ ಯುವತಿ

ಮೊದಲ ದಿನದಂದು ಸಾರ್ವಜನಿಕ ರಸ್ತೆ ಮಧ್ಯೆ ಕುಳಿತುಕೊಂಡಿದ್ದ ಸಿಂಧು, "ನನ್ನ ಗಂಡ ಎಲ್ಲಿದ್ದಾನೆ ಎಂದು ಹುಡುಕಿಕೊಡಿ" ಎಂದು ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಭಾರಿ ಕಿರಿಕಿರಿ ಉಂಟುಮಾಡಿದ್ದಳು. ಸ್ಥಳಕ್ಕೆ ಬಂದ ಪೊಲೀಸರು ಆಕೆಗೆ ಸಮಾಧಾನ ಹೇಳಿ ಕಳುಹಿಸಿದ್ದರು. ಸೋಮವಾರ ಬೆಳಿಗ್ಗೆ ಮಾಕಳಿ ಗ್ರಾಮದಲ್ಲಿದ್ದ ಮೊಬೈಲ್ ಟವರ್ ಏರಿ ಕುಳಿತು ಜೀವ ಬೆದರಿಕೆ ಹಾಕಿದ್ದಳು. ತಕ್ಷಣ ಕಾರ್ಯಪ್ರವೃತ್ತರಾದ ಮಾದನಾಯಕನಹಳ್ಳಿ ಪೊಲೀಸರು ಆಕೆಯನ್ನು ಸುರಕ್ಷಿತವಾಗಿ ಕೆಳಗಿಳಿಸಿ, ಬುದ್ಧಿಹೇಳಿ ಪಾವಗಡದಲ್ಲಿದ್ದ ಆಕೆಯ ತಾಯಿ ಮನೆಗೆ ಕಳುಹಿಸಿಕೊಟ್ಟಿದ್ದರು.

ಮೂರನೇ ದಿನವಾದ ಇಂದು ಪೊಲೀಸರು ಮನೆಗೆ ಕಳುಹಿಸಿದ್ದರೂ ಆಕೆ ಬುದ್ಧಿ ಕಲಿಯಲಿಲ್ಲ. ಇಂದು ಬೆಳಿಗ್ಗೆ ಪಾವಗಡದಿಂದ ಮತ್ತೆ ಮಾದನಾಯಕನಹಳ್ಳಿಗೆ ಓಡೋಡಿ ಬಂದ ಸಿಂಧು, ನೇರವಾಗಿ ಮಾಕಳಿ ಬಳಿ ಇದ್ದ ಅದೇ ಮೊಬೈಲ್ ಟವರ್‌ಗೆ ಸರಸರನೆ ಏರಿ ಕುಳಿತುಕೊಂಡಿದ್ದಳು.

ಕೆಳಗಿಳಿಸಿದ ಮಹಿಳಾ ಪೊಲೀಸರು - ನಿಮ್ಹಾನ್ಸ್‌ಗೆ ರವಾನೆ

ಮತ್ತೆ ಯುವತಿ ಟವರ್ ಏರಿ ಕುಳಿತ ದೃಶ್ಯ ಕಂಡು ಆತಂಕಗೊಂಡ ಸ್ಥಳೀಯರು ತಕ್ಷಣ ಮಾದನಾಯಕನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಮಹಿಳಾ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ, ಆಕೆಗೆ ತಿಳಿಹೇಳಿ ಅತ್ಯಂತ ಜಾಣ್ಮೆಯಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾದರು. ಯುವತಿಯು ಮಾನಸಿಕವಾಗಿ ಖಿನ್ನತೆ ಅಥವಾ ಅಸ್ವಸ್ಥತೆಗೆ ಒಳಗಾಗಿರುವ ಅನುಮಾನ ವ್ಯಕ್ತವಾಗಿದ್ದರಿಂದ, ಹೆಚ್ಚಿನ ಚಿಕಿತ್ಸೆ ಹಾಗೂ ಮಾನಸಿಕ ಕೌನ್ಸೆಲಿಂಗ್‌ಗಾಗಿ ಆಕೆಯನ್ನು ಬೆಂಗಳೂರಿನ 'ನಿಮ್ಹಾನ್ಸ್' (NIMHANS) ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಮೂರು ದಿನಗಳಿಂದ ನಡೆಯುತ್ತಿದ್ದ ಈ ನವವಧುವಿನ ಹೈಡ್ರಾಮಾಗೆ ಕೊನೆಗೂ ತೆರೆಬಿದ್ದಂತಾಗಿದೆ.