- Home
- Karnataka Districts
- Bengaluru Urban
- ಸಿಂಚನಾ ಹುಲಿಯ ಕೋರೆ ಹಲ್ಲಿಗೆ ರೂಟ್ ಕೆನಾಲ್! ಬನ್ನೇರುಘಟ್ಟದಲ್ಲಿ ಶಸ್ತ್ರಚಿಕಿತ್ಸೆ,
ಸಿಂಚನಾ ಹುಲಿಯ ಕೋರೆ ಹಲ್ಲಿಗೆ ರೂಟ್ ಕೆನಾಲ್! ಬನ್ನೇರುಘಟ್ಟದಲ್ಲಿ ಶಸ್ತ್ರಚಿಕಿತ್ಸೆ,
ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 'ಸಿಂಚನಾ' ಎಂಬ ಹುಲಿಯ ಹಾನಿಗೊಳಗಾದ ಕೋರೆ ಹಲ್ಲಿಗೆ ಯಶಸ್ವಿ ರೂಟ್ ಕೆನಾಲ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸೋಂಕಿನಿಂದ ಬಳಲುತ್ತಿದ್ದ ಹುಲಿಯು ಇದೀಗ ಚೇತರಿಸಿಕೊಳ್ಳುತ್ತಿದ್ದು, ವೈದ್ಯರ ತಂಡದ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಹುಲಿಯ ಕೋರೆ ಹಲ್ಲು ಹಾನಿ
ಸಾಮಾನ್ಯವಾಗಿ ಮನುಷ್ಯರು ಹಲ್ಲಿನ ರೂಟ್ ಕೆನಾಲ್ ಮಾಡಿಸಿಕೊಳ್ಳುತ್ತಾರೆ, ಆದರೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುಲಿಯ ಹಲ್ಲಿಗೆ ರೂಟ್ ಕೆನಾಲ್ ಮಾಡಲಾಗಿದೆ. ಉದ್ಯಾನವನದಲ್ಲಿದ್ದ 'ಸಿಂಚನಾ' ಎಂಬ ಹುಲಿ ಕೇಜ್ (ಪಂಜರ) ಕಚ್ಚುತ್ತಿದ್ದರಿಂದ ಅದರ ಕೋರೆ ಹಲ್ಲು ಹಾನಿಗೊಳಗಾಗಿ, ಸೋಂಕಿನಿಂದ ಬಳಲುತ್ತಿತ್ತು.
ಶಸ್ತ್ರಚಿಕಿತ್ಸೆಯ ಯಶಸ್ಸು
ಹಲ್ಲಿನ ನೋವು ಹೆಚ್ಚಾಗಿದ್ದರಿಂದ ಹುಲಿ ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ, ಇದು ಅದರ ಒಟ್ಟಾರೆ ಆರೋಗ್ಯದ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತಿತ್ತು.ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆಡಳಿತ ವರ್ಗ ಹಾಗೂ SOS ಪಶುವೈದ್ಯಕೀಯ ತಂಡ ಜಂಟಿಯಾಗಿ ಮೂರು ಗಂಟೆಗೂ ಹೆಚ್ಚು ಕಾಲ ಶ್ರಮಿಸಿ, ಹುಲಿಯ ಹಲ್ಲನ್ನು ತೆಗೆಯದೆಯೇ ಯಶಸ್ವಿಯಾಗಿ ರೂಟ್ ಕ್ಯಾನಲ್ ಮಾಡಿದೆ.
ಚೇತರಿಕೆ ಮತ್ತು ಆರೈಕೆ
ಶಸ್ತ್ರಚಿಕಿತ್ಸೆ ಬಳಿಕ ಹುಲಿ ಸಿಂಚನಾ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿ ಅದನ್ನು ಪ್ರೀತಿಯಿಂದ ಆರೈಕೆ ಮಾಡುತ್ತಿದ್ದಾರೆ. ಹುಲಿಗೆ ಮರುಜೀವ ನೀಡಿ, ಅದು ದೀರ್ಘಕಾಲ ಆರೋಗ್ಯವಾಗಿರಲು ಕಾರಣವಾದ ವೈದ್ಯರ ತಂಡ ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆಡಳಿತ ವರ್ಗದ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಹಾಗೂ ಪ್ರಾಣಿಪ್ರಿಯರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

