ಅಧಿಕಾರ ಬದಲಾವಣೆಯಲ್ಲಿ ಬಿಗ್ ಟ್ವಿಸ್ಟ್, ನಾಳೆ ಸಿಎಂ ನಿವಾಸದಲ್ಲಿ ಸಿದ್ದರಾಮಯ್ಯ ಡಿಕೆಶಿ ಬ್ರೇಕ್‌ಫಾಸ್ಟ್ ಮೀಟಿಂಗ್, ರಾಜ್ಯ ರಾಜಕಾರಣ ಕ್ಷಣಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದೆ. ದೆಹಲಿ ತೆರಳಬೇಕಿದ್ದ ಡಿಕೆ ಶಿವಕುಮಾರ್ , ನಾಳೆ ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಬೆಂಗಳೂರು (ನ.28) ಕರ್ನಾಟಕ ರಾಜಕಾರಣ ಹಲವು ತಿರುವು ಪಡೆದುಕೊಳ್ಳುತ್ತಿದೆ. ಅಧಿಕಾರ ಬದಲಾವಣೆ, ಸಿಎಂ ಬದಲಾವಣೆ ಸೇರಿದಂತೆ ಹಲವು ಚರ್ಚೆಗಳು, ಹೇಳಿಕೆಗಳು ಕೋಲಾಹಲ ಸೃಷ್ಟಿಸಿಸಿದೆ. ಒಂದೆಡೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಟ್ವೀಟ್ ಸಮರವೂ ಆರಂಭಗೊಂಡಿದೆ. ಮತ್ತೊಂದೆಡೆ ಬೆಂಬಲಿಗರಿಂದ ಹೇಳಿಕೆ, ಶಕ್ತಿ ಪ್ರದರ್ಶನ, ಪೂಜೆ ಎಲ್ಲವೂ ನಡೆಯುತ್ತಿದೆ. ಇದರ ನಡುವೆ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳಿಕೆ ಸೇರಿದಂತೆ ಹಲವು ಮಾತುಗಳು ಭಾರಿ ಚರ್ಚೆಯಾಗುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಇಂದು ಸಂಜೆ ಡಿಕೆ ಶಿವಕುಮಾರ್ ದೆಹಲಿ ಪ್ರವಾಸಕ್ಕೆ ಎಲ್ಲಾ ತಯಾರಿ ನಡೆದಿತ್ತು. ಆದರೆ ದಿಢೀರ್ ಪ್ರಯಾಣ ರದ್ದಾಗಿತ್ತು. ಇದೀಗ ಮತ್ತೊಂದು ಟ್ವಿಸ್ಟ್ ಎದುರಾಗಿದೆ. ನಾಳೆ (ನ.29) ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ನಿವಾಸದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬ್ರೇಕ್‌ಫಾಸ್ಟ್ ಮೀಟಿಂಗ್ ಫಿಕ್ಸ್ ಆಗಿದೆ.

ಕುತೂಹಲ ಮೂಡಿಸಿದ ಉಭಯ ನಾಯಕರ ಸಭೆ

ನವೆಂಬರ್ 29ರ 9 ಗಂಟೆಗೆ ಬೆಳಗಿನ ಉಪಾಹರ ಜೊತೆ ಮಹತ್ವದ ಮೀಟಿಂಗ್ ನಡೆಯಲಿದೆ. ಹಲವು ತಿರುವುಗಳ ಬಳಿಕ ಇದೀಗ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮೀಟಿಂಗ್ ಭಾರಿ ಕುತೂಹಲ ಸೃಷ್ಟಿಸಿದೆ. ಈ ಮೀಟಿಂಗ್ ಕಾರಣವೇನು? ಹೈಕಮಾಂಡ್ ಸೂಚನೆಯಂತೆ ಒಗ್ಗಟಿನ ಮಂತ್ರ ಪಠಿಸಲು ಈ ಸಭೆ ನಡೆಯುತ್ತಿದೆಯಾ ಅನ್ನೋ ಅನುಮಾನಗಳು ಆರಂಭಗೊಂಡಿದೆ. ಸಭೆ ಬಳಿಕ ಉಭಯ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿ ಎಲ್ಲಾ ಹೈಡ್ರಾಮಕ್ಕೆ ತೆರೆ ಎಳೆಯುತ್ತಾರಾ ಅನ್ನೋ ಪ್ರಶ್ನೆಯೂ ಎದ್ದಿದೆ.

ಸಂಜೆ 7.30ಕ್ಕೆ ದೆಹಲಿ ಪ್ರಯಾಣ ರದ್ದುಗೊಳಿಸಿ ಅಚ್ಚರಿ ಕೊಟ್ಟ ಡಿಕೆಶಿ

ಇಂದು (ನ.28) ಸಂಜೆ 7.30ಕ್ಕೆ ಡಿಕೆ ಶಿಕುಮಾರ್ ದೆಹಲಿ ಪ್ರಯಾಣ ಫಿಕ್ಸ್ ಆಗಿತ್ತು. ದೆಹಲಿಯಲ್ಲಿ ಹೈಕಮಾಂಡ್ ಜೊತೆ ಮಹತ್ವದ ಸಭೆಗೆ ಪ್ಲಾನ್ ಮಾಡಲಾಗಿತ್ತು. ಡಿಕೆ ಶಿವಕುಮಾರ್ ಹೆಸರಿನಲ್ಲಿ ಏರ್ ಇಂಡಿಯ ವಿಮಾನ AI 2665ದಲ್ಲಿ ಟಿಕೆಟ್ ಬುಕಿಂಗ್ ಮಾಡಲಾಗಿತ್ತು.ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ಡಿಕೆ ಶಿವಕುಮಾರ್ ದೆಹಲಿ ಪ್ರಯಾಣ ತೀವ್ರ ಕುತೂಹಲ ಕೆರಳಿಸಿತ್ತು. ಆದರೆ ಡಿಕೆ ಶಿವಕುಮಾರ್ ಪ್ರಯಾಣ ರದ್ದು ಮಾಡಿ ಮನೆಯಲ್ಲಿ ಉಳಿದುಕೊಳ್ಳುವ ಮೂಲಕ ಮತ್ತೊಂದು ಟ್ವಿಸ್ಟ್ ನೀಡಿದ್ದರು.

ಈಗಾಗಲೇ ಡಿಕೆ ಸುರೇಶ್ ದೆಹಲಿಯಲ್ಲಿ

ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಈಗಾಗಲೇ ದೆಹಲಿಯಲ್ಲಿದ್ದಾರೆ. ದೆಹಲಿ ಖಾಸಗಿ ನಿವಾಸದಲ್ಲಿ ತಂಗಿದ್ದಾರೆ. ದೆಹಲಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆ ಸುರೇಶ್, ನಾನು ಯಾವುದೇ ರಾಜಕೀಯ ವಿಷಯದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ. ಸಮಸ್ಯೆಗಳು ಇದ್ದರೆ ಕರ್ನಾಟಕ ಸರ್ಕಾರ ಮತ್ತು ಸಿಎಂ ಉತ್ತರಿಸುತ್ತಾರೆ ಎಂದಿದ್ದರು. ದೆಹಲಿಯಲ್ಲಿ ಹೈಕಮಾಂಡ್ ಸೇರಿದಂತೆ ಕಾಂಗ್ರೆಸ್ ಪ್ರಮುಖ ನಾಯಕರು ಇಲ್ಲ. ಕೆಸಿ ವೇಣುಗೋಪಾಲ್ ಕೇರಳಕ್ಕೆ ತೆರಳಿದ್ದರೆ, ರಣದೀಪ್ ಸಿಂಗ್ ಸುರ್ಜೆವಾಲ ಹರ್ಯಾಣದಲ್ಲಿದ್ದಾರೆ. ಹೀಗಾಗಿ ಡಿಕೆ ಸುರೇಶ್ ಯಾವುದೇ ನಾಯಕರ ಭೇಟಿಯಾಗಿಲ್ಲ.