ಬೆಂಗಳೂರು [ಅ.27]:  ಟಿಕೆಟ್‌ ಇಲ್ಲದೆ ಪ್ರಯಾಣ ಮಾಡದಂತೆ ಆಕ್ಷೇಪಿಸಿದ್ದಕ್ಕೆ ಕೋಪಗೊಂಡು ಬಿಎಂಟಿಸಿ ಬಸ್‌ ನಿರ್ವಾಹಕನಿಗೆ ಚಾಕುವಿನಿಂದ ಇರಿದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ಕೆ.ಪಿ.ಅಗ್ರಹಾರದ ನಿವಾಸಿ ಮಂಜುನಾಥ್‌ ಬಂಧಿತನಾಗಿದ್ದು, ಬಿಎಂಟಿಸಿ ಬಸ್‌ ಕಂಡಕ್ಟರ್‌ ಲೋಕೇಶ್‌ ಹಲ್ಲೆಗೆ ಒಳಗಾದವರು. ಮೂರು ದಿನಗಳ ಹಿಂದೆ ಕೆ.ಆರ್‌.ಮಾರುಕಟ್ಟೆಯಿಂದ ಮಂಜುನಾಥ್‌ ಜಾಲಹಳ್ಳಿಗೆ ತೆರಳುವಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಎಂಟಿಸಿ ಬಸ್‌ ಚಾಲಕ ತಮ್ಮಣ್ಣ ಹಾಗೂ ನಿರ್ವಾಹಕ ಲೋಕೇಶ್‌ ಅವರು, ಕೆ.ಆರ್‌.ಮಾರುಕಟ್ಟೆಯಿಂದ ಜಾಲಹಳ್ಳಿಗೆ ತೆರಳುತ್ತಿದ್ದರು. ಆಗ ಮಾರ್ಗ ಮಧ್ಯೆ ಬಸ್‌ ಹತ್ತಿರದ ಮಂಜುನಾಥ್‌, ಮೈಸೂರು ಸರ್ಕಲ್‌ಗೆ ಎಂದು ಹೇಳಿ ಟಿಕೆಟ್‌ ಪಡೆದಿದ್ದ. ಆದರೆ ಆ ನಿಗದಿತ ನಿಲ್ದಾಣದಲ್ಲಿ ಆತ ಇಳಿಯಲಿಲ್ಲ. ಇದನ್ನು ಗಮನಿಸಿದ ನಿರ್ವಾಹಕ ಲೋಕೇಶ್‌, ನೀವು ಮುಂದಿನ ನಿಲ್ದಾಣ ಇಳಿಯಬೇಕಾದರೆ ಮತ್ತೆ .5 ಕೊಟ್ಟು ಟಿಕೆಟ್‌ ಪಡೆಯಿರಿ ಎಂದು ಸೂಚಿಸಿದ್ದಾರೆ. ಈ ಮಾತಿಗೆ ಮಂಜುನಾಥ್‌ ಆಕ್ಷೇಪಿಸಿದ್ದಾನೆ.

ಆಗ ಇಬ್ಬರ ಮಧ್ಯೆ ಬಿರುಸಿನ ಮಾತಿನ ಚಕಮಕಿ ನಡೆದಿದೆ. ಕೊನೆಗೆ .5 ಕೊಟ್ಟು ಮತ್ತೊಂದು ಆರೋಪಿ ಟಿಕೆಟ್‌ ಪಡೆದಿದ್ದಾನೆ. ಟಿಕೆಟ್‌ ಇಲ್ಲದೆ ಪ್ರಯಾಣಿಸಬೇಡಿ. ಕಂಡಕ್ಟರ್‌ಗಳ ಕೆಲಸಕ್ಕೆ ಕುತ್ತು ಬರುತ್ತದೆ ಎಂದು ಲೋಕೇಶ್‌ ಹೇಳಿದ್ದಾರೆ. ಇದರಿಂದ ಮತ್ತಷ್ಟುಕೆರಳಿದ ಮಂಜುನಾಥ್‌, ನಿರ್ವಾಹಕನಿಗೆ ಮನಬಂದಂತೆ ಬೈದಿದ್ದಾರೆ. ಅಲ್ಲದೆ ಚಾಕುವಿನಿಂದ ಸಹ ಹಲ್ಲೆ ನಡೆಸಿದ್ದಾನೆ.