ಉತ್ತರಖಂಡ ಹೆಲಿಕಾಪ್ಟರ್ ದುರಂತದಲ್ಲಿ ಕರ್ನಾಟಕ ಸಿಸಿಬಿ ಇನ್ಸ್‌ಪೆಕ್ಟರ್ ಅರುಣ್ ಸೋಲಂಕಿ ಸೇರಿ ಐವರು ಮೃತಪಟ್ಟಿದ್ದಾರೆ. ಇನ್ನು ಕ್ಯಾಪ್ಟನ್ ಹಿಮಾಂಶು ಕೂಡ ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ.

ನವದೆಹಲಿ (ಅ.30) ಬದ್ರಿನಾಥ ಧಾಮದಿಂದ ಡೆಹ್ರಡೂನ್‌ನತ್ತ ಪ್ರಯಾಣ ಬೆಳೆಸಿದ್ದ ಹೆಲಿಕಾಪ್ಟರ್ ಪತನದ ಮತ್ತಷ್ಟು ಆಘಾತಕಾರಿ ಮಾಹಿತಿಗಳು ಹೊರಬಿದ್ದಿದೆ. ಈ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ 6 ಮಂದಿ ಪೈಕಿ ಐವರು ಕರ್ನಾಟಕ ಮೂಲದವರು ಅನ್ನೋದು ಪತ್ತೆಯಾಗಿದೆ. ಈ ಪೈಕಿ ಸಿಸಿಬಿ ಇನ್ಸ್‌ಪೆಕ್ಟರ್ ಅರುಣ್ ಸೋಲಂಕಿಯೂ ದುರಂತದಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಬದ್ರಿನಾಥಕ್ಕೆ ಯಾತ್ರೆಗೆ ತೆರಳಿದ್ದ ಐವರು ದುರಂತದಲ್ಲಿ ಮಡಿದಿದ್ದಾರೆ.

ಕರ್ನಾಟಕದ ಐವರು ಸಾವು

ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟವರನ್ನು ಸಿಸಿಬಿ ಇನ್ಸ್‌ಪೆಕ್ಟರ್ ಅರುಣ್ ಸೋಲಂಕಿ, ಪ್ರತಾಪ್, ಅರುಣ್, ಶಂಕರ್ ಗೌಡ, ಸುಧೀರ್ ಕೆ ಮತ್ತು ಎಚ್ಎಸ್ ನಟರಾಜ ಎಂದು ಗುರುತಿಸಲಾಗಿದೆ. ಸಿಸಿಬಿ ಅಧಿಕಾರಿ ಅರುಣ್ ಸೋಲಂಕಿಗೆ ಇಬ್ಬರು ಮಕ್ಕಳು, ಪತ್ನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಇನ್ನು ಕ್ಯಾಪ್ಟನ್ ಹಿಮಾಂಶು (ಪೈಲೆಟ್) ಕೂಡ ಘಟನೆಯಲ್ಲಿ ಮೃತಪಟ್ಟಿದ್ದಾರೆ.

ಬೆಂಗಳೂರಿನ ಸಿಸಿಬಿ ಟೆಕ್ನಿಕಲ್ ವಿಂಗ್‌ನಲ್ಲಿ ಸೇವೆ

ವಕೀಲ ಶಂಕರಗೌಡ, ಸುಧೀರ್ ಜೊತೆಗೂಡಿ ಇನ್ಸ್‌ಪೆಕ್ಟರ್ ಅರುಣ್ ಸೋಲಂಕಿ ಹಾಗೂ ಇತರ ಇಬ್ಬರು ಚಾರ್ ಧಾಮ್ ಪ್ರವಾಸ ಕೈಗೊಂಡಿದ್ದರು. ಮೂರು ದಿನಗಳ ಹಿಂದೆ ಉತ್ತರಖಂಡ ಯಾತ್ರೆಗೆ ತೆರಳಿದ್ದರು. ಬದ್ರಿನಾಥ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಮರಳಿ ಡೆಹ್ರಡೂನ್ ಪ್ರಯಾಣ ಬೆಳೆಸಿದ ವೇಳೆ ದುರ್ಘಟನೆ ನಡೆದಿದೆ. ಇದೇ ಹೆಲಿಕಾಪ್ಟರ್ ಮೂಲಕ ಬದ್ರಿನಾಥ್ ಧಾಮಕ್ಕೆ ತೆರಳಿದ್ದರು. ಬೆಳಗಾವಿ ಮೂಲದ ಅರುಣ್ ಸೋಲಂಕಿ ಸದ್ಯ ಬೆಂಗಳೂರಿನಲ್ಲಿ ಸಿಸಿಬಿ ಟೆಕ್ನಕಲ್ ವಿಂಗ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ದೆಹಲಿಯಲ್ಲಿ ಎರಡು ವರ್ಷ ಗುಪ್ತಚರ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ವಾಸವಿದ್ದ ಅರುಣ್ ಸೋಲಂಕಿ ನಿಧನ ಸುದ್ದಿ ಕರ್ನಾಟಕಕ್ಕೆ ಆಘಾತ ನೀಡಿದೆ.

ಇಂದು ಮಧ್ಯಾಹ್ನ 1.14ರ ವೇಳೆಗೆ ಬದ್ರಿನಾಥ ಥಾಮದಿಂದ ಹೆಲಿಕಾಪ್ಟರ್ ಟೇಕ್ ಆಫ್ ಆಗಿತ್ತು. ತೀವ್ರ ಮಂಜು ಮುಸುಕಿದ ವಾತಾವರಣ ಹಾಗೂ ಮಳೆಯಿಂದ ಸ್ಪಷ್ಟ ಗೋಚರತೆ ಇರಲಿಲ್ಲ. ಇದರ ನಡುವೆ ಹೆಲಿಕಾಪ್ಟರ್ ಟೇಕ್ ಆಫ್ ಆಗಿತ್ತು. ಡೆಹ್ರಡೂನ್‌ನತ್ತ ಪ್ರಯಾಣ ಬೆಳೆಸಿದ ಹೆಲಿಕಾಪ್ಟರ್ ಜೋಶಿಮಠ ವಲಯದಲ್ಲಿ ಸಂಚರಿಸುತ್ತಿದ್ದಂತೆ ಸಂಪರ್ಕ ಕಡಿದುಕೊಂಡಿದೆ. ಹೆಲಿಕಾಪ್ಟರ್ ಟ್ರಾಕಿಂಗ್ ವ್ಯವಸ್ಥೆಯೂ ಸ್ಥಗಿತಗೊಂಡಿದೆ. ಮತ್ತೊಂದು ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ವೇಳೆ ಪತನವಾಗಿರುವುದು ಪತ್ತೆಯಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ಧಾವಿಸಿದೆ. ಆದರೆ ಭೀಕರ ದುರಂತದಲ್ಲಿ ಐವರು ಪ್ರಯಾಣಿಕರು, ಕ್ಯಾಪ್ಟನ್ ಸೇರಿ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆಗೆ ಉತ್ತರಖಂಡ ಮುಖ್ಯಮಂತ್ರಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಚಮೋಲಿ ಜಿಲ್ಲಾಡಳಿತ ಜೊತೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಮಾತನಾಡಿದ್ದಾರೆ.ಘಟನೆ ಕುರಿತು ಎಕ್ಸ್ ಮೂಲಕ ಪೋಸ್ಟ್ ಮಾಡಿದ್ದಾರೆ. ಹೆಲಿಕಾಪ್ಟರ್ ಪತನ ದುರಂತ ಘಟನೆ ಕುರಿತು ಮಾಹಿತಿ ಬಂದಿದೆ. ಘಟನೆಯಿಂದ ತೀವ್ರ ನೋವಾಗಿದೆ. ಚಾಯಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಸ್ಥಳೀಯ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಧಮಿ ಹೇಳಿದ್ದಾರೆ.