ತೀವ್ರ ಬರಗಾಲದ ನಡುವೆಯೂ ರಾಜ್ಯ ಸರ್ಕಾರವು ಸಚಿವರು ಮತ್ತು ಸಂಸದರ ಹೊಸ ಕಾರು ಖರೀದಿ ಮಿತಿಯನ್ನು 31 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ. ಇದರ ಜೊತೆಗೆ, ಸರ್ಕಾರಿ ಪದವಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಶೀಘ್ರದಲ್ಲೇ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಈ ಹಾಜರಾತಿಯನ್ನು ಪರೀಕ್ಷೆಗೂ ಲಿಂಕ್ ಮಾಡಲು ಚಿಂತನೆ ನಡೆಸಲಾಗಿದೆ.

ಬೆಂಗಳೂರು: ರಾಜ್ಯದಲ್ಲಿ ತಾಂಡವವಾಡುತ್ತಿರುವ ತೀವ್ರ ಬರ ಪರಿಸ್ಥಿತಿ ನಡುವೆಯೂ ಸಚಿವರು, ಸಂಸದರಿಗೆ ಹೊಸ ಕಾರು ಖರೀದಿಸಲು ಇದ್ದ 26 ಲಕ್ಷ ರೂ.ಗಳ ಹಣಕಾಸು ಮಿತಿಯನ್ನು 31 ಲಕ್ಷ ರೂ.ಗಳಿಗೆ ಹೆಚ್ಚಿಸಿ ಸರ್ಕಾರ ಆದೇಶಿಸಿದೆ.

ಈ ಹಿಂದೆ 26 ಲಕ್ಷ ರೂಪಾಯಿ ಇದ್ದ ಹಣಕಾಸು ಮಿತಿ ನಾಲ್ಕು ವರ್ಷಗಳ ಬಳಿಕ ಮಿತಿ ಪರಿಷ್ಕರಿಸಿದ ಸರ್ಕಾರ

ಈ ಹಿಂದೆ 2022ರ ಆಗಸ್ಟ್‌ನಲ್ಲಿ ಸಚಿವ, ಸಂಸದರ ಹೊಸ ಕಾರು ಖರೀದಿಗೆ ಇದ್ದ 23 ಲಕ್ಷ ರೂ. ಹಣಕಾಸು ಮಿತಿಯನ್ನು 26 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ಮತ್ತೆ ಐದು ಲಕ್ಷ ರೂ.ಗಳನ್ನು ಹೆಚ್ಚಿಸಿ 31 ಲಕ್ಷ ರೂ.ಗಳಿಗೆ ಪರಿಷ್ಕರಿಸಲಾಗಿದೆ. ಪರಿಷ್ಕೃತ ದರ ಪ್ರಸ್ತಾವನೆಗೆ ಹಣಕಾಸು ಇಲಾಖೆಯು ಅನುಮತಿ ನೀಡಿದ್ದು ಪರಿಷ್ಕೃತ 31 ಲಕ್ಷ ರೂ. ದರವು ಜಿಎಸ್‌ಟಿಯೂ ಸೇರಿದಂತೆ ಎಕ್ಸ್‌ಷೋರೂಂ ದರಕ್ಕೆ ಒಳಪಟ್ಟಿರಬೇಕೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶದಲ್ಲಿ ತಿಳಿಸಿದೆ.

ಸರ್ಕಾರಿ ಡಿಗ್ರಿ ಕಾಲೇಜಲ್ಲೂ ಶೀಘ್ರ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ

ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಬೈಲ್ ಆಪ್ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಿರುವ ರಾಜ್ಯ ಸರ್ಕಾರ ಇದೀಗ ಸರ್ಕಾರಿ ವಿಶ್ವವಿದ್ಯಾಲಯಗಳು, ಪದವಿ, ಐಟಿಐ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಲ್ಲೂ ವಿದ್ಯಾರ್ಥಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ತರಲು ಮುಂದಾಗಿದೆ.

ಇದೇ ಹಾಜರಾತಿ ಪರೀಕ್ಷೆಗೂ ಲಿಂಕ್ ಮಾಡಲು ಚಿಂತನೆ

ಈ ವ್ಯವಸ್ಥೆ ಜಾರಿಯಾದರೆ ಸಾರ್ವಜನಿಕ ವಿಶ್ವವಿದ್ಯಾಲಯಗಳು, ಕಾಲೇಜುಗಳ ವಿದ್ಯಾರ್ಥಿಗಳು ಅನಗತ್ಯವಾಗಿ ತರಗತಿಗಳಿಗೆ ಚಕ್ಕರ್ ಹೊಡೆಯುವುದು, ಮನೆಯಿಂದ ಕಾಲೇಜೆಂದು ಬಂದರೂ ಸ್ನೇಹಿತರೊಂದಿಗೆ ಸುತ್ತುವಂತಹ ಚಟುವಟಿಕೆಗಳಿಗೆ ಬ್ರೇಕ್ ಬೀಳಲಿದೆ. ಕೆಲ ವರ್ಷಗಳಿಂದ ಉನ್ನತ ಶಿಕ್ಷಣ ಇಲಾಖೆಯಲ್ಲಿ ಈ ಸಂಬಂಧ ಪ್ರಸ್ತಾವನೆ ಇದೆಯಾದರೂ ಅನುಷ್ಠಾನಗೊಂಡಿರಲಿಲ್ಲ. ಇತ್ತೀಚೆಗೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಸಾಮಾನ್ಯ ಸಭೆಯಲ್ಲಿ ಈಗಾಗಲೇ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಇರುವ ಬಯೋಮೆಟ್ರಿಕ್ ಹಾಜರಾತಿಯನ್ನು ವಿವಿ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೂ ಜಾರಿಗೊಳಿಸುವ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಮುಂದಿನ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ 2026-27ನೇ ಸಾಲಿನಿಂದಲೇ ಇದನ್ನು ಅನುಷ್ಠಾನಗೊಳಿಸಲು ಟೆಂಡರ್ ಆಹ್ವಾನಿಸಲಾಗುತ್ತದೆ. ಸಾಧ್ಯವಾಗದೆ ಇದ್ದರೆ ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗುತ್ತದೆ ಎಂಬುದು ಅಧಿಕಾರಿಗಳ ಹೇಳಿಕೆ.

ರಾಜ್ಯದಲ್ಲಿ ಸುಮಾರು 40 ಸಾರ್ವಜನಿಕ ವಿವಿಗಳು, 400ಕ್ಕೂ ಹೆಚ್ಚು ಪ್ರಥಮ ದರ್ಜೆ ಕಾಲೇಜುಗಳು, 280ಕ್ಕೂ ಹೆಚ್ಚು ಐಟಿಐ ಕಾಲೇಜುಗಳಿವೆ. ಪ್ರಸ್ತುತ ಶೈಕ್ಷಣಿಕ ವರ್ಷ ಮುಗಿಯುವುದರೊಳಗೆ ಎಲ್ಲಾ ಪದವಿ ಕಾಲೇಜುಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಇಲಾಖೆ ಸೂಚನೆ ನೀಡಲಿದೆ.

ಹೇಗಿರಲಿದೆ ಬಯೋಮೆಟ್ರಿಕ್?

ಸರ್ಕಾರಿ ಶಾಲಾ ಮಕ್ಕಳಿಗೆ ‘ನಿರಂತರ’ ಎಂಬ ಆಪ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದೆ. ಅದರಲ್ಲಿ ಮಕ್ಕಳ ಮುಖಚರ್ಯೆ ಅಳವಡಿಸಲಾಗಿದೆ. ಇದೇ ಮಾದರಿ ವ್ಯವಸ್ಥೆಯನ್ನು ವಿವಿ ಕಾಲೇಜುಗಳಲ್ಲೂ ಜಾರಿಗೊಳಿಸುವ ಕುರಿತು ಚರ್ಚೆ ನಡೆಯಿತಾದರೂ ಅಂತಿಮವಾಗಿ ಬೆರಳಚ್ಚು ಆಧಾರಿತ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಸಾಕು ಎನ್ನುವ ನಿರ್ಧಾರಕ್ಕೆ ಬರಲಾಗಿದೆ. ಪ್ರತಿ ತರಗತಿ ಕೊಠಡಿಯ ಹೊರಗೆ ಬಯೋಮೆಟ್ರಿಕ್ ಯಂತ್ರ ಅಳವಡಿಸಿ ಅದರಲ್ಲಿ ಸಂಬಂಧಿಸಿದ ಎಲ್ಲಾ ವಿದ್ಯಾರ್ಥಿಗಳ ಬೆರಳು ಗುರುತು ಸಹಿತ ಹೆಸರು, ಸೆಕ್ಷನ್ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಪ್ರತಿ ದಿನ ವಿದ್ಯಾರ್ಥಿ ತರಗತಿಗೆ ಹಾಜರಾಗುವ ಮುನ್ನ ಅಥವಾ ನಿರ್ಗಮಿಸುವ ಮುನ್ನ ಪಂಚ್ ಮಾಡುವ ಸಂದರ್ಭದಲ್ಲಿ ಅದರ ಡೇಟಾ ಸರ್ವರ್‌ನಲ್ಲಿ ದಾಖಲಾಗಲಿದೆ. ವಿಶ್ವವಿದ್ಯಾಲಯ ಹಾಗೂ ಕಾಲೇಜಿನ ಹಿರಿಯ ಅಧಿಕಾರಿಗಳು ಅಥವಾ ತಾಂತ್ರಿಕ ತಂಡಕ್ಕೆ ದತ್ತಾಂಶ ಲಭ್ಯವಾಗುವ ರೀತಿಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ.

ಇನ್ನು, ಬಯೋಮೆಟ್ರಿಕ್ ಹಾಜರಾತಿ ಪದ್ಧತಿಯನ್ನು ಪರೀಕ್ಷಾ ವ್ಯವಸ್ಥೆಗೂ ಲಿಂಕ್ ಮಾಡುವ ಚಿಂತನೆ ನಡೆದಿದೆ. ಇದರಿಂದ ವಿದ್ಯಾರ್ಥಿ ನಿಗದಿತ ಪ್ರಮಾಣದ ಹಾಜರಾತಿ ಪಡೆಯುವುದು ಕಡ್ಡಾಯವಾಗಲಿದೆ. ಇಲ್ಲದಿದ್ದಲ್ಲಿ ವಿದ್ಯಾರ್ಥಿಗೆ ಹಾಲ್ ಟಿಕೆಟ್ ಕೂಡ ಲಭ್ಯವಾಗುವುದಿಲ್ಲ ಎಂದು ಸಚಿವಾಲಯ ಮೂಲಗಳು ತಿಳಿಸಿವೆ.