ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಿಪಿಎಲ್ (BPL) ಕಾರ್ಡ್‌ಗಳು ರದ್ದಾಗುತ್ತವೆ ಎಂಬ ಭೀತಿಯಲ್ಲಿದ್ದ ಲಕ್ಷಾಂತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಕೊಂಚ ನಿರಾಳತೆ ನೀಡಿದೆ. ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣಾ ಪ್ರಕ್ರಿಯೆಯನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಿಪಿಎಲ್ (BPL) ಕಾರ್ಡ್‌ಗಳು ರದ್ದಾಗುತ್ತವೆ ಎಂಬ ಭೀತಿಯಲ್ಲಿದ್ದ ಲಕ್ಷಾಂತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಕೊಂಚ ನಿರಾಳತೆ ನೀಡಿದೆ. ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣಾ ಪ್ರಕ್ರಿಯೆಯನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಪರಿಷ್ಕರಣೆ ನಿಲ್ಲಿಸಲು ಸೂಚನೆ
ಸಂಶಯಾಸ್ಪದ ಕಾರ್ಡ್‌ಗಳ ಪಟ್ಟಿ ಸಿದ್ಧಪಡಿಸಿ ಅವುಗಳನ್ನು ರದ್ದು ಮಾಡಲು ಮುಂದಾಗಿದ್ದ ಇಲಾಖೆಯ ನಡವಳಿಕೆಯಿಂದ ಜನರು ಆತಂಕಕ್ಕೊಳಗಾಗಿದ್ದರು. ಇದನ್ನು ಗಮನಿಸಿದ ಸಚಿವ ರಿಜ್ವಾನ್ ಅರ್ಷದ್, ಸದ್ಯಕ್ಕೆ ಬಿಪಿಎಲ್ ಪರಿಷ್ಕರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆರ್ಥಿಕ ಹೊರೆ ಮತ್ತು ಜನರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
e-KYC ನಂತರವೇ ಮುಂದಿನ ಕ್ರಮ
ರಾಜ್ಯದಲ್ಲಿ ಒಟ್ಟು 2 ಕೋಟಿ 65 ಲಕ್ಷ ಕಾರ್ಡ್‌ಗಳ ಇ-ಕೆವೈಸಿ ಪ್ರಕ್ರಿಯೆ ಬಾಕಿ ಇದೆ. ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ಮೊದಲು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳಲಿ. ಅದಾದ ನಂತರ ಎಷ್ಟು ಕಾರ್ಡ್‌ಗಳು ಡಿಲೀಟ್ ಆಗುತ್ತವೆ ಎಂಬುದು ತಿಳಿಯುತ್ತದೆ. ಎಷ್ಟು ಕಾರ್ಡ್‌ಗಳು ಡಿಲೀಟ್ ಆಗುತ್ತವೆಯೋ, ಅಷ್ಟೇ ಸಂಖ್ಯೆಯ ಹೊಸ ಕಾರ್ಡ್‌ಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಆಹಾರ ಭದ್ರತಾ ಕಾಯ್ದೆಯ ಪ್ರಕಾರ ಕರ್ನಾಟಕದ ಜನಸಂಖ್ಯೆಯಲ್ಲಿ ಶೇ. 65 ರಷ್ಟು ಜನರಿಗೆ ಬಿಪಿಎಲ್ ಸೌಲಭ್ಯ ನೀಡಲು ಅವಕಾಶವಿದೆ. ಇವತ್ತಿನ ಹಣದುಬ್ಬರದ ಪರಿಸ್ಥಿತಿಯಲ್ಲಿ ಹಳೆಯ ಮಾನದಂಡಗಳನ್ನು ಇಟ್ಟುಕೊಳ್ಳುವುದು ಕಷ್ಟ. ಕರ್ನಾಟಕದಲ್ಲಿ ಇನ್ನೂ 50 ಲಕ್ಷ ಜನರಿಗೆ ಕೇಂದ್ರ ಸರ್ಕಾರ ರೇಷನ್ ಕಾರ್ಡ್ ಸೌಲಭ್ಯ ಮಾಡಿಕೊಡಬೇಕಿದೆ. ಈ ಬಗ್ಗೆ ನಾವು ಕೇಂದ್ರದ ಜೊತೆ ಚರ್ಚೆ ನಡೆಸಬೇಕಿದೆ ಎಂದು ಸಚಿವರು ಹೇಳಿದರು.
ಇಂದಿರಾ ಕಿಟ್ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಪ್ರತಿ ತಿಂಗಳು ಫುಡ್ ಕಿಟ್ ನೀಡುವುದು ಒಂದು ದೊಡ್ಡ ವ್ಯವಸ್ಥಿತ ಕೆಲಸ. ಈ ಯೋಜನೆ ಜಾರಿ ಮಾಡುವ ಪ್ರಕ್ರಿಯೆ ಈಗ ಒಂದು ಹಂತಕ್ಕೆ ಬಂದಿದೆ. ಇನ್ನಷ್ಟು ಕೆಲಸಗಳು ಬಾಕಿ ಇವೆ. ಆದರೆ ಸರ್ಕಾರ ಘೋಷಣೆ ಮಾಡಿದಂತೆ ಪ್ರತಿ ತಿಂಗಳು ಅಕ್ಕಿ ವಿತರಣೆ ಸುಗಮವಾಗಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಒಟ್ಟಾರೆಯಾಗಿ, ರೇಷನ್ ಕಾರ್ಡ್ ರದ್ದತಿಯ ಭೀತಿಯಲ್ಲಿದ್ದ ಜನರಿಗೆ ಸರ್ಕಾರದ ಈ ನಿರ್ಧಾರ ತಾತ್ಕಾಲಿಕ ನೆಮ್ಮದಿ ತಂದಿದೆ.


