ಬೆಂಗಳೂರು(ಆ.31): ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್‌) ಸೆ.1ರಿಂದ ಹಾಲು ಉತ್ಪಾದಕರಿಗೆ ಪ್ರತೀ ಲೀಟರ್‌ ಹಾಲಿಗೆ ಹೆಚ್ಚುವರಿಯಾಗಿ ಒಂದು ರು. ನೀಡಲು ನಿರ್ಧರಿಸಿದೆ. ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬಮೂಲ್‌ ನೀಡಿರುವ ಕೊಡುಗೆ ಹಾಲು ಉತ್ಪಾದಕರಲ್ಲಿ ಸಂತಸ ತಂದಿದೆ.

ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಬೆಂಗಳೂರು ನಗರ ಜಿಲ್ಲೆಗಳ 12 ತಾಲೂಕಿನ 1.20 ಲಕ್ಷ ಹಾಲು ಉತ್ಪಾದಕರು ಇದರ ಲಾಭ ಪಡೆಯಲಿದ್ದಾರೆ. ಪ್ರಸ್ತುತ ಬಮೂಲ್‌ನಲ್ಲಿ ಸುಮಾರು 3.50 ಲಕ್ಷ ಹಾಲು ಉತ್ಪಾದಕರು ಸದಸ್ಯರಾಗಿದ್ದು, ಪ್ರತೀ ದಿನ 1.20 ಲಕ್ಷಕ್ಕೂ ಅಧಿಕ ರೈತರು ಒಕ್ಕೂಟಕ್ಕೆ ಹಾಲು ಹಾಕುತ್ತಿದ್ದಾರೆ. ಪ್ರಸ್ತುತ ಬಮೂಲ್‌ ಸಂಸ್ಥೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ .25 ನೀಡುತ್ತಿದೆ. ಸರ್ಕಾರ .6 ಗಳನ್ನು ಪ್ರೋತ್ಸಾಹ ಧನವಾಗಿ ಕೊಡುತ್ತಿದೆ. ಈಗ ಸೆ.1ರಿಂದ ಪ್ರತಿ ಲೀಟರ್‌ಗೆ ಒಂದು ರು. ಹೆಚ್ಚಾಗಲಿದ್ದು, ಹಾಲು ಉತ್ಪಾದಕರು ಪ್ರತಿ ಲೀಟರ್‌ಗೆ 32 ಪಡೆಯಲಿದ್ದಾರೆ.

ಹಾಲು ಉತ್ಪಾದಕರಿಗೆ ಒಂದು ರು. ಹೆಚ್ಚುವರಿಯಾಗಿ ನೀಡಲು ನಿರ್ಧರಿಸುವ ಬಮೂಲ್‌ ತೀರ್ಮಾನದಿಂದ ಗ್ರಾಹಕರಿಗೆ ಯಾವುದೇ ಹೊರೆ ಇರುವುದಿಲ್ಲ. ಮಾರುಕಟ್ಟೆಯ ಹಾಲಿನ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಸಿಎಂ ಪರಿಹಾರ ನಿಧಿಗೆ 1.15 ಕೋಟಿ

ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಮೂಲ್‌ ಆಡಳಿತ ಮಂಡಳಿ ಪದಾಧಿಕಾರಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬಮೂಲ್‌ ವತಿಯಿಂದ .1.16 ಕೋಟಿಗಳ ಚೆಕ್‌ ಅನ್ನು ದೇಣಿಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ, ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ಟಿ.ಗೋಪಾಲ್‌, ನಿರ್ದೇಶಕರಾದ ಪಿ.ನಾಗರಾಜು, ಸಿ.ಮಂಜುನಾಥ್‌, ಬಿ.ಜಿ.ಅಂಜಿನಪ್ಪ, ಬಿ.ಶ್ರೀನಿವಾಸ್‌, ಜಿ.ಆರ್‌.ಭಾಸ್ಕರ್‌, ಕೆ.ಎಸ್‌.ಕೇಶವಮೂರ್ತಿ, ಎಚ್‌.ಸಿ.ಜಯಮುತ್ತು, ಕೆ.ಮಂಜುನಾಥ್‌, ರಾಜಣ್ಣ ಕುದೂರು, ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.