ಕೆಎಂಎಫ್ ಅಂಗಸಂಸ್ಥೆಯಾದ ಬಮೂಲ್, ನಂದಿನಿ ತುಪ್ಪ ಮತ್ತು ಬೆಣ್ಣೆಯ ದರವನ್ನು ದಿಢೀರ್ ಏರಿಕೆ ಮಾಡಿದೆ. ಪ್ರತಿ ಕೆಜಿಗೆ ತುಪ್ಪದ ಮೇಲೆ ₹15 ಮತ್ತು ಬೆಣ್ಣೆಯ ಮೇಲೆ ₹25 ಹೆಚ್ಚಳವಾಗಿದ್ದು, ಈ ಹೊಸ ದರಗಳು ಜುಲೈ 24 ರಿಂದ ಜಾರಿಗೆ ಬರಲಿವೆ.

ಬೆಂಗಳೂರು (ಜು.23): ಕೆಲ ತಿಂಗಳ ಹಿಂದೆ ಮಾಡಿದ್ದ ಹಾಲಿನ ದರ ಏರಿಕೆಯ ಬಿಸಿಯಿಂದ ಸುಧಾರಿಸಿಕೊಳ್ಳುತ್ತಿರುವಾಗಲೇ, ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಪ್ರಸಿದ್ಧ 'ನಂದಿನಿ' ಬ್ರ್ಯಾಂಡ್‌ನ ಬೆಣ್ಣೆ ಮತ್ತು ತುಪ್ಪದ ಬೆಲೆಯನ್ನು ಕೆಎಂಎಫ್ (KMF) ಅಂಗಸಂಸ್ಥೆಯಾದ ಬೆಂಗಳೂರು ಹಾಲು ಒಕ್ಕೂಟ (ಬಮೂಲ್ - BAMUL) ದಿಢೀರ್ ಏರಿಕೆ ಮಾಡಿದೆ. ಅಡುಗೆ ಮನೆಯ ಅತ್ಯಗತ್ಯ ಪದಾರ್ಥಗಳಾದ ನಂದಿನಿ ತುಪ್ಪ ಮತ್ತು ಬೆಣ್ಣೆಯ ನೂತನ ದರಗಳು ನಾಳೆಯಿಂದಲೇ (ಜುಲೈ 24) ಜಾರಿಗೆ ಬರಲಿವೆ ಎಂದು ಬಮೂಲ್ ತನ್ನ ಆದೇಶದಲ್ಲಿ ತಿಳಿಸಿದೆ.

ನಂದಿನಿ ತುಪ್ಪದ ಪ್ರತಿ ಕೆಜಿಗೆ ₹15 ಏರಿಕೆ ಮಾಡಲಾಗಿದೆ, ಇನ್ನು ನಂದಿನಿ ಬೆಣ್ಣೆಯ ಪ್ರತಿ ಕೆಜಿಗೆ 25 ರೂಪಾಯಿ ಏರಿಕೆ ಮಾಡಲಾಗಿದೆ. ಇದರಿಂದಾಗಿ ಲೀಟರ್ ಗೆ 700 ರೂಪಾಯಿ ಇದ್ದ ನಂದಿನಿ ತುಪ್ಪದ ದರ 715 ರೂಪಾಯಿಗೆ ಏರಿದ್ದರೆ, 710 ರೂಪಾಯಿ ಇದ್ದ ನಂದಿನಿ ಬೆಣ್ಣೆಯ ದರ 735ರೂ.ಗೆ ಏರಿಕೆ ಆದಂತಾಗಿದೆ.

ಕಳೆದ ಕೆಲ ದಿನಗಳಿಂದ ಹಾಲಿನ ಉತ್ಪನ್ನಗಳ ಉತ್ಪಾದನಾ ವೆಚ್ಚ ಮತ್ತು ಸಾಗಣೆ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಬಮೂಲ್ ತಿಳಿಸಿದೆ. ಸದ್ಯಕ್ಕೆ ಬೆಂಗಳೂರು ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಈ ದರ ಏರಿಕೆ ಜಾರಿಗೆ ಬರಲಿದ್ದು, ನಾಳೆಯಿಂದಲೇ ಪರಿಷ್ಕೃತ ದರದಲ್ಲಿ ನಂದಿನಿ ಉತ್ಪನ್ನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಬೆಳಗಿನ ತಿಂಡಿ, ಸಿಹಿ ತಿನಿಸುಗಳು ಮತ್ತು ನಿತ್ಯದ ಅಡುಗೆಗೆ ಹೆಚ್ಚಾಗಿ ನಂದಿನಿ ತುಪ್ಪ ಹಾಗೂ ಬೆಣ್ಣೆಯನ್ನು ಬಳಸುವ ಮಧ್ಯಮ ವರ್ಗದ ಕುಟುಂಬಗಳು ಮತ್ತು ಹೋಟೆಲ್ ಉದ್ಯಮಿಗಳಿಗೆ ಈ ಬೆಲೆ ಏರಿಕೆ ಹೆಚ್ಚುವರಿ ಹೊರೆಯಾಗಲಿದೆ.