ರಾಜ್ಯ ಸರ್ಕಾರ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂ. ಹೆಚ್ಚಿಸಿದೆ. ಈ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುವಾಗ ಸಚಿವ ಮಧು ಬಂಗಾರಪ್ಪ ಅವರು 7-8 ವರ್ಷಗಳಿಂದ ಬೆಲೆ ಏರಿಕೆಯಾಗಿಲ್ಲ ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದ್ದಾರೆ. 2023ರಿಂದ ಇದು ನಾಲ್ಕನೇ ಬಾರಿ ಹಾಲಿನ ದರ ಏರಿಕೆಯಾಗಿದ್ದು, ವಿಪಕ್ಷಗಳ ಟೀಕೆಗೆ ಸಚಿವರು ತಿರುಗೇಟು ನೀಡಿದ್ದಾರೆ.

ಶಿವಮೊಗ್ಗ(ಅ.31): ಕರ್ನಾಟಕದಲ್ಲಿ ನಂದಿನ ಹಾಲಿನ ದರವನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪರ ವಿರೋಧಗಳು ವ್ಯಕ್ತವಾಗಿವೆ. ನವೆಂಬರ್ 01ರಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್ ಟೋನ್ಡ್ ಹಾಲಿನ ಬೆಲೆಯಲ್ಲಿ 8 ರುಪಾಯಿ ಹೆಚ್ಚಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದೀಗ ರಾಜ್ಯ ಸರ್ಕಾರದ ನಿಲುವನ್ನು ಸಮರ್ಥಿಸಿಕೊಳ್ಳಲು ಹೋಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದ್ದಾರೆ.

ಟೀಕೆಗೆ ಗುರಿಯಾದ ಮಧು ಬಂಗಾರಪ್ಪ ಹೇಳಿಕೆ:

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿರುವ ಮಧು ಬಂಗಾರಪ್ಪ, ಹಾಲಿನ ದರ ಏರಿಕೆ ಎಷ್ಟು ವರ್ಷಗಳಾಗಿವೆ? ನನಗೆ ಗೊತ್ತಿರುವ ಪ್ರಕಾರ 7-8 ವರ್ಷಗಳಾಗಿದೆ ಎಂದು ಹೇಳಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದೆ. ಯಾಕೆಂದರೆ 2023ರಿಂದೀಚಗೆ ನಮ್ಮ ರಾಜ್ಯದಲ್ಲಿ ಹಾಲಿನ ಬೆಲೆಯಲ್ಲಿ ಏರಿಕೆಯಾಗುತ್ತಿರುವುದು ಇದು ನಾಲ್ಕನೇ ಸಲ.

2023ರಿಂದೀಚೆಗಿನ ಹಾಲಿನ ಬೆಲೆ ಏರಿಕೆಯ ಡೀಟೈಲ್ಸ್‌

ಈ ಮೊದಲು 2023ರ ಆಗಸ್ಟ್‌ನಲ್ಲಿ ನಂದಿನ ಹಾಲಿನ ಪ್ರತಿ ಲೀಟರ್‌ಗೆ ₹3 ಹೆಚ್ಚಿಸಲಾಗಿತ್ತು. ಇದರೊಂದಿಗೆ ಲೀಟರ್‌ಗೆ 39 ರುಪಾಯಿ ಇದ್ದ ಹಾಲಿನ ಬೆಲೆ 42 ರುಪಾಯಿಗೆ ಏರಿಕೆಯಾಗಿತ್ತು. ಇನ್ನು ಇದಾದ ಬಳಿಕ 2024ರ ಜೂನ್‌ನಲ್ಲಿ ಪಾಕೆಟ್‌ಗೆ 50 ಮಿಲಿ ಲೀಟರ್ ಹೆಚ್ಚುವರಿ ಹಾಲು ನೀಡುತ್ತಿದ್ದೇವೆ ಎಂದು ಹೇಳಿ ಮತ್ತೆ ಎರಡು ರುಪಾಯಿ ಹೆಚ್ಚಿಸಲಾಯಿತು. ಹೀಗಾಗಿ ಒಂದು ಲೀಟರ್ ಟೋನ್ಡ್‌ ಹಾಲಿನ ಬದಲಿಗೆ 1,050 ಮಿಲಿ ಲೀಟರ್ ಪ್ಯಾಕೆಟ್‌ಗೆ ₹44 ನಿಗದಿಯಾಯಿತು. ಈ ಹೆಚ್ಚುವರಿ ಹಾಲು ನೀಡಿದ್ದರಿಂದ ಈ ಪರಿಷ್ಕರಣೆಯನ್ನು ಕೆಎಂಎಫ್ ಬೆಲೆ ಏರಿಕೆಯೆಂದು ಪರಿಗಣಿಸಲಿಲ್ಲ.

ಇನ್ನು 2025ರ ಏಪ್ರಿಲ್ 01ರಂದು ಹಾಲು ಮತ್ತು ಮೊಸರಿನ ಬೆಲೆಯನ್ನು ಪ್ರತಿ ಲೀಟರ್‌ಗೆ 4 ರುಪಾಯಿ ಹೆಚ್ಚಿಸಲಾಯಿತು. ಇದರ ಜತೆಗೆ ಈ ಮೊದಲು ನೀಡುತ್ತಿದ್ದ ಪ್ರತಿ ಪಾಕೆಟ್‌ಗೆ 50 ಮಿಲಿ ಲೀಟರ್ ಹೆಚ್ಚುವರಿ ನೀಡುತ್ತಿದ್ದ ಹಾಲನ್ನು ಸ್ಥಗಿತಗೊಳಿಸಿತ್ತು. ಇದರ ಬೆಲೆ ಏರಿಕೆಯ ಬರೆಯೂ ಸಾಮಾನ್ಯ ಹಾಲು ಖರೀದಿಸುವವರ ಮೇಲೆ ಬಿದ್ದಿತ್ತು. ಇದಾದ ಬಳಿಕ ಇದೀಗ ನಾಳೆಯಿಂದ(ನ.01) ಪ್ರತಿ ಲೀಟರ್ ಹಾಲಿನ ಮೇಲೆ 8 ರುಪಾಯಿ ಹಾಗೂ ಪ್ರತಿ ಲೀಟರ್ ಮೊಸರಿನ ಮೇಲೆ 14 ರುಪಾಯಿ ಹೆಚ್ಚುವರಿ ಬೆಲೆ ಏರಿಕೆಯಾಗಿದೆ.

ಕಳೆದ ಮೂರು ವರ್ಷಗಳಲ್ಲಿ ಬಹುತೇಕ ನಿರಂತರವಾಗಿಯೂ ಹಾಲಿನ ಬೆಲೆಯಲ್ಲಿ ಏರಿಕೆಯಾಗುತ್ತಿದ್ದರೂ, ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲವಲ್ಲ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ವಿಪಕ್ಷಗಳ ಮೇಲೆ ಕಿಡಿಕಾರಿದ ಮಧು ಬಂಗಾರಪ್ಪ:

ಹಾಲಿನ ಬೆಲೆ ಏರಿಕೆ ಬಗ್ಗೆ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಪ್ರತಿಭಟನೆ ನಡೆಸಲು ಮುಂದಾಗಿರುವುದರ ಬಗ್ಗೆ ಕಿಡಿಕಾರಿರುವ ಮಧು ಬಂಗಾರಪ್ಪ, ' ಬಿಜೆಪಿಯವರು ಯಾರ ವಿರುದ್ದ ಸ್ಟ್ರೈಕ್ ಮಾಡ್ತಾರೆ? ರೈತರ ವಿರುದ್ದ ಮಾಡ್ತಾರಂತ?, ಬೆಲೆ ಏರಿಕೆ ಮಾಡಿದ ಹೆಚ್ಚುವರಿ ದುಡ್ಡು ಯಾರಿಗೆ ಹೋಗ್ತಿದೆ?. ₹8ರಲ್ಲಿ 7 ರುಪಾಯಿ ರೈತರಿಗೆ ಹೋಗ್ತಾ ಇರೋದಕ್ಕೆ ಇವರಿಗೆ ಹೊಟ್ಟೆ ಉರಿನಾ?, ರೈತರು ಬೀದಿ ಪಾಲಾದ್ರೆ ಪರವಾಗಿಲ್ವಾ? ಮೇವು, ಹಸು ಸಾಕಣೆ, ಮೆಡಿಸಿನ್ ಬಗ್ಗೆ ಪರಿಗಣನೆ ಮಾಡಬೇಕಲ್ವಾ...? ರೈತರಿಗೆ ಹಣ ಹೋಗುತ್ತೇ ಅಂದ್ರೇ ನಾವು ಸಂತೋಷ ಪಡಬೇಕು. ಗ್ರಾಹಕರಿಗೆ ತೊಂದರೆಯಾಗುತ್ತೇ. ನಾನು ಇಲ್ಲ ಅಂತ ಹೇಳಲ್ಲ. ಇಡೀ ದೇಶದಲ್ಲಿ ನಮ್ಮ ರಾಜ್ಯದಲ್ಲೇ ಹಾಲಿನ ದರ ಕಡಿಮೆ ಇರೋದು ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.