ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಬಳಿ ಕೆಟ್ಟ ರಸ್ತೆಯಿಂದಾಗಿ ಬೈಕ್‌ನಿಂದ ಬಿದ್ದ ಕೇರಳ ಮೂಲದ ಯುವತಿ ಮೇಧಾ ಪೃಥ್ವಿರಾಜ್ ಮೇಲೆ ಗೂಡ್ಸ್‌ ವಾಹನ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯು ಅನಂತನಗರದ ರಸ್ತೆಗಳ ದುಸ್ಥಿತಿಯನ್ನು ಎತ್ತಿ ತೋರಿಸಿದೆ.

ಬೆಂಗಳೂರು (ಆ.12): ಕೆಲಸಕ್ಕೆ ತೆರಳುತ್ತಿದ್ದ ವೇಳೆ ಬೆಂಗಳೂರಿನ 'ಮಹಾನ್‌' ರಸ್ತೆಯ ಕಾರಣದಿಂದ ವಾಹನದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದ ಯುವತಿಯ ಮೇಲೆ ಗೂಡ್ಸ್‌ ವಾಹನ ಹರಿದು ಭೀಕರವಾಗಿ ಯುವತಿಯೊಬ್ಬಳು ಸಾವು ಕಂಡಿದ್ದಾಳೆ. ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್‌ ಸಿಟಿಯ ಹೆಬ್ಬಗೋಡಿ ಸಮೀಪದ ಅನಂತನಗರದಲ್ಲಿ ದಾರುಣ ಘಟನೆ ನಡೆದಿದ್ದು, ಕೇರಳ ಮೂಲದ ಯುವತಿ ಎಂದು ಗುರುತಿಸಲಾಗಿದೆ. ಎಲೆಕ್ಟ್ರಾನಿಕ್‌ ಸಿಟಿಯ ಉದ್ಯೋಗಿಗಳ ಭವಿಷ್ಯ ನಿಧಿ (EPF) ಕಚೇರಿಯಲ್ಲಿ ಕೆಲಸದಲ್ಲಿದ್ದ ಕೇರಳ ಮೂಲದ ಮೇಧಾ ಪೃಥ್ವಿರಾಜ್ (32) ಮೃತಪಟ್ಟ ದುರ್ದೈವಿ.

ಅಪಘಾತ ಸಂಭವಿಸಿದ್ದು ಹೇಗೆ?

ಮಂಗಳವಾರ ಬೆಳಿಗ್ಗೆ ಸುಮಾರು 9 ಗಂಟೆಯ ಸುಮಾರಿಗೆ ಮೇಧಾ ಅವರು ತಮ್ಮ ಸ್ನೇಹಿತ ಅಜಯ್ ಗುರು ಅವರೊಂದಿಗೆ ಬೈಕ್‌ನಲ್ಲಿ ಕಚೇರಿಗೆ ತೆರಳುತ್ತಿದ್ದರು. ಆದರೆ, ಅನಂತನಗರದ ರಸ್ತೆಗಳು ದೇವರಿಗೆ ಪ್ರೀತಿ. ಒಂದೆಡೆ ಚರಂಡಿ ಇಲ್ಲ, ಇನ್ನೊಂದೆಡೆ ವರ್ಷಗಳ ಕಾಲ ಡಾಂಬರು ಕಾಣದೆ ಗುಂಡಿಬಿದ್ದಿರುವ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಮುಂದೆ ಹೋಗುತ್ತಿದ್ದ ಕಾರೊಂದು ಏಕಾಏಕಿ ಬ್ರೇಕ್ ಹಾಕಿದೆ. ಈ ವೇಳೆ ಬೈಕ್‌ನ ಹಿಂಬದಿ ಕುಳಿತಿದ್ದ ಮೇಧಾ ಅವರು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ತಕ್ಷಣವೇ ಹಿಂಬದಿಯಿಂದ ಬಂದ ವೇಗದ ಗೂಡ್ಸ್ ವಾಹನವೊಂದು ಮೇಧಾ ಅವರ ಕತ್ತಿನ ಮೇಲೆಯೇ ಹರಿದಿದೆ. ತೀವ್ರವಾಗಿ ಗಾಯಗೊಂಡ ಅವರನ್ನು ರಕ್ಷಿಸಲು ತಕ್ಷಣವೇ ಯತ್ನಿಸಲಾಯಿತಾದರೂ, ಗಂಭೀರ ಗಾಯಗಳಿಂದಾಗಿ ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಅಪಘಾತದ ಬಳಿಕ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಲಾಯಿತು. ಶವಪರೀಕ್ಷೆಯ ನಂತರ ಮೃತದೇಹವನ್ನು ಕೇರಳದಲ್ಲಿರುವ ಅವರ ಸ್ವಂತ ಊರಿಗೆ ಸಾಗಿಸಲಾಯಿತು.

ಆಕ್ರೋಶ ಹಾಗೂ ಸಂತಾಪ

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಮೌನಾಚರಣೆ ನಡೆಸಿ ಮೃತರ ಆತ್ಮಕ್ಕೆ ಸಂತಾಪ ಸೂಚಿಸಿದರು. ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಅನಂತ ನಗರ ವ್ಯಾಪ್ತಿಯಲ್ಲಿ ರಸ್ತೆಗಳ ಅತ್ಯಂತ ಕೆಟ್ಟ ವ್ಯವಸ್ಥೆಯೇ ಇಂತಹ ಸರಣಿ ಅಪಘಾತಗಳಿಗೆ ಕಾರಣವಾಗುತ್ತಿದ್ದು, ತಕ್ಷಣವೇ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಆಕ್ರೋಶದೊಂದಿಗೆ ಆಗ್ರಹಿಸಿದ್ದಾರೆ. ಇಡೀ ಅನಂತನಗರದಲ್ಲಿ ಯಾವೊಂದು ರಸ್ತೆಯೂ ಸುಸ್ಥಿತಿಯಲ್ಲಿ ಇಲ್ಲ. ನಗರದ ಮುಖ್ಯ ರಸ್ತೆಯ ಕಥೆಯೇ ಹೀಗಾಗದರೆ, ಒಳರಸ್ತೆಗಳನ್ನು ಕೇಳುವುದೇ ಬೇಡ ಎನ್ನುವುದು ಸ್ಥಳೀಯರ ಮಾತು.

ಕುಟುಂಬ ವಿವರ ಮತ್ತು ಅಂತ್ಯಕ್ರಿಯೆ

ಮೃತ ಮೇಧಾ ಅವರು ಕೇರಳದ ಕೊಟ್ಟಕ್ಕಾಟ್ ನಿವಾಸಿ, ನಿವೃತ್ತ ಶಾಲಾ ಶಿಕ್ಷಕ ಪೃಥ್ವಿರಾಜ್ ಮುಡಕಲ್ಲೂರು ಅವರ ಪುತ್ರಿಯಾಗಿದ್ದಾರೆ. ಅವರ ಅಂತ್ಯಕ್ರಿಯೆಯು ಗುರುವಾರ ಬೆಳಿಗ್ಗೆ 10 ಗಂಟೆಗೆ ಕೊಟ್ಟಕ್ಕಾಟ್‌ನಲ್ಲಿರುವ ಅವರ ಕುಟುಂಬದ ನಿವಾಸದಲ್ಲಿ ನಡೆಯಲಿದೆ. ಮೃತ ಮೇಧಾ ಅವರು ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿರುವ ಪತಿ ಎಸ್‌ಎಲ್ ಆಕರ್ಷ್ ಮತ್ತು ಪುಟ್ಟ ಮಗ ದಕ್ಷ್ ಆಕರ್ಷ್ ಅವರನ್ನು ಅಗಲಿದ್ದಾರೆ. ಮೃತರ ತಾಯಿ ಉಷಾ ಅವರು ತರಿಯೋಡ್‌ನ ಗ್ರೀನ್ ಮೌಂಟ್ ಪಬ್ಲಿಕ್ ಶಾಲೆಯ ನಿವೃತ್ತ ಶಿಕ್ಷಕಿಯಾಗಿದ್ದು, ಸಹೋದರ ಗೌತಮ್ ಪೃಥ್ವಿರಾಜ್ ಪ್ರಸ್ತುತ ಪುದುಚೇರಿಯಲ್ಲಿ ಎಂಬಿಎ (MBA) ವ್ಯಾಸಂಗ ಮಾಡುತ್ತಿದ್ದಾರೆ.