ಬೆಂಗಳೂರಿನ ಹುಸ್ಕೂರು ರೋಡ್ ಮೆಟ್ರೋ ನಿಲ್ದಾಣದಲ್ಲಿ ಪತ್ರಕರ್ತ ರಾಜೇಶ್ ಹಿರೇಮಠ್ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಸುದ್ದಿವಾಹಿನಿಯಲ್ಲಿ ಕೆಲಸ ಬಿಟ್ಟಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಈ ಘಟನೆಯಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

ಎಲೆಕ್ಟ್ರಾನಿಕ್ಸ್ ಸಿಟಿ, ಬೆಂಗಳೂರು (ಜು. 27): ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋ ಯೆಲ್ಲೋ ಲೈನ್‌ನ ಹುಸ್ಕೂರು ರೋಡ್ ಮೆಟ್ರೋ ನಿಲ್ದಾಣದಲ್ಲಿ ಪತ್ರಕರ್ತರೊಬ್ಬರು ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಭೀಕರ ಘಟನೆ ನಡೆದಿದೆ. ಉತ್ತರ ಕರ್ನಾಟಕ ಮೂಲದ ರಾಜೇಶ್ ಹಿರೇಮಠ್ (35) ಮೃತಪಟ್ಟ ವ್ಯಕ್ತಿ. ಇವರು ಖಾಸಗಿ ನ್ಯೂಸ್ ಚಾನೆಲ್ ಒಂದರಲ್ಲಿ (ನ್ಯೂಸ್ ಫಸ್ಟ್) ಕಾರ್ಯನಿರ್ವಹಿಸುತ್ತಿದ್ದರು ಎಂದು ವರದಿಯಾಗಿದೆ. ರಾಯಚೂರು ಮೂಲದ ರಾಜೇಶ್‌ ಹೀರೇಮಠ, ನ್ಯೂಸ್ ಫಸ್ಟ್ ಪ್ರೈಮ್ ಯೂಟ್ಯೂಬ್ ಇಂಗ್ಲಿಷ್ ಚಾನಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಅದಕ್ಕೂ ಮುನ್ನ ಡೆಕ್ಕನ್‌ ಹೆರಾಲ್ಡ್‌ನಲ್ಲೂ ಕೆಲಸ ಮಾಡಿದ್ದರು. ಕೆಲವು ಮೂಲಗಳ ಪ್ರಕಾರ ಕಳೆದು ಒಂದು ವರ್ಷದ ಹಿಂದೆ ಕೆಲಸ ಬಿಟ್ಟಿದ್ದರು ಎನ್ನಲಾಗಿದೆ. ಇತ್ತೀಚೆಗೆ ತೀರಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ.

ಇಂದು ಸಂಜೆ ಸುಮಾರು 5:50ರ ವೇಳೆಗೆ ಹುಸ್ಕೂರು ರೋಡ್ ಮೆಟ್ರೋ ನಿಲ್ದಾಣಕ್ಕೆ ಬಂದ 30-35 ವರ್ಷ ವಯಸ್ಸಿನ ರಾಜೇಶ್ ಹಿರೇಮಠ್, ಏಕಾಏಕಿ ಮೆಟ್ರೋ ಹಳಿಗೆ ಹಾರಿದ್ದಾರೆ. ಘಟನೆ ನಡೆದ ತಕ್ಷಣವೇ ಮೆಟ್ರೋ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ತಕ್ಷಣವೇ ರಕ್ಷಣೆಗೆ ಧಾವಿಸಿ, ಹಳಿಗೆ ಬಿದ್ದಿದ್ದ ವ್ಯಕ್ತಿಯನ್ನು ಮೇಲಕ್ಕೆತ್ತಿ ದೊಡ್ಡ ಅನಾಹುತವನ್ನು ತಪ್ಪಿಸಲು ಯತ್ನಿಸಿದರು.

ಆದರೆ, ಹಳಿಗೆ ಹಾರಿದ ರಭಸಕ್ಕೆ ರಾಜೇಶ್ ಅವರಿಗೆ ತೀವ್ರ ಸ್ವರೂಪದ ಗಂಭೀರ ಗಾಯಗಳಾಗಿದ್ದವು. ವಿಷಯ ತಿಳಿದ ತಕ್ಷಣವೇ ಹೆಬ್ಬಗೋಡಿ ಪೊಲೀಸರು ಹಾಗೂ ಮೆಟ್ರೋ ಸಿಬ್ಬಂದಿ ಸ್ಥಳಕಕ್ಕೆ ಆಗಮಿಸಿ, ಹಳಿಯ ಮೇಲೆ ಸಿಲುಕಿದ್ದ ವ್ಯಕ್ತಿಯನ್ನು ಹರಸಾಹಸ ಪಟ್ಟು ಮೇಲಕ್ಕೆತ್ತಿದ್ದರು. ಬಳಿಕ ಅಂಬ್ಯುಲೆನ್ಸ್ ಮೂಲಕ ನಗರದ ಸೆಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅದಾಗಲೇ ಅವರು ಬದುಕುಳಿಯುವ ಸಾಧ್ಯತೆ ಕಡಿಮೆ ಇತ್ತು. ಕೊನೆಗೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತದೇಹವನ್ನು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಸ್ಥಳಕ್ಕೆ ಆಗ್ನೇಯ ವಿಭಾಗದ ಡಿಸಿಪಿ ಭೇಟಿ, ಮಹಜರು

ಘಟನೆ ಸಂಭವಿಸಿದ ಹಿನ್ನೆಲೆಯಲ್ಲಿ ಆಗ್ನೇಯ ವಿಭಾಗದ ಡಿಸಿಪಿ ಮೊಹಮ್ಮದ್ ಸುಜಿತಾ ಹಾಗೂ ಹೆಬ್ಬಗೋಡಿ ಪೊಲೀಸರು ಹುಸ್ಕೂರು ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿರುವ ಪೊಲೀಸರು, ಆತ್ಮಹ*ಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ.

ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಹುಸ್ಕೂರು ರೋಡ್ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದ ಹಿನ್ನೆಲೆಯಲ್ಲಿ, ಆರ್.ವಿ. ರೋಡ್ ಹಾಗೂ ಎಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋ ಮಾರ್ಗದಲ್ಲಿ ಕೆಲ ಕಾಲ ರೈಲು ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ತೊಂದರೆ ಅನುಭವಿಸಿದರು. ಪೊಲೀಸರು ಹಾಗೂ ಮೆಟ್ರೋ ಸಿಬ್ಬಂದಿ ಸ್ಥಳದಲ್ಲಿದ್ದ ಮೃತದೇಹವನ್ನು ತೆರವುಗೊಳಿಸಿದ ಬಳಿಕ ಮೆಟ್ರೋ ಸಂಚಾರವನ್ನು ಯಥಾಸ್ಥಿತಿಗೆ ತರಲಾಯಿತು.