ನಾಗರಬಾವಿ ಕ್ಲೌಡ್‌ನೈನ್‌ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಒಂದು ವರ್ಷದ ಮಗು 103 ದಿನಗಳಿಂದ ಕೋಮಾದಲ್ಲಿದೆ. ಆಸ್ಪತ್ರೆ ಮುಖ್ಯಸ್ಥರೇ ಕಾರಣ ಎಂದು ಸಚಿವ ಯುಟಿ ಖಾದರ್ ಹೇಳಿದ್ದು, ತಜ್ಞ ವೈದ್ಯರ ಸಮಿತಿಯಿಂದ ತನಿಖೆಗೆ ಆದೇಶಿಸಿದ್ದಾರೆ.

ಬೆಂಗಳೂರು: ನಾಗರಬಾವಿ ಕ್ಲೌಡ್‌ನೈನ್‌ ಆಸ್ಪತ್ರೆಯಲ್ಲಿ 103 ದಿನಗಳಿಂದ ಮಗುವೊಂದು ಕೋಮಾದಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗು ಕೋಮಾಗೆ ಜಾರಲು ಆಸ್ಪತ್ರೆಯ ಮುಖ್ಯಸ್ಥರೇ ಕಾರಣ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಸಂಪೂರ್ಣ ವರದಿ ನೀಡುವಂತೆ ಆದೇಶ ನೀಡಿದ್ದಾರೆ. ಒಂದು ವರ್ಷದ ಮಗು ಶಯಾನ್ ಕೋಮಾಗೆ ಜಾರಿರುವ ಕಂದಮ್ಮ.

ಆಗಿದ್ದೇನು?

ಕಿವಿ ಗಾಯದಿಂದಾಗಿ ನಾಗರಬಾವಿ ಕ್ಲೌಡ್‌ನೈನ್‌ ಆಸ್ಪತ್ರೆಗೆ ದಾಖಲಾಗಿದ್ದ ಒಂದು ವರ್ಷದ ಮಗು ವೈದ್ಯರ ನಿರ್ಲಕ್ಷ್ಯದಿಂದ ಕಳೆದ ಮೂರು ತಿಂಗಳಿಂದ ಕೋಮಾದಲ್ಲಿರುವಂತಾಗಿದೆ ಅನ್ನೋದು ಪೋಷಕರ ಆರೋಪ. ಇದೇ ವಿಚಾರವಾಗಿ ಮಗುವಿನ ಪೋಷಕರು ಆಸ್ಪತ್ರೆ ಮುಂದೆ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಬಳಿಕ ವೈದ್ಯರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೆಎಂಸಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಿದ್ದರು. ದೂರಿನ ಬೆನ್ನಲ್ಲೇ ಸಿವಿ ರಾಮನ್ ಜನರಲ್ ಆಸ್ಪತ್ರೆಯ ಡಾ.ರಘುನಾಥ್ ನೇತೃತ್ವದ ವೈದ್ಯರ ತಂಡ ಆಸ್ಪತ್ರೆಗೆ ಭೇಟಿ ನೀಡಿತ್ತು. ಭೇಟಿ ವೇಳೆ ಮೇಲ್ನೋಟಕ್ಕೆ ವೈದ್ಯರ ಲೋಪ ಪತ್ತೆಯಾಗಿದೆ ಎನ್ನಲಾಗಿತ್ತು. ಇವತ್ತು ಖುದ್ದು ಸಚಿವ ಯುಟಿ ಖಾದರ್ ಅವರು ವರದಿ ಪರಿಶೀಲಿಸಿ ಖಡಕ್ ಆದೇಶ ನೀಡಿದ್ದಾರೆ.

ಖಾದರ್ ಏನಂದ್ರು?

ಯುಟಿ ಖಾದರ್ ಅವರು ಇವತ್ತು, ಮಗುವಿನ ಆರೋಗ್ಯವನ್ನು ವಿಚಾರಿಸಿದರು. ಬಳಿಕ ವರದಿ ಪರಿಶೀಲಿಸಿ ಮಗುವಿನ ಸ್ಥಿತಿಗೆ ಆಸ್ಪತ್ರೆ ಮುಖ್ಯಸ್ಥರೇ ಕಾರಣ. ಈ ಸ್ಥಿತಿಗೆ ಆಸ್ಪತ್ರೆಯ ಮುಖ್ಯಸ್ಥರೇ ಜವಾಬ್ದಾರಿ ತೆಗೆದುಕೊಳ್ಳಬೇಕು. ಅನಸ್ತೇಶಿಯಾ ಕೊಟ್ಟ ವೈದ್ಯರ ವಿರುದ್ಧವೂ ಕ್ರಮ ಆಗಬೇಕು ಎಂದಿದ್ದಾರೆ. ಅಲ್ಲದೇ ಹೆಚ್ಚಿನ ತನಿಖೆ ನಡೆಸಿ ವರದಿ ನೀಡುವಂತೆ ತಜ್ಞ ವೈದ್ಯರ ಸಮಿತಿಯನ್ನ ರಚನೆ ಮಾಡಿದ್ದಾರೆ. ಇಂದಿರಾಗಾಂಧಿ ಹಾಗೂ ನಿಮಾನ್ಸ್ ತಜ್ಞ ವೈದ್ಯರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದಾರೆ. ಇನ್ನು ಸೂಕ್ತ ವೈದ್ಯರ ತಂಡ ಮತ್ತು ಮಹಿಳಾ‌ ಮತ್ತು ಮಕ್ಕಳ ಹಕ್ಕುಗಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಆರೋಗ್ಯವನ್ನು ವಿಚಾರಿಸಿದ್ದಾರೆ.

ಪೋಷಕರಿಂದ ಮುಂದುವರಿದ ಪ್ರತಿಭಟನೆ

ಇತ್ತ ಪೋಷಕರು ತಮ್ಮ ಮಗುವನ್ನು ಜೀವಂತವಾಗಿ ಕೊಡುವಂತೆ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ರಾತ್ರಿ ಹಗಲೆನ್ನದೆ ನಾಗರಬಾವಿ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಸಂಬಂಧಿಕರು ಧರಣಿ ನಡೆಸುತ್ತಿದ್ದಾರೆ. ಜೊತೆಗೆ ಮಗುವಿಗೆ ಅನಸ್ತೇಶಿಯಾ ಕೊಟ್ಟಿರುವ ಡಿಪ್ಲೋಮಾ ಪದವಿ ಅನಸ್ತ್ಯಾಲಜಿಸ್ಟ್ ಡಾ.ಚರಣ್ ವಿರುದ್ಧ ಶಿಸ್ತುಕ್ರಮ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ. ಪ್ರಸ್ತುತ ಮಗು ಕೋಮಾದಲ್ಲಿದೆ. ಮಗು ಕೋಮಾಗೆ ಜಾರುತ್ತಿದ್ದಂತೆಯೇ ವೈದ್ಯರ ಯಟವಟ್ಟು ಬಹಿರಂಗ ಆಗಿದೆ. ಈ ಹಿನ್ನೆಲೆಯಲ್ಲಿ ಮಗುವಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ.