ಬೆಂಗಳೂರು(ನ.07): ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕದಿರುವ ಪ್ರಧಾನಿ ಮೋದಿ ನಿರ್ಧಾರವನ್ನು ಬೆಂಬಲಿಸಿರುವ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್, ಮೋದಿ ಅವರ ನಿರ್ಧಾರದಿಂದ ರಾಜ್ಯದ 25 ಲಕ್ಷ ರೈತರು ನಿರಾಳರಾಗಿದ್ದಾರೆ ಎಂದು ಹೇಳಿದ್ದಾರೆ.

ಮುಕ್ತ ವ್ಯಾಪಾರ ಒಪ್ಪಂದ / ಆರ್‌ಸಿಇಪಿ ಅಡಿಯಲ್ಲಿ ಯಾವುದೇ ಡೈರಿ ಉತ್ಪನ್ನಗಳ ಆಮದನ್ನು ಅನುಮತಿಸುವುದು ಭಾರತೀಯ ಡೈರಿ ಉದ್ಯಮ ಮತ್ತು ದೇಶದ ಇಡೀ ಕೃಷಿ ಸಮುದಾಯಕ್ಕೆ ಸವಾಲಾಗುವ ಸಾಧ್ಯತೆಯಿತ್ತು. ಆದರೆ ಪ್ರಧಾನಿ ಅವರ ದೂರದೃಷ್ಟಿ ಈ ಆತಂಕವನ್ನು ದೂರ ಮಾಡಿದೆ ಎಂದು ಚವ್ಹಾಣ್ ಹೇಳಿದರು.

ಆರ್‌ಸಿಇಪಿ ತಂದೊಡ್ಡಬಹುದಾದ ಆತಂಕದ ಕುರಿತು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯುಶ್ ಗೋಯಲ್ ಅವರಿಗೆ ಕಳೆದ ತಿಂಗಳು ಪತ್ರದ ಮೂಲಕ ಮನವರಿಕೆ ಮಾಡಿದ್ದಾಗಿ ಚವ್ಹಾಣ್ ಸ್ಪಷ್ಟಪಡಿಸಿದರು.

ನಿರಾಳ ತಂದ ಮೋದಿ ಘೋಷಣೆ: ಸಾಗರಾದಚೆಯಿಂದ ಸಿಹಿ ಸುದ್ದಿ ಕೊಟ್ಟ ಪ್ರಧಾನಿ!

ದೇಶದಲ್ಲಿ ಹೈನುಗಾರಿಕೆ ಸಹಕಾರಿ ಮಾದರಿಯಲ್ಲಿ ನಡೆಯುತ್ತಿದ್ದು ರೈತರು ವ್ಯಾಪಾರಿಗಳ ಹಿತ ರಕ್ಷಣೆ ದೃಷ್ಟಿಯಿಂದ ಕೇಂದ್ರ ಸರ್ಕಾರ 15 ರಾಷ್ಟ್ರಗಳ ಮುಕ್ತ ವ್ಯಾಪಾರ ಒಪ್ಪಂದದಿಂದ ಹೊರಬಂದಿರುವುದು ಹೈನುಗಾರಿಕೆಯನ್ನು ಅವಲಂಬಿಸಿದವರ ಮೊಗದಲ್ಲಿ ಮಂದಹಾಸ ಮುಡಿಸಿದೆ ಎಂದು ಸಚಿವ ಪ್ರಭು ಚವ್ಹಾಣ್ ಹೇಳಿದರು.

ರಾಜ್ಯದಲ್ಲಿ 23,569 ಹಳ್ಳಿಗಳಲ್ಲಿ ಹಾಲನ್ನು ಸಂಗ್ರಹಿಸಲಾಗುತ್ತಿದೆ. 16,229 ಹಾಲು ಸಹಕಾರ ಸಂಘಗಳು ನೋಂದಣಿಯಾಗಿವೆ. ಅದರಲ್ಲಿ 4302 ಮಹಿಳಾ ಸಂಘಗಳು ಕಾರ್ಯನಿವಹಿಸುತ್ತಿವೆ. ಒಟ್ಟು 25 ಲಕ್ಷ ರೈತರು ಕರ್ನಾಟಕ ರಾಜ್ಯದಲ್ಲಿ ಹೈನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದರಲ್ಲಿ 9 ಲಕ್ಷ ಮಹಿಳೆಯರಿರುವುದು ವಿಷೇಶ.

ರಾಜ್ಯದಲ್ಲಿ ನಿತ್ಯ 77.22 ಲಕ್ಷ ಕೆ.ಜಿ ಹಾಲು ಸಂಗ್ರಹಣೆ ಆಗುತ್ತಿದ್ದು, ನಿತ್ಯ 19.88 ಕೋಟಿ ರೂ ಹಣ ರೈತರಿಗೆ ಪಾವತಿಯಾಗುತ್ತಿದೆ. 2018-19 ರಲ್ಲಿ 14,446 ಕೋಟಿ ರೂ ಗಳ ವಹಿವಾಟನ್ನು ಕರ್ನಾಟಕ ಹಾಲು ಮಹಾಮಂಡಳಿ ನಡೆಸಿದೆ. ಕರ್ನಾಟಕ ಹಾಲು ಸಂಗ್ರಹಣೆಯಲ್ಲಿ ದೇಶದಲ್ಲಿ 2ನೇ ಸ್ಥಾನದಲ್ಲಿದೆ ಮತ್ತು ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ.